ಕದ್ದ ಬೈಕ್‌ನಲ್ಲಿ ಜಾಲಿರೈಡ್‌| ಅಪ್ರಾಪ್ತ ಸೇರಿ ಇಬ್ಬರ ಬಂಧನ| 10 ಲಕ್ಷ ರು. ಮೌಲ್ಯದ 10 ಬೈಕ್‌ ವಶ| ಬೈಕ್‌ಗಳ ಮಾಲೀಕರ ವಿಳಾಸ ಪತ್ತೆಗೆ ಮುಂದಾದ ಪೊಲೀಸರು| 

ಬೆಂಗಳೂರು(ಅ.11): ಶೋಕಿ ಹಾಗೂ ಜಾಲಿ ರೈಡ್‌ಗಾಗಿ ದುಬಾರಿ ಬೆಲೆಯ ದ್ವಿಚಕ್ರವಾಹನ ಕಳವು ಮಾಡುತ್ತಿದ್ದ ಒಬ್ಬ ಅಪ್ರಾಪ್ತ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಕ್ಕೂರು ಸಮೀಪದ ಕಲ್ಲಿಪಾಳ್ಯದ ಯು.ನಿತಿನ್‌ ಗೌಡ(18) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತರು. ಆರೋಪಿಗಳಿಂದ 10 ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ 10 ದ್ವಿ ಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಇಬ್ಬರು ಆರೋಪಿಗಳು ಅ.8ರಂದು ಸಂಜೆ ಕೊತ್ತನೂರು ಮುಖ್ಯರಸ್ತೆಯ ಗುಬ್ಬಿ ಕ್ರಾಸ್‌ ಬಳಿ ಪಲ್ಸರ್‌ ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುವಾಗ ಗಸ್ತಿನಲ್ಲಿದ್ದ ಪೊಲೀಸ್‌ ಪೇದೆ ಗಮನಿಸಿದ್ದಾರೆ. ಈ ವೇಳೆ ತಡೆದು ಪ್ರಶ್ನಿಸಲು ಮುಂದಾದಾಗ ಆರೋಪಿಗಳು ಭಯಗೊಂಡು ಸ್ಥಳದಲ್ಲೇ ಬೈಕ್‌ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಸಾರ್ವಜನಿಕರ ನೆರವಿನಿಂದ ಆರೋಪಿಗಳನ್ನು ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಬೈಕ್‌ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.

ಮುಂಬೈ ಟು ಬೆಂಗಳೂರು ಚೇಸ್ ಮಾಡಿ ನಕಲಿ IPS ಅಧಿಕಾರಿ ಅರೆಸ್ಟ್!

ಪಲ್ಸರ್‌ ಬೈಕ್‌ ಸಹ ಕೊತ್ತನೂರು ಭೈರತಿ ಬಳಿ ಕಳವು ಮಾಡಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಅಂತೆಯೆ ಈ ಹಿಂದೆ ಕೊತ್ತನೂರು, ಹೆಣ್ಣೂರು, ಕೆ.ಜಿ.ಹಳ್ಳಿ, ಜಾಲಹಳ್ಳಿ ಹಾಗೂ ಆಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳವು ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಆರೋಪಿಗಳ ಮಾಹಿತಿ ಆಧರಿಸಿ ವಿವಿಧ ಕಂಪನಿಗಳ 10 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಶೋಕಿ-ಜಾಲಿ ರೈಡ್‌ಗಾಗಿ ಬೈಕ್‌ ಕಳವು

ಆರೋಪಿಗಳು ಬೈಕ್‌ ಕಳವಿಗೆ ಮುಂಜಾನೆ ಆರಿಸಿಕೊಂಡಿದ್ದರು. ಏಕೆಂದರೆ, ಈ ಸಮಯದಲ್ಲಿ ಜನರ ಓಡಾಟ ವಿರಳವಾಗಿರುವುದರಿಂದ ಈ ಸಮಯದಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಮನೆಯ ಗೇಟ್‌ ಎದುರು, ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡಿದ ಪಲ್ಸರ್‌, ರಾಯಲ್‌ ಎನ್‌ಫೀಲ್ಡ್‌, ಟ್ರಂಪ್‌ ಮೊದಲಾದ ದುಬಾರಿ ಬೆಲೆಯ ಬೈಕ್‌ಗಳನ್ನೇ ತಮ್ಮ ಶೋಕಿ ಹಾಗೂ ಜಾಲಿ ರೈಡ್‌ಗಾಗಿ ಕಳವು ಮಾಡುತ್ತಿದ್ದರು. ಕೈ-ಕಾಲಿನಿಂದ ಬೈಕ್‌ಗಳ ಹ್ಯಾಂಡ್‌ ಲಾಕ್‌ ಮುರಿದು ಕ್ಷಣ ಮಾತ್ರದಲ್ಲಿ ಅದೇ ಬೈಕ್‌ನಲ್ಲಿ ಪರಾರಿಯಾಗುತ್ತಿದ್ದರು. ಪೆಟ್ರೋಲ್‌ ಮುಗಿಯುವವರೆಗೆ ಹಾಗೂ ರಿಪೇರಿಗೆ ಬರುವವರೆಗೂ ಬೈಕ್‌ ಓಡಿಸಿ ಬಳಿಕ ಅಪಾರ್ಟ್‌ಮೆಂಟ್‌ ಅಥವಾ ರಸ್ತೆಯ ಬದಿ ನಿಲ್ಲಿಸಿ ಹೋಗುತ್ತಿದ್ದುದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ಬೈಕ್‌ ಮಾರಾಟ

ಆರೋಪಿಗಳು ಕೆಲ ಬೈಕ್‌ಗಳನ್ನು ಮಾರಾಟ ಮಾಡಲು ಕಲ್ಕೆರೆಯ ಮೆಕ್ಯಾನಿಕ್‌ ಸುಹೈಲ್‌ ಪಾಷ ಎಂಬುವವನ ಗ್ಯಾರೇಜ್‌ ಬಳಿ ನಿಲುಗಡೆ ಮಾಡಿದ್ದರು. ಅಂತೆಯ ಒಂದು ದ್ವಿಚಕ್ರವಾಹನವನ್ನು ಪರಿಚಿತ ಚಂದ್ರಶೇಖರ್‌ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಈ ಆರೋಪಿಗಳ ಬಂಧನದಿಂದ ಕೊತ್ತನೂರು ಠಾಣೆ 3, ಹೆಣ್ಣೂರು 2, ಕೆ.ಜಿ.ಹಳ್ಳಿ 2, ಆಡುಗೋಡಿ ಹಾಗೂ ಜಾಲಹಳ್ಳಿ ತಲಾ 1 ಸೇರಿದಂತೆ ಒಟ್ಟು 9 ಬೈಕ್‌ ಕಳವು ಪ್ರಕರಣ ಪತ್ತೆಯಾಗಿವೆ. ಬೈಕ್‌ಗಳ ಮಾಲೀಕರ ವಿಳಾಸ ಪತ್ತೆಗೆ ಮುಂದಾಗಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.