ಆರು ತಿಂಗಳ ಹಿಂದೆ ನಕಲಿ ಕೀ ಬಳಸಿ ಗೋದಾಮಿನ ಬಾಗಿಲು ತೆರೆದು ಡೇಟಾ ಕೇಬಲ್‌ ರೋಲ್‌ಗಳು ಹಾಗೂ ವಾಟರ್‌ ಫಿಲ್ಟರ್‌ ಕದ್ದು ಪರಾರಿಯಾಗಿದ್ದ ಖದೀಮರು 

ಬೆಂಗಳೂರು(ಡಿ.03):  ಈ ಹಿಂದೆ ತಾವು ಕೆಲಸ ಮಾಡುತ್ತಿದ್ದ ಕಂಪನಿಗೆ ಸೇರಿದ ಗೋದಾಮಿನಿಂದ ಡೇಟಾ ಕೇಬಲ್‌ ರೋಲ್‌ಗಳು ಹಾಗೂ ವಾಟರ್‌ ಫಿಲ್ಟರ್‌ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ.ಹಳ್ಳಿ ನಿವಾಸಿ ಎಂ.ಡಿ.ಖಾಲೀದ್‌(24) ಮತ್ತು ಕಾಡುಗೋಡಿ ನಿವಾಸಿ ಸೈಯದ್‌ ಮೆಹಬೂಬ(28) ಬಂಧಿತರು. ಆರೋಪಿಗಳಿಂದ .14.63 ಕೋಟಿ ಮೌಲ್ಯದ 193 ಡೆಟಾ ಕೇಬಲ್‌ ರೋಲ್‌ಗಳು ಮತ್ತು 25 ರೀವ್‌ಪ್ಯೂರ್‌ ಕಂಪನಿಯ ವಾಟರ್‌ ಫಿಲ್ಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ‘ಇಇಇಟಿಸಿಎಚ್‌ ಇಸ್ಫೋ ನೆಟ್‌’ ಎಂಬ ಕಂಪನಿಯ ಗೋದಾಮಿಯನಲ್ಲಿ ದಾಸ್ತಾನು ಪರಿಶೀಲಿಸುವಾಗ ಡೆಟಾ ಕೇಬಲ್‌ ರೋಲ್‌ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕದ್ದ ಬೈಕ್‌ನಲ್ಲಿ 32 ಲಕ್ಷದ ಮೊಬೈಲ್‌ ಫೋನ್‌ ದೋಚಿದ ಮೂವರು ಖದೀಮರ ಬಂಧನ

ಆರೋಪಿಗಳು ಹೆಣ್ಣೂರಿನ ಇಇಇಟಿಸಿಎಚ್‌ ಇಸ್ಫೋ ನೆಟ್‌ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಷದ ಹಿಂದೆ ಇಬ್ಬರೂ ಕೆಲಸ ಬಿಟ್ಟಿದ್ದರು. ಈ ನಡುವೆ ಗೋದಾಮಿನ ಬಗ್ಗೆ ತಿಳಿದುಕೊಂಡಿದ್ದ ಆರೋಪಿಗಳು ಗೋದಾಮಿನ ನಕಲಿ ಕೀ ಮಾಡಿಸಿಕೊಂಡಿದ್ದರು. ಆರು ತಿಂಗಳ ಹಿಂದೆ ಈ ನಕಲಿ ಕೀ ಬಳಸಿ ಗೋದಾಮಿನ ಬಾಗಿಲು ತೆರೆದು ಡೇಟಾ ಕೇಬಲ್‌ ರೋಲ್‌ಗಳು ಹಾಗೂ ವಾಟರ್‌ ಫಿಲ್ಟರ್‌ ಕದ್ದು ಪರಾರಿಯಾಗಿದ್ದರು. ಆದರೂ ಕಂಪನಿಯವರಿಗೆ ಈ ಕಳ್ಳತನ ವಿಚಾರ ಗೊತ್ತಿರಲಿಲ್ಲ.

ಇತ್ತೀಚೆಗೆ ಗೋದಾಮಿನಲ್ಲಿ ಸಂಗ್ರಹಿಸಿದ್ದ ವಸ್ತುಗಳನ್ನು ಪರಿಶೀಲಿಸುವಾಗ ಕೇಬಲ್‌ ರೋಲ್‌ಗಳು ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.