ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಆತ್ಮ*ಹತ್ಯೆಗೆ ಶರಣಾದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಡ್ಡಮಧುರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.

ತುಮಕೂರು (ಜು.16): ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ಆತ್ಮ*ಹತ್ಯೆಗೆ ಶರಣಾದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಡ್ಡಮಧುರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಎಡೆಯೂರು ಹತ್ತಿರದ ನಾಗಸಂದ್ರ ಗ್ರಾಮ ಪಂಚಾಯತಿ ಬಿಲ್‌ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಶಿಕುಮಾರ್ (42)ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಅಮೃತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಶಿಕುಮಾರ್ ಆತ್ಮ*ಹತ್ಯೆಗೆ ಕಾರಣ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವೃದ್ಧ ದಂಪತಿ ಆತ್ಮ*ಹತ್ಯೆ: ತಮ್ಮನ್ನು ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದರಿಂದ ಮನನೊಂದು ವೃದ್ಧ ದಂಪತಿ ಆತ್ಮ*ಹತ್ಯೆಗೆ ಶರಣಾಗಿರುವ ಮನ ಕಲಕುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆ.ಪಿ.ನಗರದ 8ನೇ ಹಂತದ ಕೃಷ್ಣಮೂರ್ತಿ (81) ಹಾಗೂ ರಾಧಾ (74) ಮೃತ ದುರ್ದೈವಿಗಳು. ಎರಡು ದಿನಗಳ ಹಿಂದೆ ಅಂಜನಾ ನಗರದ ಕಮಲಮ್ಮ ರಾಮಕೃಷ್ಣಪ್ಪ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಮರುದಿನ ಮೃತರ ಕೋಣೆಗೆ ಆಶ್ರಮದ ಸಿಬ್ಬಂದಿ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಕೃಷ್ಣಮೂರ್ತಿ ಅವರು ನಿವೃತ್ತಿ ಬಳಿಕ ತಮ್ಮ ಪತ್ನಿ ಹಾಗೂ ಮಗನ ಕುಟುಂಬ ಜತೆ ಜೆ.ಪಿ.ನಗರದ 8ನೇ ಹಂತದಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಅವರ ಪುತ್ರ ವಿಜಯ್ ಕೆಲಸದಲ್ಲಿದ್ದಾನೆ. ಆದರೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಅವರನ್ನು ಕಮಲಮ್ಮ ವೃದ್ಧಾಶ್ರಮಕ್ಕೆ ಮಗ ಸೇರಿಸಿದ್ದ. ಮನೆಯಲ್ಲಿ ಅಡುಗೆ ಸೇರಿದಂತೆ ಸಣ್ಣಪುಟ್ಟ ವಿಚಾರಗಳಿಗೆ ಅತ್ತೆ-ಸೊಸೆ ಮಧ್ಯೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಮಗನ ಕುಟುಂಬದಿಂದ ಪ್ರತ್ಯೇಕವಾಗಲು ಕೃಷ್ಣಮೂರ್ತಿ ಯೋಜಿಸಿದ್ದರು. ಅಲ್ಲದೆ ತಮಗೆ ಬೇರೆ ಮನೆ ಮಾಡಿಕೊಡುವಂತೆ ಸಹ ಮಗನಿಗೆ ಅವರು ಕೋರಿದ್ದರು. ಆದರೆ ಈ ಮನವಿಗೆ ಆತ ಸ್ಪಂದಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಈ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ಕೂಡ ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಪೋಷಕರನ್ನು ವಿಜಯ್ ಸೇರಿಸಿದ್ದ. ಕೆಲ ತಿಂಗಳ ಬಳಿಕ ಮತ್ತೆ ಹೆತ್ತವರನ್ನು ಮನೆಗೆ ಆತ ಕರೆತಂದಿದ್ದ. ಹೀಗಿದ್ದರೂ ಅವರ ಕುಟುಂಬದಲ್ಲಿ ಸಾಮರಸ್ಯ ಮೂಡಲಿಲ್ಲ. ಮನೆಯಲ್ಲಿ ಕೌಟುಂಬಿಕ ಕಲಹ ಮತ್ತೆ ಶುರುವಾಗಿತ್ತು. ಕಳೆದ ಮಾರ್ಚ್‌ನಲ್ಲಿ ಅಂಜಾನಪುರದ ಕಮಲಮ್ಮ ವೃದ್ಧಾಶ್ರಮಕ್ಕೆ ಮತ್ತೆ ಹೆತ್ತವರನ್ನು ವಿಜಯ್ ಕಳುಹಿಸಿದ್ದ. ಈ ಕೌಟುಂಬಿಕ ಗಲಾಟೆ ಹಿನ್ನೆಲೆಯಲ್ಲಿ ಮನನೊಂದು ವೃದ್ಧಾಶ್ರಮದ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸೋಮವಾರ ರಾತ್ರಿ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮರು ದಿನ ಬೆಳಗ್ಗೆ ಮೃತರ ಮನೆಗೆ ವೃದ್ಧಾಶ್ರಮದ ಸಿಬ್ಬಂದಿ ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.