*  ಹೆದ್ದಾರಿಯಲ್ಲಿ ಕಾರು, ಬೈಕ್‌ ಅಡ್ಡಗಟ್ಟಿ ಸುಲಿಗೆ*  ಒಂಟಿ ಮನೆಗಳಿಗೂ ನುಗ್ಗಿ ದೋಚುತ್ತಿದ್ದ ಬಾಂಬೆ ಸಲೀಂ ಶಿಷ್ಯರು*  ಪತ್ರಕರ್ತರೆಂದು ಹೇಳಿ ಬಚಾವ್‌ 

ಬೆಂಗಳೂರು(ಅ.22): ನಾಗರಿಕರಿಗೆ ಪಿಸ್ತೂಲ್‌ ತೋರಿಸಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ಕುಖ್ಯಾತ ಇಬ್ಬರು ಸುಲಿಗೆಕೋರರು ಬಾಸಣವಾಡಿ ಪೊಲೀಸರಿಗೆ ಸೆರೆಯಾಗಿದ್ದಾರೆ(Arrest).

ಚಿಕ್ಕಬಾಣವಾರದ ಬಶೀರ್‌ ಸಾಬ್‌ ಹಾಗೂ ಚಿಂತಾಮಣಿ ತಾಲೂಕಿನ ಸೈಯದ್‌ ಅಸೀಫ್‌ವುಲ್ಲಾ ಅಲಿಯಾಸ್‌ ಡಿಸೇಲ್‌ ಅಸೀಫ್‌ ಬಂಧಿತರಾಗಿದ್ದು, ಆರೋಪಿಗಳಿಂದ(Accused) ಪಿಸ್ತೂಲ್‌(Pistol), 5 ಗುಂಡುಗಳು ಹಾಗೂ .65 ಲಕ್ಷ ಮೌಲ್ಯದ 1.2 ಕೆಜಿ ಚಿನ್ನ(Gold), 5 ಕೆಜಿ ಬೆಳ್ಳಿ, ಒಂದು ಕಾರು ಹಾಗೂ ಮೂರು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಒಂದೂವರೆ ವರ್ಷಗಳಿಂದ ಪೊಲೀಸರಿಗೆ(Police) ಸಿಗದೆ ಓಡಾಡುತ್ತಿದ್ದ ಈ ಇಬ್ಬರು ಆರೋಪಿಗಳನ್ನು ಕೊನೆಗೆ ಬಾಸಣವಾಡಿ ಪೊಲೀಸರ ತಂಡ ಪತ್ತೆ ಹಚ್ಚಿದೆ ಎಂದು ಆಯುಕ್ತ ಕಮಲ್‌ ಪಂತ್‌(Kamal Pant) ತಿಳಿಸಿದ್ದಾರೆ.

ಗುರುವಿನಂತೆ ಹೆಸರು ಮಾಡಲು ಸಂಚು:

ಬಶೀರ್‌ ಹಾಗೂ ಅಸೀಫ್‌ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಈ ಇಬ್ಬರ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಈ ಇಬ್ಬರು ಆರೋಪಿಗಳು ನಟೋರಿಯಸ್‌ ದರೋಡೆಕೋರ ಖಲೀಂವುಲ್ಲಾ ಅಲಿಯಾಸ್‌ ಬಾಂಬೆ ಸಲೀಂನ ಸಹೋದರನ ಸಹಚರರಾಗಿದ್ದು, ಬಾಂಬೆ ಸಲೀಂ(Bombay Saleem) ತಂಡದ ಜತೆ ಅಪರಾಧ ಕೃತ್ಯದಲ್ಲೂ ಅವರು ಭಾಗಿಯಾಗಿದ್ದರು. ಅಪರಾಧ ಪ್ರಕರಣದಲ್ಲಿ ಸಲೀಂ ಸೋದರರ ಬಂಧನ ಬಳಿಕ ಈ ಇಬ್ಬರು ಸ್ವತಂತ್ರವಾಗಿ ಕಾರ್ಯಾಚರಣೆಗಿಳಿದಿದ್ದರು. ತಮ್ಮ ಗುರು ಬಾಂಬೆ ಸಲೀಂನಂತೆ ತಾವು ಸಹ ಪಾತಕ ಲೋಕದಲ್ಲಿ ಕುಖ್ಯಾತಿ ಪಡೆಯಬೇಕೆಂದು ಅವರು, ಇದಕ್ಕಾಗಿ ಪಶ್ಚಿಮ ಬಂಗಾಳ(West Bengal) ವ್ಯಕ್ತಿಯಿಂದ ಪಿಸ್ತೂಲ್‌ ಖರೀದಿಸಿ ಸುಲಿಗೆ ಕೃತ್ಯಕ್ಕಿಳಿದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಕಲಬುರಗಿಯ ಲ್ಯಾಪ್‌ಟಾಪ್‌ ಕಳ್ಳನ ಕರಾಮತ್ತು

