*   ಬೆಂಗಳೂರಿನ ಅಮರಜ್ಯೋತಿ ಲೇಔಟ್‌ನ ಮುಖ್ಯರಸ್ತೆಯಲ್ಲಿ ನಡೆದ ಘಟನೆ*   2.15 ಲಕ್ಷ ರು. ಮೌಲ್ಯದ ವಸ್ತು ಜಪ್ತಿ*  ಹ್ಯಾಂಡಲ್‌ ಲಾಕ್‌ ಮುರಿದು ಬೈಕ್‌ಗಳ ಕಳವು ಮಾಡ್ತಿದ್ದ

ಬೆಂಗಳೂರು(ಮಾ.22): ಆಟೋದಲ್ಲಿ ಹಿಂಬಾಲಿಸಿ ನಡೆದು ಹೋಗುವವರನ್ನು ಅಡ್ಡಗಟ್ಟಿ ದರೋಡೆ(Robbery) ಮಾಡುತ್ತಿದ್ದ ಇಬ್ಬರು ಕುಖ್ಯಾತ ದರೋಡೆಕೋರರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ಶಿವಾಜಿನಗರ ಮಹಮ್ಮದ್‌ ಅರ್ಬಾಜ್‌(24) ಮತ್ತು ಥಣಿಸಂದ್ರದ ಸೈಯದ್‌ ಅರ್ಬಾಜ್‌(24) ಬಂಧಿತರು(Arrest). ಆರೋಪಿಗಳಿಂದ(Accused) ಚಿನ್ನದ ಸರ, ಬೆಳ್ಳಿಯ ಸರ, ಒಂದು ಮೊಬೈಲ್‌, ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಸೇರಿದಂತೆ ಒಟ್ಟು 2.15 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಾ.3ರಂದು ಅಮರಜ್ಯೋತಿ ಲೇಔಟ್‌ನ ಮುಖ್ಯರಸ್ತೆಯಲ್ಲಿ ರಾತ್ರಿ 8.15ರ ಸುಮಾರಿಗೆ ಅಜಿತ್‌ ಎಂಬುವವರು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಟೋರಿಕ್ಷಾದಲ್ಲಿ ಬಂದಿರುವ ಆರೋಪಿಗಳು, ಅಜಿತ್‌ ಅವರಿಂದ ಚಿನ್ನ ಹಾಗೂ ಬೆಳ್ಳಿಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Gadag Crime: ಹೆಂಡ್ತಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಇಜಾಜ್‌ ಅರೆಸ್ಟ್‌

ಆರೋಪಿಗಳು ವೃತ್ತಿಪರ ದರೋಡೆಕೋರರಾಗಿದ್ದು, ಈ ಹಿಂದೆ ಸಂಪಿಗೆಹಳ್ಳಿ, ಅಮೃತಹಳ್ಳಿ, ಬಾಸಣವಾಡಿ, ಕಬ್ಬನ್‌ ಪಾರ್ಕ್ ಹಾಗೂ ಸಂಜಯನಗರ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದರೋಡೆ, ಸುಲಿಗೆ, ಕಳವು ಮೊದಲಾದ ಅಪರಾಧ ಪ್ರಕರಣಗಳು ಭಾಗಿಯಾಗಿದ್ದಾರೆ. ಆರೋಪಿಗಳು ಆಟೋ ರಿಕ್ಷಾದಲ್ಲಿ ನಗರದ ವಿವಿಧೆಡೆ ಸುತ್ತಾಡಿ, ಕಡಿಮೆ ಜನಂದಣಿಯಿರುವ ರಸ್ತೆಗಳಲ್ಲಿ ನಡೆದು ಹೋಗುವವರನ್ನು ಹಿಂಬಾಲಿಸಿ ಮೊಬೈಲ್‌, ಆಭರಣ ದರೋಡೆ ಮಾಡಿ ಪರಾರಿಯಾಗುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಲ್ಲಿನಿಂದ ಜಜ್ಜಿ ಕೊಲೆ: ಆರೋಪಿ ಬಂಧನ

