Asianet Suvarna News Asianet Suvarna News

ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ‌ ಮಾಡಿದ ಗಂಡ

ಅತಿಯಾಗಿ ಪ್ರೀತಿಸಿದ್ದ ಪತ್ನಿಯ ಕತ್ತು ಸೀಳಿ ಕೊಲೆ‌‌ ಮಾಡಿದ ಪತಿ ಮಹಾಶಯ, ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾದ್ರೂ ಸಾರ್ವಜನಿಕರ ಸಹಾಯದಿಂದ ಆರೋಪಿಯ ಬಂಧನ. 

Husband Killed His Wife at Karwar in Uttara Kannada grg
Author
First Published Oct 19, 2023, 12:00 AM IST

ಭರತ್‌ ರಾಜ್ ಕಲ್ಲಡ್ಕ ಜತೆ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ(ಅ.19):  ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿ ಸಪ್ತಪದಿ ತುಳಿದು ದಾಂಪತ್ಯದ ಬಾಂಧವ್ಯಕ್ಕೆ ಬೆಸೆದುಕೊಂಡಿದ್ದರು. ಅವರ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ ಆ ಚಟ ಕೊನೆಗೆ ಕೊಲೆಯಲ್ಲಿ ಇತಿಶ್ರೀ ಹಾಡಿಸಿದೆ. ಹಲವು ವರ್ಷಗಳಿಂದ ನಮ್ಮ ಜೀವನ ದಿನವೂ ಮಿಗೋ ಚೈತ್ರವೇ ಎಂದು ಹಾಡುತ್ತಿದ್ದ ಗಂಡ ಕೊಲೆ ಮಾಡಿ ಜೈಲು ಸೇರಿದ್ರೆ, ಪತ್ನಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ. ಅಷ್ಟಕ್ಕೂ ಆ ದಂಪತಿಗಳು ಯಾರು..? ಅವರ ಜೀವನದಲ್ಲಿ ಬಿರುಗಾಳಿ ತಂದ ವಿಷಯವಾದ್ರೂ ಯಾವುದು..? ಈ ಸ್ಟೋರಿ ನೋಡಿ....

ಹೌದು, ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೋರ್ವ ತನ್ನ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ‌ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ ಸಬ್ಬತ್ತಿ ಕ್ರಾಸ್‌ನಲ್ಲಿ ನಡೆದಿದೆ. ಮುರುಡೇಶ್ವರ ನಿವಾಸಿ ನಂದಿನಿ ಲೋಕೇಶ ನಾಯ್ಕ(30) ಮೃತ ಮಹಿಳೆಯಾಗಿದ್ದು, ಈಕೆಯ ಪತಿ, ಶಿಲ್ಪಿ ಕೆಲಸ ಮಾಡುತ್ತಿದ್ದ ಮುರುಡೇಶ್ವರ ನಾಡವರ ಕೇರಿ ನಿವಾಸಿ ಲೋಕೇಶ ನಾಯ್ಕ (34) ಎಂಬಾತನೇ ತನ್ನ‌ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ ಆರೋಪಿ. 12 ವರ್ಷದ ಓರ್ವ ಪುತ್ರ ಹಾಗೂ 10 ವರ್ಷದ ಓರ್ವ ಪುತ್ರಿಯನ್ನು ಹೊಂದಿದ್ದ ದಂಪತಿ ನಡುವಿನ ಕಲಹವೇ ಕೊಲೆಗೆ ಪ್ರಮುಖ ಕಾರಣವಾಗಿದೆ.

Uttara Kannada: ಮೊದಲ ಪತ್ನಿಯಿದ್ದರೂ ಎರಡನೇಯವಳ ಜತೆ ಸಂಸಾರ ಮಾಡುತ್ತಿದ್ದ ಭೂಪ!

