Bengaluru: ಡೆಲಿವರಿ ಬಾಯ್‌ಗೆ ಇರಿದು ಹಣ ದೋಚಿದ್ದ ಕಿಡಿಗೇಡಿಗಳ ಬಂಧನ
* ಜೈಲಿನಿಂದ 10 ದಿನ ಹಿಂದೆ ಹೊರಬಂದು ಕೃತ್ಯ ಎಸಗಿದ್ದವನ ಸೆರೆ
* ಆರೋಪಿಗಳಿಂದ ಬೈಕ್ ಹಾಗೂ ಹಣ ಜಪ್ತಿ
* ಹಣ ಸಂಗ್ರಹಕಾರರೇ ಟಾರ್ಗೆಟ್
ಬೆಂಗಳೂರು(ಫೆ.19): ಇತ್ತೀಚೆಗೆ ಕಣ್ಣೂರು-ಬೆಳ್ಳಹಳ್ಳಿ ರಸ್ತೆ ಸಮೀಪ ಆಹಾರ ತಯಾರಿಕಾ ಕಂಪನಿಯ ಡೆಲವರಿ ಬಾಯ್(Delivery Boy) ಟಿ.ಸತೀಶ್ ಅವರಿಗೆ ಚಾಕುವಿನಿಂದ(Stab) ಇರಿದು .40 ಸಾವಿರವಿದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದ ಇಬ್ಬರು ಕಿಡಿಗೇಡಿಗಳನ್ನು ಬಾಗಲೂರು ಪೊಲೀಸರು(Police) ಸೆರೆ ಹಿಡಿದಿದ್ದಾರೆ.
ಕೆ.ಜಿ.ಹಳ್ಳಿ ಸಮೀಪದ ಎಸ್‌ಆರ್‌ಕೆ ನಗರದ ಸೈಯದ್ ಇಮ್ರಾನ್ ಅಲಿಯಾಸ್ ಕುಂಟ ಇಮ್ರಾನ್ ಹಾಗೂ ಅಪ್ಸರ್ ಬೇಗ್ ಅಲಿಯಾಸ್ ಲಾಲಾ ಬಂಧಿತರಾಗಿದ್ದು, ಆರೋಪಿಗಳಿಂದ(Accused) ಬೈಕ್ ಹಾಗೂ ಹಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಣ್ಣೂರು-ಬೆಳ್ಳಹಳ್ಳಿ ರಸ್ತೆ ಬದಿ ಕಾಂಡಿಮೆಂಟ್ಸ್‌ನಲ್ಲಿ ನೀರು ಕುಡಿಯಲು ಸತೀಶ್ ನಿಂತಿದ್ದಾಗ ಏಕಾಏಕಿ ಸ್ಕೂಟರ್‌ನಲ್ಲಿ ಬಂದ ಆರೋಪಿಗಳು, ಸತೀಶ್‌ನಿಂದ ಬ್ಯಾಗ್ ಕಸಿಯಲು ಯತ್ನಿಸಿದ್ದಾರೆ. ಇದಕ್ಕೆ ವಿರೋಧಿಸಿದಾಗ ಆತನಿಗೆ ಚಾಕುವಿನಿಂದ ಇರಿದು ಆರೋಪಿಗಳು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru Crime: ವಾಟ್ಸಾಪ್ ಪೀಡಕನ ಬಂಧನ: ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ವಿಕೃತಿ
ಹಣ ಸಂಗ್ರಹಕಾರರೇ ಟಾರ್ಗೆಟ್:
ಸೈಯದ್ ಇಮ್ರಾನ್ ಅಲಿಯಾಸ್ ಕುಂಟ ಇಮ್ರಾನ್ ವೃತ್ತಿಪರ ಸುಲಿಗೆಕೋರರನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಸುಲಿಗೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಇಮ್ರಾನ್, ಹತ್ತು ದಿನಗಳ ಹಿಂದಷ್ಟೆ ಜೈಲಿನಿಂದ(Jail) ಹೊರಬಂದು ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ಹಣದಾಸೆ ತೋರಿಸಿ ಅಪ್ಸರ್‌ನನ್ನು ಸುಲಿಗೆ ಕೃತ್ಯಗಳಿಗೆ ಆತ ಬಳಸಿಕೊಂಡಿದ್ದ. ಬೇಕರಿ ಹಾಗೂ ಅಂಗಡಿಗಳಿಗೆ ರೆಡಿಮೇಡ್ ಆಹಾರ ಪೊಟ್ಟಣ, ಖಾದ್ಯ ತಿನಿಸು ಹಾಗೂ ಸಿಗರೆಟನ್ನು ಪೂರೈಸಿ ಹಣ ಸಂಗ್ರಹಿಸುವವರನ್ನು