ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಯುವತಿಯೊಬ್ಬಳ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿದೆ. ನ್ಯಾಯ ಪಂಚಾಯ್ತಿ ವಿಫಲವಾದ ನಂತರ ನಡೆದ ಈ ದಾಳಿಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು.
ತುಮಕೂರು(ಜ.31): ಯುವತಿಯೊಬ್ಬಳ ಪ್ರೇಮ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲೇ ಮಚ್ಚುಗಳಿಂದ ಪರಸ್ಪರ ಸಿನಿಮೀಯ ರೀತಿಯಲ್ಲಿ ಬಡಿದಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದ್ದು, ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ನ್ಯಾಯ ಪಂಚಾಯ್ತಿ ವಿಫಲ: ಸಂಧಾನಕ್ಕೆ ಹೋದಲ್ಲೇ ಹೊಡೆದಾಟ!
ಬಿದನಗೆರೆ ಗ್ರಾಮದ ಜಗದೀಶ್ ಎಂಬ ಯುವಕ ಕುಣಿಗಲ್‌ನ ಮಂಜುನಾಥ್ ಎಂಬುವವರ ತಂಗಿಯನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ಪ್ರೇಮ ಪುರಾಣ ಯುವತಿಯ ಸಹೋದರ ಮಂಜುನಾಥ್ ಗೊತ್ತಾಗಿ ಕೋಪಗೊಂಡಿದ್ದ. ಇದೇ ವಿಚಾರವಾಗಿ ಇಂದು ಬೆಳಿಗ್ಗೆ ಕುಣಿಗಲ್‌ನಲ್ಲಿ ಎರಡು ಕಡೆಯವರು ಸೇರಿ ನ್ಯಾಯ ಪಂಚಾಯ್ತಿ ನಡೆಸಿದ್ದರು. ಆದರೆ, ಸುದೀರ್ಘ ಚರ್ಚೆಯ ನಂತರವೂ ಮಾತುಕತೆ ವಿಫಲವಾಗಿ ಜಗಳ ವಿಕೋಪಕ್ಕೆ ಹೋಗಿದೆ.
ಮಚ್ಚು ಹಿಡಿದು ಅಟ್ಟಾಡಿಸಿದ ಸಹೋದರ: ಇಬ್ಬರಿಗೆ ಗಂಭೀರ ಗಾಯ
ನ್ಯಾಯ ಪಂಚಾಯ್ತಿ ಮುಗಿಸಿ ಮಂಜುನಾಥ್ ಮತ್ತು ಸ್ನೇಹಿತರು ವಾಪಸ್ ಹೋಗುತ್ತಿದ್ದಾಗ, ಜಗದೀಶ್ ಮತ್ತು ಆತನ ಗೆಳೆಯ ವಿಜಯ್ ಅಡ್ಡಗಟ್ಟಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ರೊಚ್ಚಿಗೆದ್ದ ಯುವತಿಯ ಸಹೋದರ ಮಂಜುನಾಥ್ ಹಾಗೂ ಆತನ ಸ್ನೇಹಿತ ನವೀನ್ ಮಚ್ಚು ತಂದು ಜಗದೀಶ್ ಹಾಗೂ ವಿಜಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ವೇಳೆ ನಡುರಸ್ತೆಯಲ್ಲೇ ಮಚ್ಚಿನಿಂದ ದಾಳಿ ನಡೆಸಿದೆ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಮಚ್ಚಿನ ಏಟಿನಿಂದ ತೀವ್ರವಾಗಿ ಗಾಯಗೊಂಡು ಬಿದ್ದಿದ್ದ ಜಗದೀಶ್ ಮತ್ತು ವಿಜಯ್ ಅವರನ್ನು ತಕ್ಷಣ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಸ್ಥಿತಿ ಗಂಭೀರವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕುಣಿಗಲ್ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.


