ಬೆಳಗಾವಿ: ಕೊಲೆ ಮಾಡಿ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸಿದ ಇಬ್ಬರು ಆರೋಪಿಗಳ ಸೆರೆ
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಶಿಂಗಳಾಪುರ ಸೇತುವೆಯಲ್ಲಿ ಪತ್ತೆಯಾದ ಯುವಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಬೆಳಗಾವಿ(ನ.27): ಯುವಕನ್ನು ಕೊಲೆ ಮಾಡಿದ ಪ್ರಕರಣದ ದಾರಿ ತಪ್ಪಿಸಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ನ.13ರಂದು ರಾತ್ರಿ ಗೋಕಾಕ ನಗರದ ಶಿಂಗಳಾಪುರ ಸೇತುವೆಯಲ್ಲಿ ಘಟಪ್ರಭಾದ ಯುವಕ ಸೋಮಲಿಂಗ ಸುರೇಶ ಕಂಬಾರ (20) ಯುವಕನ ಶವ ಪತ್ತೆಯಾಗಿತ್ತು. ಕೈಕಾಲು ಕಟ್ಟಿ ಹಳೆಯ ವಿದ್ಯುತ್ ಕಂಬಕ್ಕೆ ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ನ.9ರಂದು ಹತ್ಯೆಗೀಡಾದ ಸೋಮಲಿಂಗ ತಾಯಿ ಮಗ ಕಾಣೆಯಾಗಿದ್ದ ಕುರಿತು ಘಟಪ್ರಭಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆತನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗುತ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಗೋಕಾಕ ಡಿಎಸ್‌ಪಿ ಮನೋಜಕುಮಾರ ನಾಯಿಕ ನೇತೃತ್ವದ ತಂಡ ಹಂತಕರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಿದ್ದಾರೆ.
ಕೊಲೆಯಾದ ಯುವಕ ಸೋಮಲಿಂಗ ತಾಯಿ ಹೂವು, ಕಾಯಿ ವ್ಯಾಪಾರ ಮಾಡುತ್ತಿದ್ದರು. ಇವರಿಗೆ ಆರು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಇದರಲ್ಲಿ ಮೃತ ಸೋಮಲಿಂಗ ಐಟಿಐ ಮಾಡಿದ್ದು, ಮೊದಲು ಗೋವಾದಲ್ಲಿ ಕೆಲಸ ಮಾಡುತ್ತಿದ್ದ. ಆರು ತಿಂಗಳ ಹಿಂದೆಯಷ್ಟೇ ಹಿಂಡಲಗಾ ಬಳಿಯ ಫೈನಾನ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ. ನ.8ರಂದು ರಾತ್ರಿ 11 ಗಂಟೆ ಸುಮಾರಿಗೆ ಒಂದು ಫೋನ್ ಕರೆ ಮೇರೆಗೆ ಘಟಪ್ರಭಾಗೆ ಹೋದ ನಂತರ ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ.
