ಮಂಗಳೂರು (ಅ.02): ಡ್ರಗ್‌ ಲಿಂಕ್‌ನ ಮಹತ್ತರ ಬೆಳವಣಿಗೆಯಲ್ಲಿ ಮಂಗಳೂರು ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಾನಾ ಪ್ರಜೆ ಸಹಿತ ಪ್ರಮುಖ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರು ಹಾಗೂ ಮುಂಬೈಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಈಗಾಗಲೇ ಮಾದಕ ವಸ್ತುಗಳ ಮಾರಾಟಕ್ಕೆ ಸಂಬಂಧಪಟ್ಟಂತೆ ದಸ್ತಗಿರಿಯಾದ ಆರೋಪಿಗಳಾದ ಕಿಶೋರ್‌ ಅಮನ್‌ ಶೆಟ್ಟಿ, ಅಖಿಲ್‌ ನೌಶೀಲ್‌ ಮತ್ತು ಮೊಹಮ್ಮದ್‌ ಶಾಕೀರ್‌ ಎಂಬವರಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಹಾಗೂ ಎಂಡಿಎಂಎ ಫಿಲ್ಸ್‌ಗಳನ್ನು ಮಾರಾಟ ಮಾಡಿದ್ದ ಆರೋಪಿಗಳು ಇವರು. ಈ ಮೂಲಕ ಜಾಲದ ಬಹುದೊಡ್ಡ ಕೊಂಡಿಯನ್ನು ಮಂಗಳೂರು ಸಿಸಿಬಿ ಭೇದಿಸಿದೆ.

ಘಾನಾ ನಿವಾಸಿ, ಈಗ ಬೆಂಗಳೂರಲ್ಲಿ ವಾಸವಿರುವ ಫ್ರಾಂಕ್‌ ಸಂಡೇ ಇಬೆಬುಚಿ (33), ಮಂಗಳೂರು ಕೂಳೂರಿನ ಶಮೀನ್‌ ಫರ್ನಾಂಡಿಸ್‌ ಯಾನೆ ಸ್ಯಾಮ…(28), ಮುಂಬೈಯಿಂದ ಡ್ರಗ್‌ ಪೂರೈಕೆ ಮಾಡಿದ ತೊಕ್ಕೊಟ್ಟು ಹಿದಾಯತ್‌ ನಗರದ ಶಾನ್‌ ನವಾಸ್‌(34) ಬಂಧಿತರು. ಇವರಲ್ಲಿ ಇಬ್ಬರನ್ನು ಬೆಂಗಳೂರಲ್ಲಿ ಬಂಧಿಸಿದ್ದರೆ, ಶಾನ್‌ ನವಾಸ್‌ನನ್ನು ಮುಂಬೈನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳ ಪೈಕಿ ಫ್ರಾಂಕ್‌ ಸಂಡೇ ಇಬೆಬುಚಿ ಎಂಬಾತ ಘಾನಾ ದೇಶದ ಪ್ರಜೆಯಾಗಿದ್ದು, ಈತನು ಬೆಂಗಳೂರಿನಲ್ಲಿ ಸುಮಾರು 2 ವರ್ಷಗಳಿಂದ ವಾಸ್ತವ್ಯವಿದ್ದಾನೆ. ಈತನ ವಿರುದ್ಧ ಈ ಹಿಂದೆ ಬೆಂಗಳೂರು ನಗರ ಸುದ್ದಗುಂಟೆಪಾಳ್ಯ(ಎಸ್‌.ಜಿ ಪಾಳ್ಯ) ಪೊಲೀಸ್‌ ಠಾಣೆಯಲ್ಲಿ 2018ರಲ್ಲಿ ಎಂಡಿಎಂಎ ಮಾರಾಟಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿರುತ್ತದೆ. ಅಲ್ಲದೆ ಇನ್ನೋರ್ವ ಆರೋಪಿ ಶಾನ್‌ ನವಾಸ್‌ ಎಂಬಾತನ ವಿರುದ್ಧ 2019ರಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಇಕಾನಾಮಿಕ್‌ ನಾರ್ಕೋಟಿಕ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ಜಾಲ ಮಾರಾಟ ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.