ಕಳೆದ 3 ದಿನಗಳ ಹಿಂದೆಯಷ್ಟೇ ಮುರಡೇಶ್ವರದ ಸಬ್ಬತ್ತಿ ಕ್ರಾಸ್‌ನಲ್ಲಿರುವ ಮನೆಯೊಂದರಲ್ಲಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ ಆರೋಪಿ, ಪತ್ನಿಯ ಜತೆ ಜಗಳವಾಡಿ ಮಂಗಳವಾರ ಸಂಜೆ ಸುಮಾರು 7.30ರ ಅಂದಾಜಿಗೆ ಆಕೆಗೆ ಮಚ್ಚಿನಿಂದ ಹೊಡೆದಿದ್ದ. ಗಂಭೀರ ಗಾಯಗೊಂಡ ಮಹಿಳೆ ರಕ್ತದ ಮಡುವಿನಲ್ಲೇ ಹೊರಗೆ ಒಡಿಬಂದಿದ್ದಳಾದ್ರೂ ಅಲ್ಲಿಗೆ ಅಟ್ಟಾಡಿಸಿಕೊಂಡು ಬಂದ ಆರೋಪಿ ಆಕೆಯ ಕುತ್ತಿಗೆಗೆ ಮಚ್ಚು ಬೀಸಿದ್ದ. ರಕ್ತದೋಕುಳಿಯೊಂದಿಗೆ ನೆಲಕ್ಕೆ ಬಿದ್ದ ಮಹಿಳೆ ಅಲ್ಲೇ ನರಳಾಡಿ ಕೊನೆಯುಸಿರೆಳೆದಿದ್ದಳು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ನೋಡಿ ಆರೋಪಿ ಲೋಕೇಶ ಸುಬ್ಬ ನಾಯ್ಕ್ ಸ್ಥಳದಿಂದ ಪರಾರಿಯಾಗಿದ್ದ. ಮಹಿಳೆಯ ಗೊಬ್ಬೆ ಕೇಳಿ ಹೊರಕ್ಕೆ ಬಂದ ಪಕ್ಕದ ಮನೆಯವರು ಮಹಿಳೆ ಕೊಲೆಯಾಗಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು. ತಕ್ಷಣ ಸ್ಥಳಕ್ಕೆ ಬಂದ ಸಿಪಿಐ ಸಂತೋಷ ಕಾಯ್ಕಿಣಿ ಮತ್ತು ತಂಡ ತನಿಖೆ ಪ್ರಾರಂಭಿಸಿ ಆರೋಪಿಯ ಪತ್ತೆ ಕಾರ್ಯಾಚರಣೆಗೆ ಇಳಿದಿತ್ತು. ನಿನ್ನೆ ಮುರುಡೇಶ್ವರ ರೈಲು ನಿಲ್ದಾಣದಕ್ಕೆ ಹೋಗುವ ದಾರಿಯಲ್ಲಿ ತಿರುಗಾಡಿದ್ದ‌ ಆರೋಪಿ, ಇಂದು ಬೆಳಗ್ಗೆ ಮುರುಡೇಶ್ವರದ ಖಾಸಗಿ ಹೋಟೆಲ್ ಹಿಂಭಾಗದಲ್ಲಿ ತಿರುಗಾಡುತ್ತಿದ್ದಾಗ ಸಾರ್ವಜನಿಕರ ಸಹಕಾರಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆ ನಂದಿನಿ ದಾರುಣವಾಗಿ ಸಾವಿಗೀಡಾದದ್ದನ್ನು ನೋಡಿ ಆಕೆಯ ಮಕ್ಕಳ ಹಾಗೂ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

ಆರೋಪಿ ಲೋಕೇಶ್ ಹಾಗೂ ಮೃತ ಮಹಿಳೆ ನಂದಿನಿ ಸುಮಾರು 15 ವರ್ಷಗಳಿಂದ ಪ್ರೀತಿ ಮಾಡಿ 13 ವರ್ಷಗಳ ಹಿಂದೆ ಮದುವೆಯಾಗಿ ಸಂಸಾರ ಪ್ರಾರಂಭ ಮಾಡಿದ್ರು. ಮೂರ್ತಿ ಶಿಲ್ಪ ಕಲಾವಿದನಾಗಿದ್ದ ಆರೋಪಿ ಲೋಕೇಶ್ ಸುಮಾರು 15 ವರ್ಷಗಳ ಹಿಂದೆ ದೇವಸ್ಥಾನದ ಕಲಾಕೃತಿಗಳ ಕೆತ್ತನೆಗೆ ಮಂಗಳೂರಿಗೆ ತೆರಳಿದ್ದ ವೇಳೆ ನಂದಿನಿಯ ಪರಿಚಯವಾಗಿತ್ತು. ಮಂಗಳೂರು ಉಳ್ಳಾಲ ಮೂಲದ ಜಿಎಸ್‌ಬಿ ಕುಟುಂಬಕ್ಕೆ ಸೇರಿದ್ದ ನಂದಿನಿಯನ್ನು ಲೋಕೇಶ್ ಕುಟುಂಬ ಸಂತೋಷವಾಗಿಯೇ ಸ್ವಾಗತಿಸಿತ್ತು.‌ ಕೂಡು ಕುಟುಂಬವಿದ್ದ ಮನೆಯಲ್ಲಿ ಒಬ್ಬೊಬ್ಬರು ಬೇರೆ ಬೇರೆ ಮನೆ ಮಾಡಿಕೊಂಡ ಬಳಿಕ ಲೋಕೇಶ ನಾಯ್ಕ ಕುಟುಂಬ ಮಾತ್ರ ಮುರುಡೇಶ್ವರದಲ್ಲಿತ್ತು. ತಂದೆ, ತಾಯಿ, ಮಗ, ಸೊಸೆ ಹಾಗೂ ಮಕ್ಕಳಿಬ್ಬರು ಮಾತ್ರ ಮರುಡೇಶ್ವರದ ಮನೆಯಲ್ಲಿದ್ದರು. ಆದ್ರೆ, ಕಳೆದ ಮೂರು ವರ್ಷಗಳಿಂದ ಮೃತ ಮಹಿಳೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಚಟ ಪ್ರಾರಂಭವಾಗಿತ್ತು. ಸಂಪರ್ಕವಾದವರ ಜತೆ ಕ್ಲೋಸ್ ಚ್ಯಾಟಿಂಗ್ ಹಾಗೂ ರಾತ್ರಿ 12 ಗಂಟೆಯ ನಂತ್ರ ಮನೆಯಿಂದ ಹೊರಕ್ಕೆ ತೆರಳಿ ಬೆಳಗ್ಗೆ 4 ಗಂಟೆಗೆ ಬರುತ್ತಿದ್ದಳು ಎಂಬ ಆರೋಪ ಕೂಡ ಕೇಳಿ ಬಂದಿದೆ. 

