ಶಾಮಣ್ಣ ಗಾರ್ಡನ್‌ನ ಜಮೀರ್‌ ಅಹಮ್ಮದ್‌ ಹಾಗೂ ಗಂಗೊಂಡನಹಳ್ಳಿಯ ಸೈಯದ್‌ ಶಾಹೀದ್‌ ಬಂಧಿತರಾಗಿದ್ದು, ಆರೋಪಿಗಳಿಂದ 57 ಲಕ್ಷ ರು. ಮೌಲ್ಯದ ಟೈಟಾನ್‌ ಕಂಪನಿಯ 1282 ವಾಚ್‌ಗಳನ್ನು ಜಪ್ತಿ.

ಬೆಂಗಳೂರು(ಜ.25): ಇತ್ತೀಚಿಗೆ ಜವರೇಗೌಡನದೊಡ್ಡಿ ರಸ್ತೆಯ ಮಹಾರಾಜ ಬಾರ್‌ ಬಳಿ ಪ್ರತಿಷ್ಠಿತ ಖಾಸಗಿ ಕಂಪನಿಯ ವಾಚ್‌ಗಳನ್ನು ಸಾಗಿಸುತ್ತಿದ್ದ ಟೆಂಪೋವನ್ನು ಅಡ್ಡಗಟ್ಟಿ 57 ಲಕ್ಷ ರು. ಮೌಲ್ಯದ ವಾಚ್‌ಗಳನ್ನು ದೋಚಿದ್ದ ಇಬ್ಬರು ಕಿಡಿಗೇಡಿಗಳನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಾಮಣ್ಣ ಗಾರ್ಡನ್‌ನ ಜಮೀರ್‌ ಅಹಮ್ಮದ್‌ ಹಾಗೂ ಗಂಗೊಂಡನಹಳ್ಳಿಯ ಸೈಯದ್‌ ಶಾಹೀದ್‌ ಬಂಧಿತರಾಗಿದ್ದು, ಆರೋಪಿಗಳಿಂದ 57 ಲಕ್ಷ ರು. ಮೌಲ್ಯದ ಟೈಟಾನ್‌ ಕಂಪನಿಯ 1282 ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಜ.15 ರಂದು ರಾತ್ರಿ 10.30ರಲ್ಲಿ ಜವರೇಗೌಡನದೊಡ್ಡಿ ಸಮೀಪದ ಕೊರಿಯರ್‌ ಕಂಪನಿಯ ವೇರ್‌ಹೌಸ್‌ನ ಕೆಲಸಗಾರ ಜಾನ್‌ ಹಾಗೂ ಬಿಸಾಲ್‌ ಅವರು, ನಾಯಂಡಹಳ್ಳಿ ಬಳಿ ಸಿಗರೇಟ್‌ ಖರೀದಿಸಿ ಮರಳುವಾಗ ಈ ಕೃತ್ಯ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Bengaluru: ಕಾಲೇಜಿನ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿದ್ದ ಆರೋಪಿ ಬಂಧನ

ಕೃತ್ಯದ ವಿವರ: 

ಆರ್‌.ಆರ್‌.ನಗರದ ಜವರೇಗೌಡ ನಗರದಲ್ಲಿ ಜೈದೀಪ್‌ ಎಂಟರ್‌ ಪ್ರೈಸಸ್‌ ಹೆಸರಿನ ಕೊರಿಯರ್‌ ಆಫೀಸ್‌ನ ವೇರ್‌ಹೌಸ್‌ ಇದ್ದು, ಈ ವೇರ್‌ ಹೌಸ್‌ಗೆ ಜ.15 ರಂದು ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿದ್ದ ಫ್ಲಿಪ್‌ಕಾರ್ಚ್‌ ಕಂಪನಿ ಮೂಲಕ ಟೈಟಾನ್‌ ಕಂಪನಿಯ 57 ಲಕ್ಷ ರು. ಮೌಲ್ಯದ 1282 ವಾಚ್‌ಗಳಿದ್ದ 23 ಬಾಕ್ಸ್‌ಗಳನ್ನು ಟೆಂಪೋದಲ್ಲಿ ತರಲಾಗಿತ್ತು. ಆದರೆ ವೇರ್‌ಹೌಸ್‌ನಲ್ಲಿ ಕೆಲಸಗಾರದ ಜಾನ್‌ ಮತ್ತು ಬಿಸಾಲ್‌, ಅದೇ ದಿನ ರಾತ್ರಿ 10.30ರಲ್ಲಿ ಸಿಗರೇಟ್‌ ತರಲೆಂದು ವಾಚ್‌ಗಳನ್ನು ತುಂಬಿಡಲಾಗಿದ್ದ ವಾಹನವನ್ನು ತೆಗೆದುಕೊಂಡು ನಾಯಂಡಹಳ್ಳಿಗೆ ಹೋಗಿದ್ದರು. ಅಲ್ಲಿಂದ ಮರಳುವಾಗ ಜವರೇಗೌಡದೊಡ್ಡಿ ರಸ್ತೆಯ ಮಹಾರಾಜ ಬಾರ್‌ ಬಳಿ ಕಾರು ಮತ್ತು 3 ದ್ವಿಚಕ್ರ ವಾಹನಗಳಲ್ಲಿ ಐದಾರು ಬಂದಿ ಅಪರಿಚಿತರು, ಟೆಂಪೋವನ್ನು ಅಡ್ಡಗಟ್ಟಿಜಾನ್‌ ಹಾಗೂ ಬಿಸಾಲ್‌ರವರಿಗೆ ಬೆದರಿಕೆ ಹಾಕಿ ಮಾಲಿನ ಸಮೇತ ಟೆಂಪೋ ತೆಗೆದುಕೊಂಡು ಹೋಗಿದ್ದರು. ಕೆಲ ಹೊತ್ತಿನ ಬಳಿಕ ವಾಚ್‌ಗಳಿದ್ದ ಬಾಕ್ಸ್‌ಗಳನ್ನು ತೆಗೆದುಕೊಂಡು ಅದೇ ಸ್ಥಳದಲ್ಲೇ ಟೆಂಪೋ ಬಿಟ್ಟು ಹೋಗಿದ್ದರು ಈ ಬಗ್ಗೆ ಆರ್‌.ಆರ್‌.ನಗರ ಪೊಲೀಸ್‌ ಠಾಣೆಗೆ ವೇರ್‌ ಹೌಸ್‌ನ ವ್ಯವಸ್ಥಾಪಕ ಹನುಮೇಗೌಡ ದೂರು ಸಲ್ಲಿಸಿದ್ದರು. ಅದರನ್ವಯ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.