ಗುರಿಯಾಗಿಸಿಕೊಂಡು ಹಣ ದೋಚುವುದು(Robbery) ಕುಂಟ ಇಮ್ರಾನ್‌ನ ಕೃತ್ಯದ ಮಾದರಿಯಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೌರಿಬಿದನೂರು ತಾಲೂಕಿನ ಸತೀಶ್, ಯಲಹಂಕದ ಮಾರುತಿ ನಗರದಲ್ಲಿ ಎಂಟಿಆರ್ ಕಂಪನಿಯ ಉತ್ಪನ್ನಗಳ ಸಗಟು ಮಾರಾಟಗಾರರ ಬಳಿ ಕೆಲಸಕ್ಕಿದ್ದರು. ಬಾಗಲೂರು ಹಾಗೂ ಯಲಹಂಕ ವ್ಯಾಪ್ತಿಯಲ್ಲಿ ಅಂಗಡಿಗಳಿಗೆ ಎಂಟಿಆರ್ ಉತ್ಪನ್ನಗಳನ್ನು ಪೂರೈಸಿ ಬಳಿಕ ಪ್ರತಿ ಸೋಮವಾರ ಹಣ ಸಂಗ್ರಹಿಸುತ್ತಿದ್ದರು. ಫೆ.7ರಂದು ಬಾಗಲೂರು ಸಮೀಪ ಅಂಗಡಿಗಳಿಂದ .40 ಸಾವಿರ ಸಂಗ್ರಹಿಸಿ ಬ್ಯಾಗ್‌ನಲ್ಲಿಟ್ಟುಕೊಂಡು ಆತ ಮರಳುತ್ತಿದ್ದರು. ಆಗ ಡೆಲವರಿ ಬಾಯ್‌ನನ್ನು ಒಂದು ಗಂಟೆ ಹಿಂಬಾಲಿಸಿದ ಆರೋಪಿಗಳು, ಕಣ್ಣೂರು-ಬೆಳ್ಳಹಳ್ಳಿ ರಸ್ತೆ ಬದಿ ಕಾಂಡಿಮೆಂಡ್ಸ್‌ನಲ್ಲಿ ನೀರು ಕುಡಿಯುವ ವೇಳೆ ಆತನ ಮೇಲೆರಗಿದ್ದಾರೆ. ಆ ವೇಳೆ ಕುತ್ತಿಗೆಗೆ ಚಾಕು ಹಿಡಿದು ಸತೀಶ್‌ನಿಂದ ಹಣದ ಬ್ಯಾಗ್ ಕಸಿಯಲು ಯತ್ನಿಸಿದ್ದಾರೆ. ಇದಕ್ಕೆ ವಿರೋಧಿಸಿದಾಗ ಆತನಿಗೆ ಚಾಕು ಇರಿದು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಪ್ರಶಾಂತ್.ಆರ್.ವರ್ಣಿ ತಂಡವು, ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳ್ಳತನ: ಆರೋಪಿಯ ಬಂಧನ
ಬಂಗಾರಪೇಟೆ: 25ಕ್ಕೂ ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಕಾಮಸಮುದ್ರ ಪೊಲೀಸರು ಬಂಧಿಸಿದ್ದಾರೆ(Arrest). ಬಂಧಿತ ಆರೋಪಿಯನ್ನು ತೊಪ್ಪನಹಳ್ಳಿ ಗ್ರಾಪಂ ಶಿವಲಿಂಗ ಗ್ರಾಮದ ಚಂದ್ರಪ್ಪ ಎಂದು ಗುರುತಿಸಲಾಗಿದೆ. ಕೊಳಮೂರು ಗ್ರಾಮದ ರಾಮಚಂದ್ರರಾವ್ ಎಂಬುವರ ಮನೆಯಲ್ಲಿ ಸುಮಾರು 70 ಸಾವಿರ ಮೌಲ್ಯದ ಚಿನ್ನಾಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿದ್ದನು. ಚಂದ್ರಪ್ಪನ ಮೇಲೆ ಅನುಮಾನಗೊಂಡ ಪೊಲೀಸರು ಆತನನ್ನು ದಸ್ತಗಿರಿ ಮಾಡಿ ವಿಚಾರಿಸಿದಾಗ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾನೆ.
ಇದಲ್ಲದೆ ತಂಗೇಡುಮಿಟ್ಟು ಗ್ರಾಮದ ಸುಭ್ರಮಣಿ ಎಂಬುವರ ಮನೆಯಲ್ಲಿಯೂ ಸಹ 40ಸಾವಿರ ಮೌಲ್ಯದ ಚಿನ್ನಾಭರಣಗಳು ಹಾಗೂ 11ಸಾವಿರ ನಗದನ್ನು ಕಳ್ಳತನ ಮಾಡಿರುವುದನ್ನೂ ಸಹ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.