ಬಂಧಿತ ಆರೋಪಿಗಳಿಂದ 3 ಲಕ್ಷ ಮೌಲ್ಯದ 32 ಇಂಚಿನ 18 ಟಿವಿಗಳು ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ 

ಬೆಂಗಳೂರು(ಡಿ.04):  ವಿಲಾಸಿ ಜೀವನ ನಡೆಸಲು ನವೀಕರಣ ಹಂತದಲ್ಲಿದ್ದ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗೆ ನುಗ್ಗಿ ಟಿವಿಗಳನ್ನು ಕಳವು ಮಾಡಿದ್ದ ಇಬ್ಬರು ಕಳ್ಳರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಮ್ಮನಪಾಳ್ಯದ ಅಬೂಬಕರ್‌ (20) ಮತ್ತು ಮಹಮದ್‌ ತೌಹಿರ್‌ (20) ಬಂಧಿತರು. ಆರೋಪಿಗಳಿಂದ .3 ಲಕ್ಷ ಮೌಲ್ಯದ 32 ಇಂಚಿನ 18 ಟಿವಿಗಳು ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಕೋರಮಂಗಲ 4ನೇ ಬ್ಲಾಕಿನ 17ನೇ ಮುಖ್ಯರಸ್ತೆಯಲ್ಲಿರುವ ‘ಡಿ-ಓರೆಲ್‌ ಹೋಟೆಲ್‌ ಆ್ಯಂಡ್‌ ರೆಸ್ಟೋರೆಂಟ್‌’ನಲ್ಲಿ ಟಿವಿಗಳು ಕಳುವಾಗಿದ್ದವು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಗೋದಾಮಿನ ನಕಲಿ ಕೀ ಮಾಡಿಸಿ ಕೇಬಲ್‌ ಕದ್ದ ಮಾಜಿ ನೌಕರರು!

ನವೀಕರಣದ ಹಿನ್ನೆಲೆಯಲ್ಲಿ ಡಿ-ಓರೆಲ್‌ ಹೋಟೆಲ್‌ ಆ್ಯಂಡ್‌ ರೆಸ್ಟೋರೆಂಟ್‌ ಬಂದ್‌ ಮಾಡಿದ್ದು, ಕೆಲ ದಿನ ನವೀಕರಣ ಕಾಮಗಾರಿ ಮಾಡಿ ಬಳಿಕ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಆರೋಪಿಗಳು ಬೀಗ ಮುರಿದು ಹೋಟೆಲ್‌ಗೆ ನುಗ್ಗಿ ಟಿವಿಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಮಡಿವಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕದ್ದು ಬಳಿಕ ಅದರಲ್ಲೇ ಓಡಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳು ಕದ್ದ ಟಿವಿಗಳನ್ನು ಪರಿಚಿತರು ಹಾಗೂ ಸಂಬಂಧಿಕರಿಗೆ ಕಡಿಮೆ ದರಕ್ಕೆ ಮಾರಾಟ ಮಾಡಿ ಬಂದ ಹಣವನ್ನು ಮೋಜಿಗಾಗಿ ವ್ಯಯಿಸಿದ್ದರು. ಆರೋಪಿಗಳ ಬಂಧನದಿಂದ ಕೋಮಂಗಲ ಠಾಣೆಯ ಕನ್ನ ಕಳವು ಹಾಗೂ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎರಡು ದ್ವಿಚಕ್ರ ವಾಹನ ಕಳವು ಸೇರಿದಂತೆ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ.