ಕಾಂಗ್ರೆಸ್‌ಗೆ ಮತ್ತಷ್ಟು ಬಂಡಾಯ, ಪ್ರತಿಭಟನೆಯ ಬಿಸಿ: ಪಕ್ಷ ಬಿಡಲು ಮಾಲಕರೆಡ್ಡಿ ಪುತ್ರಿ ಸಿದ್ಧತೆ
ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಬಿಡುಗಡೆ ಹಿನ್ನೆಲೆಯಲ್ಲಿ ಉದ್ಭವಿಸಿರುವ ಟಿಕೆಟ್ ವಂಚಿತ ಕಾಂಗ್ರೆಸ್ ನಾಯಕರ ಮುನಿಸು ಮುಂದುವರೆದಿದ್ದು, ಹಲವು ಕ್ಷೇತ್ರಗಳಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ.
ಬೆಂಗಳೂರು (ಏ.09): ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಉದ್ಭವಿಸಿರುವ ಟಿಕೆಟ್ ವಂಚಿತ ಕಾಂಗ್ರೆಸ್ ನಾಯಕರ ಮುನಿಸು ಮುಂದುವರೆದಿದ್ದು, ಹಲವು ಕ್ಷೇತ್ರಗಳಲ್ಲಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಧಾರವಾಡ ಜಿಲ್ಲೆ ಕಲಘಟಗಿ ಕ್ಷೇತ್ರದ ಟಿಕೆಟ್ ವಂಚಿತ ನಾಗರಾಜ ಛಬ್ಬಿ ಶನಿವಾರ ದೆಹಲಿಗೆ ತೆರಳಿದ್ದು, ಬಿಜೆಪಿ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ತುಮಕೂರಿನಲ್ಲಿಯೂ ಅಸಮಾಧಾನ ಮುಂದುವರೆದಿದ್ದು, ಕಾಂಗ್ರೆಸ್ ಮುಖಂಡ, ಮಾಜಿ ‘ತುಮುಲ್’ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
ಅವರು ಜೆಡಿಎಸ್ ಸೇರುವ ಸಾಧ್ಯತೆಯಿದೆ. ಇದೇ ವೇಳೆ, ಜೆಡಿಎಸ್ ಸೇರಲು ಮುಂದಾಗಿರುವ ಮಾಜಿ ಎಂಎಲ್‌ಸಿ ರಘು ಆಚಾರ್ ಚಿತ್ರದುರ್ಗದಲ್ಲಿ ಭಾನುವಾರ ಬೆಂಬಲಿಗರ ಸಭೆ ಕರೆದಿದ್ದಾರೆ. ಈ ಮಧ್ಯೆ, ಶನಿವಾರ ಟಿಕೆಟ್ ವಂಚಿತ ಕಾಂಗ್ರೆಸ್ ಮುಖಂಡ ಎಸ್.ಕೆ.ಬಸವರಾಜನ್ ಅವರು ರಘು ಆಚಾರ್ ನಿವಾಸಕ್ಕೆ ತೆರಳಿ, ಅವರ ಜೊತೆ ಮಾತುಕತೆ ನಡೆಸಿದರು. ಮೊಳಕಾಲ್ಮುರು ಕ್ಷೇತ್ರದ ಟಿಕೆಟ್ ವಂಚಿತ ಮುಖಂಡ ಡಾ.ಯೋಗೀಶ್ ಬಾಬು ಅವರು ಬಿ.ಜಿ.ಕೆರೆ ಗ್ರಾಮದಲ್ಲಿ ಭಾನುವಾರ ಬೆಂಬಲಿಗರ ಸಭೆ ಕರೆದಿದ್ದು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಅಮುಲ್‌ನಿಂದ ನಂದಿನಿಗೆ ನಷ್ಟವಿಲ್ಲ: ಪೈಪೋಟಿ ಎದುರಿಸಲು ನಾವು ಸಮರ್ಥವೆಂದ ಕೆಎಂಎಫ್
