ಬೆಂಗಳೂರು: ಗಂಡನ ಉಸಿರುಗಟ್ಟಿಸಿ ಕೊಂದು ಶೌಚ ಗುಂಡಿಗೆ ಎಸೆದವಳ ಬಂಧನ
ಕೋಗಿಲು ಲೇಔಟ್ ನಿವಾಸಿಗಳಾದ ನಾಜೀಯಾ ಖಾತುಂ ಹಾಗೂ ಆಕೆಯ ತಂಗಿ ಕಾಶೀರಿ ಖಾತುಂ ಬಂಧಿತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಪತಿ ಶಕೀಲ್ ಅಖ್ತರ್ ಸೈಫಿನನ್ನು ಹತ್ಯೆಗೈದಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.

ಬೆಂಗಳೂರು(ಅ.20): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯನ್ನು ಕೊಂದು ಬಳಿಕ ಮನೆ ಸಮೀಪದ ಶೌಚದ ಗುಂಡಿಗೆ ಮೃತದೇಹವನ್ನು ಎಸೆದಿದ್ದ ಮೃತನ ಪತ್ನಿ ಹಾಗೂ ಆತನ ನಾದಿನಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಗಿಲು ಲೇಔಟ್ ನಿವಾಸಿಗಳಾದ ನಾಜೀಯಾ ಖಾತುಂ ಹಾಗೂ ಆಕೆಯ ತಂಗಿ ಕಾಶೀರಿ ಖಾತುಂ ಬಂಧಿತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಪತಿ ಶಕೀಲ್ ಅಖ್ತರ್ ಸೈಫಿನನ್ನು ಹತ್ಯೆಗೈದಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.
ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಗಂಡ
2018ರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಶಕೀಲ್ ಹಾಗೂ ನಾಜಿಯಾ ವಿವಾಹವಾಗಿದ್ದು, ಕೋಗಿಲು ಲೇಔಟ್‌ನಲ್ಲಿ ದಂಪತಿ ನೆಲೆಸಿದ್ದರು. ಕೌಟುಂಬಿಕ ಕಾರಣಕ್ಕೆ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಅಲ್ಲದೆ ಪರಸ್ತ್ರೀ ಜತೆ ಶಕೀಲ್ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ವಿರೋಧಿಸಿದ ಪತ್ನಿ ಮೇಲೆ ಗಲಾಟೆ ಮಾಡುತ್ತಿದ್ದ. ಪ್ರತಿದಿನ ಪತ್ನಿಗೆ ಹೊಡೆದು ಆತ ಕಿರುಕುಳ ಕೊಡುತ್ತಿದ್ದ. ತನ್ನ ಪತಿ ಗಲಾಟೆ ವಿಚಾರವನ್ನು ತಂಗಿ ಕಾಶ್ಮೀರಿ ಬಳಿ ಹೇಳಿಕೊಂಡು ನಾಜಿಯಾ ಕಣ್ಣೀರಿಟ್ಟಿದ್ದಳು. ಕೊನೆಗೆ ಪತಿ ಕೊಲೆಗೆ ನಿರ್ಧರಿಸಿದ್ದ ನಾಜಿಯಾಗೆ ತಂಗಿ ಸಹಕರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅ.10ರಂದು ರಾತ್ರಿ ಮನೆಯಲ್ಲಿ ಪತಿ ಗಲಾಟೆ ಮಾಡಿದ್ದಾನೆ, ನಂತರ ಪತಿ ನಿದ್ರೆಗೆ ಜಾರಿದ ಬಳಿಕ ಆತನನ್ನು ಉಸಿರುಗಟ್ಟಿಸಿ ಹತ್ಯೆಗೈದ ಅಕ್ಕ-ತಂಗಿ, ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಕೊಂಡು ಬಂದು ಮನೆ ಮುಂದಿನ ಶೌಚದ ಗುಂಡಿಗೆ ಎಸೆದಿದ್ದರು. ಎರಡು ದಿನಗಳ ಬಳಿಕ ಮೃತದೇಹ ಕೊಳೆತು ವಾಸನೆ ಬಂದಿದೆ. ಆಗ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ತಮ್ಮ ಸೋದರ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ಸಂಪಿಗೆಹಳ್ಳಿ ಠಾಣೆಗೆ ಮೃತನ ಸೋದರ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಶಂಕೆ ಮೇರೆಗೆ ಮೃತನ ಪತ್ನಿಯನ್ನು ವಿಚಾರಣೆ ಗೊಳಪಡಿಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ.