ಬಲೆಗೆ ಬಿದ್ದ ಚಿರತೆ ಗುಂಡಿಟ್ಟು ಹತ್ಯೆಗೈದವರ ಬಂಧನ
ಇತ್ತೀಚೆಗೆ ಚಿರತೆ ಚರ್ಮ, ದವಡೆ, ಉಗುರು ಮಾರಲು ಯತ್ನಿಸಿದ್ದ ಸಿಕ್ಕಿಬಿದ್ದ ಟೆಕ್ಕಿ, ಆಗ ತಪ್ಪಿಸಿಕೊಂಡಿದ್ದ ಆರೋಪಿಗಳ ಬಂಧನ, ಲೈಸೆನ್ಸ್ ಇಲ್ಲದ ಬಂದೂಕು ಜಪ್ತಿ
ಬೆಂಗಳೂರು(ಸೆ.13): ಇತ್ತೀಚೆಗೆ ತಾವು ಕಾಡು ಹಂದಿಗೆ ಹಾಕಿದ ಬಲೆಗೆ ಬಿದ್ದ ಚಿರತೆಯನ್ನು ಕೊಂದಿದ್ದ ಇಬ್ಬರು ಬೇಟೆಗಾರರನ್ನು ಕೊನೆಗೂ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ಅರಣ್ಯ ಘಟಕದ ಬೆಂಗಳೂರು ಅರಣ್ಯ ಸಂಚಾರಿ ದಳವು ಸೆರೆ ಹಿಡಿದಿದೆ.
ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿನ ಅರೇಹಳ್ಳಿ ಬ್ಯಾಟಪ್ಪ ಹಾಗೂ ಕರೇಹಳ್ಳಿಯ ವೈಶಾಖ್ ಬಂಧಿತರಾಗಿದ್ದು, ಆರೋಪಿಗಳಿಂದ ಡಬಲ್ ಬ್ಯಾರಲ್ ಬಂದೂಕನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಚಿರತೆ ಚರ್ಮ, ಉಗುರು ಹಾಗೂ ದವಡೆ ಮಾರಾಟಕ್ಕೆ ಯತ್ನಿಸಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಚರಣ್‌ನನ್ನು ಸಿಐಡಿ ಅರಣ್ಯ ಸಂಚಾರಿ ಪೊಲೀಸರು ಬಂಧಿಸಿದ್ದರು. ಬಳಿಕ ಆತ ವಿಚಾರಣೆ ವೇಳೆ ನೀಡಿದ ಹೇಳಿಕೆ ಆಧರಿಸಿ ಇಬ್ಬರು ಬೇಟೆಗಾರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Mangaluru: ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಉಳ್ಳಾಲದ ಮರಳು ದಂಧೆಕೋರರು ಅರೆಸ್ಟ್!
ಮೊಲ, ಕಾಡು ಹಂದಿಗೆ ಬೇಟೆಗಾರರು:
ಊರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಬ್ಯಾಟಪ್ಪ ಹಾಗೂ ವೈಶಾಖ್, ತುಮಕೂರು ಜಿಲ್ಲೆ ತುರುವೆಕೆರೆ ತಾಲೂಕಿನ ರಂಗನಾಥಸ್ವಾಮಿ ಬೆಟ್ಟದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಪ್ರವೃತ್ತಿ ಮಾಡಿಕೊಂಡಿದ್ದರು. ಕಾಡು ಹಂದಿ ಹಾಗೂ ಮೊಲಗಳನ್ನು ಕೊಂದು ಬಳಿಕ ಮಾರಾಟ ಮಾಡಿ ಈ ಕಿಡಿಗೇಡಿಗಳು ಹಣ ಸಂಪಾದಿಸುತ್ತಿದ್ದರು. ಅಂತೆಯೇ ಎರಡು ವಾರಗಳ ಹಿಂದೆ ಎಂದಿನಂತೆ ಬೆಟ್ಟದ ಬಳಿ ಕಾಡು ಹಂದಿಗೆ ಆರೋಪಿಗಳು ಬಲೆ ಹಾಕಿದ್ದರು. ಆದರೆ ಹಂದಿ ಬದಲಿಗೆ ಅವರ ಬಲೆಗೆ ಚಿರತೆ ಬಿದ್ದಿದೆ. ತಮ್ಮ ಬಲೆಗೆ ಬಿದ್ದ ಕಾಡು ಪ್ರಾಣಿಯನ್ನು ನೋಡಲು ಬೆಳಗ್ಗೆ 11ಕ್ಕೆ ಸುಮಾರಿಗೆ ತೆರಳಿದ ಆರೋಪಿಗಳು, ಚಿರತೆ ಅರ್ಭಟ ಕಂಡು ಭೀತಿಗೊಂಡಿದ್ದಾರೆ. ಆಗ ತಮ್ಮ ಬಳಿಯಿದ್ದ ಪರವಾನಿಗೆ ಇಲ್ಲದ ಡಬಲ್ ಬ್ಯಾರೆಲ್ ಬಂದೂಕಿನಿಂದ ಎರಡು ಗುಂಡು ಹಾರಿಸಿ ಚಿರತೆಯನ್ನು ಕೊಂದ ಕಿಡಿಗೇಡಿಗಳು, ಬಳಿಕ ಚಿರತೆ ಚರ್ಮ, ಉಗುರು ಹಾಗೂ ದವಡೆಯನ್ನು ಕಿತ್ತುಕೊಂಡಿದ್ದಾರೆ. ಬಳಿಕ ಮಾಂಸವನ್ನು ಚೀಲದಲ್ಲಿ ತುಂಬಿಕೊಂಡು ಹೋಗಿ ನಾಲೆಗೆ ಎಸೆದಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಹಣದಾಸೆಗೆ ಚರ್ಮ ಮಾರಲು ಯತ್ನಿಸಿದ ಸಿಕ್ಕಿಬಿದ್ದಿದ್ದ ಟೆಕ್ಕಿ
ಹಣದಾಸೆ ತೋರಿಸಿ ತಮ್ಮ ಪರಿಚಿತ ಸಾಫ್ಟ್‌ವೇರ್ ಎಂಜಿನಿಯರ್ ಚರಣ್‌ನ್ನು ಆರೋಪಿಗಳು, ತಾವು ಬೇಟೆಯಾಡಿದ್ದ ಚಿರತೆ ಚರ್ಮ, ಉಗುರು ಹಾಗೂ ದವಡೆ ಮಾರಾಟಕ್ಕೆ ಬಳಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಅರಣ್ಯ ಸಂಚಾರಿ ದಳವು, ಮೈಸೂರಿನ ಮಠದ ಸ್ವಾಮೀಜಿಯೊಬ್ಬರಿಗೆ ಚಿರತೆ ಚರ್ಮ ಬೇಕಿದೆ ಎಂದು ಚರಣ್‌ನನ್ನು ಸಂಪರ್ಕಿಸಿ ಮಾರು ವೇಷದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದರು. ಅಂದು ತಪ್ಪಿಸಿಕೊಂಡು ಓಡಿ ಹೋಗಿದ್ದ ಬೇಟೆಗಾರರನ್ನು ಬೆಂಬಿಡದೆ ಬೆನ್ನಹತ್ತಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.