ಇದೇ ವೇಳೆ, ಯಾದಗಿರಿಯಲ್ಲಿ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಅವರು ತಮ್ಮ ಪುತ್ರಿ ಡಾ.ಅನೂರಾಧಾಗೆ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದು, ಇನ್ನೆರಡು ದಿನಗಳಲ್ಲಿ ಬೆಂಬಲಿಗರ ಸಭೆ ಕರೆದು, ಜೆಡಿಎಸ್ ಸೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮಧ್ಯೆ, ಸವದತ್ತಿಯಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸೌರವ ಚೋಪ್ರಾ ತಾಯಿ ಕಾಂತಾದೇವಿ, ಮಗನಿಗೆ ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರಿಟ್ಟರು. ಬಾಗಲಕೋಟೆ ಮತಕ್ಷೇತ್ರದಲ್ಲಿ ಟಿಕೆಟ್ ಸಿಗದಿದ್ದಕ್ಕೆ ಡಾ.ದೇವರಾಜ ಪಾಟೀಲ ತೀವ್ರ ನಿರಾಶರಾಗಿದ್ದು, ಶನಿವಾರ ಬೆಂಬಲಿಗರ ಸಭೆ ನಡೆಸಿದರು. ಬೀಳಗಿ ಮತಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್‌ನ ಬಸವಪ್ರಭು ಸರನಾಡಗೌಡರ ಕೂಡ ತೀವ್ರ ಬೇಸರಗೊಂಡಿದ್ದು, ಬಂಡಾಯದ ಮುನ್ಸೂಚನೆ ನೀಡಿದ್ದಾರೆ.
ಹರಿಹರ, ತರೀಕೆರೆಯಲ್ಲಿ ಪ್ರತಿಭಟನೆ: ಇದೇ ವೇಳೆ, ಹರಿಹರ ಶಾಸಕ ಎಸ್.ರಾಮಪ್ಪಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಹರಿಹರದಲ್ಲಿ, ದೋರನಾಳು ಪರಮೇಶ್‌ಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ತರೀಕೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಅಮುಲ್ VS ನಂದಿನಿ ಫೈಟ್: ಗುಜರಾತ್ ಕಂಪನಿ ವಿರುದ್ಧ ರಾಜ್ಯದಲ್ಲಿ ಜನಾಕ್ರೋಶ
ಎಲ್ಲೆಲ್ಲಿ ಬಂಡಾಯ ಉಲ್ಬಣ?
ಕಲಘಟಗಿ ನಾಗರಾಜ ಛಬ್ಬಿ (ದೆಹಲಿಗೆ ಭೇಟಿ, ಬಿಜೆಪಿಯಿಂದ ಸ್ಪರ್ಧೆ ಸಾಧ್ಯತೆ)
ತುಮಕೂರು ಕೊಂಡವಾಡಿ ಚಂದ್ರಶೇಖರ್ (ರಾಜೀನಾಮೆ, ಜೆಡಿಎಸ್ ಸೇರುವ ಸಾಧ್ಯತೆ)
ಚಿತ್ರದುರ್ಗ ರಘು ಆಚಾರ್ (ಭಾನುವಾರ ಬೆಂಬಲಿಗರ ಸಭೆ)
ಮೊಳಕಾಲ್ಮುರು ಡಾ.ಯೊಗೀಶ್ ಬಾಬು (ಭಾನುವಾರ ಬೆಂಬಲಿಗರ ಸಭೆ, ಬಂಡಾಯ ಸ್ಪರ್ಧೆ ಸಾಧ್ಯತೆ)
ಯಾದಗಿರಿ ಡಾ.ಅನೂರಾಧಾ ಮಾಲಕರೆಡ್ಡಿ (ಜೆಡಿಎಸ್ ಸೇರ್ಪಡೆ ಸಾಧ್ಯತೆ)
ಬಾಗಲಕೋಟೆ ಡಾ.ದೇವರಾಜ ಪಾಟೀಲ (ಬೆಂಬಲಿಗರ ಸಭೆ)
ಬೀಳಗಿ ಬಸವಪ್ರಭು ಸರನಾಡಗೌಡರ (ಬೆಂಬಲಿಗರ ಸಭೆ)
ಸವದತ್ತಿ ಸೌರವ ಚೋಪ್ರಾ ತಾಯಿ ಕಾಂತಾದೇವಿ ಕಣ್ಣೀರು