ಮೂಲ್ಕಿ: ಇಲ್ಲಿನ ಬಸ್‌ ನಿಲ್ದಾಣದ ಕಾರು ಪಾರ್ಕ್ ಬಳಿ ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಕಿನ್ನಿಗೋಳಿ ಸಮೀಪದ ಉಲ್ಲಂಜೆ ಜುಮಾದಿ ಗುಡ್ಡೆ ನಿವಾಸಿ ಹರೀಶ್‌ ಸಾಲ್ಯಾನ್‌ ( 47) ಎಂಬವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ತಮಿಳುನಾಡು(Tamil Nadu) ನಿವಾಸಿ ಹಳೆಯಂಗಡಿ ಸಮೀಪದ ತೋಕೂರು ಎಂಬಲ್ಲಿ ವಾಸ್ತವ್ಯವಿರುವ ಮುರುಗನ್‌(46) ಎಂಬಾತನನ್ನು ಮೂಲ್ಕಿ ಪೊಲೀಸರು ಬಂಧಿಸಿ ಸೋಮವಾರ ಸಂಜೆ ನ್ಯಾಯಾಲಯಕ್ಕೆ(Court) ಹಾಜರುಪಡಿಸಿದ್ದಾರೆ.

ಇಬ್ಬರೂ ಮದ್ಯ(Alcohol) ಸೇವಿಸಿ ಕೂಲಿ ವಿಷಯದಲ್ಲಿ ಮೂಲ್ಕಿಯ ಕಾರ್‌ಪಾರ್ಕ್ ಬಳಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ತಾರಕಕ್ಕೇರಿ ಮುರುಗನ್‌, ಹರೀಶ್‌ ಸಾಲ್ಯಾನ್‌ ಅವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇವರಿಬ್ಬರು ಗಲಾಟೆ ಮಾಡಿಕೊಂಡಿರುವ ದೃಶ್ಯ ಮೂಲ್ಕಿ ಬಸ್‌ ನಿಲ್ದಾಣದ ಬಳಿಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ನಡೆಸಿ ಆರೋಪಿ ಮುರುಗನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಹ್ಯಾಂಡಲ್‌ ಲಾಕ್‌ ಮುರಿದು ಬೈಕ್‌ಗಳ ಕಳವು ಮಾಡ್ತಿದ್ದ

ಬೆಂಗಳೂರು: ಮನೆ ಹಾಗೂ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ.ಹಳ್ಳಿ ವಿನೋಬಾ ನಗರದ ಶೇಖ್‌ ಮುದಾಸೀರ್‌ ಅಹಮ್ಮದ್‌ ಅಲಿಯಾಸ್‌ ಮುದ್ದು(33) ಮತ್ತು ಶಿವಾಜಿನಗರ ಬ್ರಾಡ್‌ ವೇ ರಸ್ತೆಯ ಸೈಯದ್‌ ನಾಜೀಮ್‌ ಅಲಿಯಾಸ್‌ ಡ್ಯಾನಿ(25) ಬಂಧಿತರು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 2.37 ಲಕ್ಷ ರು. ಮೌಲ್ಯದ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಸಂಪಿಗೆಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಮೂರು ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ಮದ್ಯದ ಅಮಲಿನಲ್ಲಿ ಪೊಲೀಸರಿಗೇ ಗುದ್ದಿದ ಬೈಕ್ ಸವಾರ..!

ಸಂಪಿಗೆಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅಗ್ರಹಾರ ಬಡಾವಣೆಯಲ್ಲಿ ಫೆ.28ರಂದು ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದು, ಮನೆ ಎದುರು, ಪಾರ್ಕಿಂಗ್‌ ಸ್ಥಳಗಳು, ಕಚೇರಿಗಳ ಎದುರು ನಿಲುಗಡೆ ಮಾಡಿದ ದ್ವಿಚಕ್ರವಾಹನಗಳನ್ನು ಟಾರ್ಗೆಟ್‌ ಮಾಡಿ ರಾತ್ರಿ ವೇಳೆ ಹ್ಯಾಂಡಲ್‌ ಲಾಕ್‌ ಮುರಿದು ಕದ್ದು ಪರಾರಿಯಾಗುತ್ತಿದ್ದರು. ಬಳಿಕ ಗಿರಾಕಿಗಳನ್ನು ಹುಡುಕಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಈ ಹಿಂದೆ ಆರೋಪಿಗಳು ಭಾರತಿನಗರ, ಶಿವಾಜಿನಗರ, ಕಮರ್ಷಿಯಲ್‌ ಸ್ಟ್ರೀಟ್‌, ಕಬ್ಬನ್‌ ಪಾರ್ಕ್, ಉಪ್ಪಾರಪೇಟೆ, ಮಾರತ್‌ಹಳ್ಳಿ, ಶೇಷಾದ್ರಿಪುರಂ ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಅಪರಾಧಕೃತ್ಯಗಳಲ್ಲಿ ಭಾಗಿಯಾಗಿದ್ದು ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ಬಳಿಕವೂ ಕಳವು ಕೃತ್ಯ ಮುಂದುವರಿಸಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.