ಕಿರುಕುಳ ನೀಡ್ತಿದ್ದ ಮಗನ ಕೊಲೆಗೈದು ಪೊಲೀಸರಿಗೆ ಶರಣಾದ ತಂದೆ
ಪ್ರಕರಣದ ಹಿನ್ನೆಲೆ:
ಮೃತ ವ್ಯಕ್ತಿಗೆ ಸೋಶಿಯಲ್ ಮಿಡಿಯಾದಲ್ಲಿ ಕೆಲ ತಿಂಗಳ ಹಿಂದೆ ಓರ್ವ ಯುವತಿಯ ಪರಿಚಯ ಆಗಿತ್ತು. ಆ ಪರಿಚಯ ಮೇಸೆಜ್, ವಿಡಿಯೋ ಕಾಲ್‌ವರೆಗೂ ಹೋಗಿತ್ತು. ಆದರೆ ಆ ಯುವತಿ ನಿಶ್ಚಿತಾರ್ಥ ಬೇರೆ ಹುಡುಗನ ಜತೆಗೆ ಆಗಿದ್ದರೂ ಇಬ್ಬರ ಮಧ್ಯೆ ಸಂಪರ್ಕ ಮುಂದುವರಿದಿತ್ತು. ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗನಿಗೆ ಈ ವಿಷಯ ಗೊತಾಗುತ್ತಿದ್ದಂತೆ ಹುಡುಗಿ ಮನೆಯವರಿಗೆ ತಿಳಿಸುತ್ತಾನೆ. ಬಳಿಕ ಕುಟುಂಬಸ್ಥರು ಹುಡುಗಿಯ ಫೋನ್‌ನಿಂದ ನ.8ರಂದು ರಾತ್ರಿ ಫೋನ್ ಮಾಡಿ ಘಟಪ್ರಭಾಗೆ ಕರೆಸಿಕೊಂಡು ಹುಡುಗಿಯ ಸಂಬಂಧಿಕರ ಮನೆಯಲ್ಲಿ ಕಟ್ಟಿಹಾಕಿದ್ದಾರೆ. ಬಳಿಕ ದುರದುಂಡಿಯ ಗ್ರಾಮದಲ್ಲಿರುವ ಫಾರ್ಮಹೌಸ್‌ಗೆ ಕರೆದುಕೊಂಡು ಹೋಗಿ ಒಂದು ವಾಯರ್‌ನಿಂದ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ನಂತರ ಸೋಮಲಿಂಗ ದೇಹವನ್ನು ಗೋಕಾಕನ ಶಿಂಗಳಾಪುರ ಸೇತುವೆಯಲ್ಲಿ ಕೈ ಕಾಲು ಕಟ್ಟಿಎಸೆದಿದ್ದಾರೆ. ಈ ಪ್ರಕರಣದ ದಾರಿ ತಪ್ಪಿಸಬೇಕು ಎಂದು ಮಾರನೇ ದಿನ ರಾಯಬಾಗ ಕಡೆ ಹೋಗುತ್ತಿದ್ದ ರೈಲಿನಲ್ಲಿ ಆರೋಪಿಗಳು ಸೋಶಿಯಲ್ ಮಿಡಿಯಾದಲ್ಲಿ ಬೇರೆ ಹುಡುಗಿಯ ಫೋಟೋವನ್ನು ಅಪ್‌ಲೋಡ್ ಮಾಡಿ, ಈ ಹುಡುಗಿಯಿಂದ ಕಾಣೆಯಾಗಿದ್ದಾನೆ ಅಥವಾ ಕೊಲೆಯಾಗಿದ್ದಾನೆ ಎಂದು ಬಿಂಬಿಸುವ ಯತ್ನ ಮಾಡುತ್ತಾರೆ. ಬಳಿಕ ಆ ಫೋನ್ ರೈಲಿನಲ್ಲಿಯೇ ಬಿಟ್ಟಿದ್ದಾರೆ. ಆ ಫೋನ್ ಯಾರಿಗೋ ಸಿಕ್ಕಿ, ಮಿರಜ್‌ನಿಂದ ಖಾನಾಪುರಕ್ಕೆ ಬಂದು, ಈಗ ಬೆಂಗಳೂರಿಗೆ ಹೋಗಿದೆ. ಆ ಫೋನ್ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿ ಮತ್ತು ಮಹಿಳೆಯ ಚಿಕ್ಕಪ್ಪನನ್ನು ಬಂಧಿಸಲಾಗಿದೆ. ಇನ್ನು ಮೂರನಾಲ್ಕು ಆರೋಪಿಗಳನ್ನು ವಿಚಾರಣೆ ನಡೆಸಿ ಬಂಧಿಸುವ ಕಾರ್ಯದಲ್ಲಿ ಪೊಲೀಸರು ಇದ್ದಾರೆ.