ಗಂಡ ಶಿಲ್ಪಿಯಾಗಿದ್ದರಿಂದ ಬೇರೆ ಬೇರೆ‌ ಊರಿಗೆ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಪತ್ನಿಯದ್ದೇ ಕಾರುಬಾರಾಗಿತ್ತು. ಈವರೆಗೆ ಮೂರ್ನಾಲ್ಕು ಬಾರಿ ಮನೆ ಬಿಟ್ಟು ಬೇರೆಯವರ ಜತೆ ತೆರಳಿದ್ದಳು ಎಂದು ಸಂಬಂಧಿಕರು ಆರೋಪಿಸುತ್ತಿದ್ದು, ಎಷ್ಟು ಬಾರಿ ಪತ್ನಿ ಬೇರೆಯವರ ಜತೆ  ಹೋದರೂ ತನ್ನ ಜೀವನಕ್ಕೆ, ಮಕ್ಕಳ  ಭವಿಷ್ಯಕ್ಕೆ ಪತ್ನಿ ಬೇಕೆಂದು ಮತ್ತೆ ಮನೆಗೆ ಪತಿ ಕರೆ ತರುತ್ತಿದ್ದ ಎನ್ನಲಾಗಿದೆ. ಕಳೆದ ಮೂವತ್ತು ದಿನಗಳ ಹಿಂದೆಯೂ ಕಡೂರಿನ ಬೀರೂರಿನಲಿ ಬೇರೆಯವನ ಜತೆ ತೆರಳಿದ್ದಾಗ ಪರಿಚಯಸ್ಥರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು.‌‌ ಗಂಡ ಹಾಗೂ ಸಂಬಂಧಿಕರು ಅಲ್ಲಿಗೂ ತೆರಳಿ ಮಹಿಳೆಯನ್ನು ವಾಪಾಸ್ ಕರೆದುಕೊಂಡು ಬಂದಿದ್ದರು. ಸಂಬಂಧಿಕರು ಬುದ್ಧಿವಾದ ಹೇಳಿ ಗಂಡನ ಜತೆ ಮನೆಗೆ ಕಳುಹಿಸಿದ್ದರು

ಕಡೂರಿನಿಂದ ಮನೆಗೆ ಕರೆದುಕೊಂಡು ಬಂದ 3ನೇ ದಿನಕ್ಕೆ ನನಗೆ ಗಂಡ ಹಾಗೂ ಮಕ್ಕಳು ಬೇಡ, ನನ್ನಷ್ಟಕ್ಕೇ ಬಿಡಿ ಅಂತಾ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ಮತ್ತೆ ಪಟ್ಟು ಹಿಡಿದಿದ್ದಳು. ಪತ್ನಿ ವಾಪಾಸ್ ಬಿಟ್ಟು ಹೋದರೂ ಪತಿ ಲೋಕೇಶ್ ಮಾತ್ರ ಮತ್ತೆ ಪತ್ನಿಯನ್ನು ಕರೆದುಕೊಂಡು ಬಂದಿದ್ದ. ಆದರೆ, ದುರದೃಷ್ಟವಶಾತ್ ಕಳೆದ 20 ದಿನಗಳ ಹಿಂದೆ ಸೊಸೆಯ ಇದೇ ಕೃತ್ಯದಿಂದ ಮರ್ಯಾದೆಗೆ ಅಂಜಿ ಮಾವ ಸುಬ್ಬ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯ ಬಳಿಕ ಇತ್ತೀಚೆಗೆ ಸಂಬಂಧಿಕರು ಬೇರೆ ಮದುವೆ ಆಗಲು ಲೋಕೇಶ್‌ಗೆ ತಿಳಿಸಿದ್ದರು. ಆದರೂ ಪತ್ನಿ ಹಾಗೂ ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಲೋಕೇಶ್, ಕಳೆದ ಮೂರು ದಿನಗಳ ಹಿಂದೆಯಷ್ಟೇ ಪತ್ನಿ ಜತೆ ಮತ್ತೆ ಹೊಸ ಜೀವನ ಮಾಡಬೇಕೆಂಬ ಉದ್ದೇಶದಿಂದ ಮುರುಡೇಶ್ವರದ ಸಬ್ಬತ್ತಿ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಹೊಸದಾಗಿ ಕಬೋರ್ಡ್, ಚಪಾತಿ ಮಣೆಯನ್ನೆಲ್ಲಾ ಖರೀದಿ ಮಾಡಿದ್ದ. 