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕಾರು ಹಾಗೂ ಬೈಕ್‌ಗಳಲ್ಲಿ(Bike) ಸಂಚರಿಸುತ್ತಿದ್ದವರನ್ನು ಅಡ್ಡಗಟ್ಟಿ ಬಶೀರ್‌ ಹಾಗೂ ಅಸೀಫ್‌ ಸುಲಿಗೆ ಮಾಡುತ್ತಿದ್ದರು. ಅಲ್ಲದೆ, ಬೀಗ ಹಾಕಿದ ಮನೆಗಳ ಬೀಗ ಮುರಿದು ಹಾಗೂ ಹೆದ್ದಾರಿ ಪಕ್ಕದ ಒಂಟಿ ಮನೆಗಳಿಗೆ ತಡ ರಾತ್ರಿ ನುಗ್ಗಿ ಮನೆಯವರಿಗೆ ಬೆದರಿಕೆ ಹಾಕಿ ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದರು. ಈ ವೇಳೆ ತಮಗೆ ಪ್ರತಿರೋಧ ತೋರುವ ಮನೆ ಮಾಲಿಕರಿಗೆ ಪಿಸ್ತೂಲ್‌ ತೋರಿಸಿ ಪ್ರಾಣ ಬೆದರಿಕೆ ಒಡ್ಡಿ ಚಿನ್ನಾಭರಣ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೂವರೆ ವರ್ಷದಿಂದ ಬೆಂಗಳೂರು(Bengaluru), ಬೆಂಗಳೂರು ಗ್ರಾಮಾಂತರ, ಕೋಲಾರ(Kolar), ತುಮಕೂರು(Tumakuru) ಹಾಗೂ ಬೆಳಗಾವಿಯಲ್ಲಿ(Belagavi) ಈ ಜೋಡಿ ಹಾವಳಿ ಇಟ್ಟಿದ್ದು, ಪೊಲೀಸರಿಗೆ ಸಿಗದೆ ಓಡಾಡುತ್ತಿದ್ದರು. ಆರೋಪಿಗಳ ಬಂಧನದಿಂದ ಕನ್ನ ಕಳವು, ಕಾರು ಕಳ್ಳತನ, ಸುಲಿಗೆ ಹಾಗೂ ದರೋಡೆ ಸೇರಿ 18 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ರಕರ್ತರೆಂದು ಹೇಳಿ ಬಚಾವ್‌

ಈ ಆರೋಪಿಗಳು ಖಾಸಗಿ ಸುದ್ದಿವಾಹಿನಿ ಪತ್ರಕರ್ತರು(Journalists) ಎಂದು ನಕಲಿ ಗುರುತಿನ ಪತ್ರ ಸೃಷ್ಟಿಸಿಕೊಂಡಿದ್ದರು. ತಮ್ಮನ್ನು ಪೊಲೀಸರು ಅಡ್ಡಗಟ್ಟಿದರೆ ಪತ್ರಕರ್ತರ ಗುರುತಿನ ಪತ್ರ ತೋರಿಸಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.