ಕುಮಟಾ: ಬೀಚ್ ರೆಸಾರ್ಟ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ, ಇಬ್ಬರ ಬಂಧನ

ಮಂಗಳವಾರ ರಾತ್ರಿ ಊಟ ಬಡಿಸುವ ವಿಚಾರಕ್ಕೆ ತಗಾದೆ ಪ್ರಾರಂಭವಾಗಿದ್ದು, ಎಷ್ಟು ಹೊತ್ತಾದರೂ ನಂದಿನಿ ಮೊಬೈಲ್ ಬಿಟ್ಟು ಏಳದ್ದನ್ನು ಕಂಡು ಪತಿ ಲೋಕೇಶ್ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಇದರಿಂದ ಕೋಪಗೊಂಡ ಪತಿ ಯಾರಿಗೆ ಕರೆ ಮಾಡ್ತಿರುವುದಾಗಿ ಕೇಳಿದಾಗ ಪತಿ ಹಾಗೂ ಪತ್ನಿ ನಡುವೆ ಜಗಳವಾಗಿತ್ತು. ಏನಾದರೂ ಸೀಕ್ರೆಟ್ ಬಿಟ್ಟು ಕೊಡದ ಪತ್ನಿಯ ಮೇಲಿದ್ದ ಕೋಪ ಆಕೆಯ ಮೇಲೆ ಕತ್ತಿ ಬೀಸುವಂತೆ ಮಾಡಿತ್ತು. ಕೈ ಹಾಗೂ ಹೊಟ್ಟೆಯ ಮೇಲೆ ಗಾಯವಾಗಿದ್ದನ್ನು ಹಿಡಿದುಕೊಂಡು ಬಾಡಿಗೆ ಮನೆಗೆ ಹೊರಗೋಡಿದಾಗ ಬೆನ್ನಟ್ಟಿ ಬಂದ ಪತಿ ಕುತ್ತಿಗೆಯ ಮೇಲೆ ಮಚ್ಚಿನಿಂದ‌ ಒಂದೇಟು ಹೊಡೆದಿದ್ದ. ಇಷ್ಟು ವರ್ಷಗಳ ಕಾಲ ಬಹಳಷ್ಟು ಪ್ರೀತಿಸಿದ್ದ ಪತ್ನಿ ಬದಲಾಗದ್ದನ್ನು ನೋಡಿದ ಪತಿ ಕೊನೆಗೆ ಕೊಲೆಯೇ ಮಾಡಿ ಬಿಟ್ಟಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನು ಬಿಟ್ಟು ಆರೋಪಿ ಲೋಕೇಶ್ ಪರಾರಿಯಾಗಿದ್ದನಾದ್ರೂ ಕೊನೆಗೆ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ. 

ಒಟ್ಟಿನಲ್ಲಿ ಅತಿಯಾದ್ರೆ ಅಮೃತವೂ ವಿಷ ಅನ್ನೋವಂತೆ ಪತ್ನಿಯ ಅಫೇರ್‌ಗಳು ಆಕೆಗೆ ಮುಳುವಾದ್ರೆ, ಪತಿಯ ಕುರುಡು ಪ್ರೀತಿ ಆತನನ್ನು ಕೊಲೆಗಾರನ್ನಾಗಿ ಮಾಡಿದೆ. ಆದರೆ, ಇವರಿಬ್ಬರ ಮುಗ್ಧ ಮಕ್ಕಳಿಬ್ಬರು ಮಾತ್ರ ಅನಾಥರಾಗಿದ್ದಾರೆ.

Follow Us:
Download App:
  • android
  • ios