ರಾಯಚೂರು DC ಹೆಸರಲ್ಲಿ ವಂಚನೆಗೆ ಯತ್ನ, ಸಚಿವರ ಸಭೆಯಲ್ಲೇ ಅಧಿಕಾರಿಗಳಿಗೆ ಬಂತು ಮೆಸೇಜ್
* ರಾಯಚೂರು ಜಿಲ್ಲಾಧಿಕಾರಿ ಹೆಸರಿನಲ್ಲಿ ವಂಚನೆಗೆ ಯತ್ನ
* ರಾಯಚೂರು ಡಿಸಿ ಫೋಟೋ ಬಳಕೆ ಮಾಡಿ ವಂಚನೆಗೆ ಪ್ಲಾನ್
* ವಾಟ್ಸಾಪ್ ಡಿಪಿಯಲ್ಲಿ ಜಿಲ್ಲಾಧಿಕಾರಿ ಪೋಟೋ ಇಟ್ಟು ಮೆಸೇಜ್
* ಅಮೆಜಾನ್ ಪೇ ಮೂಲಕ ಗಿಫ್ಟ್ ಕಾರ್ಡ್ ಖರೀದಿಸಲು ಸೂಚನೆ
ವರದಿ : ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು, (ಜೂನ್.28): ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಸೈಬರ್ ಕ್ರೈಂ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಬಾಗಲಕೋಟೆ ಮತ್ತು ವಿಜಯಪೂರ ಮೂಲದ ಟೀಂ ಒಂದು ಎಸಿಬಿ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಫೋನ್ ಮಾಡಿ ದಾಳಿ ಮಾಡುತ್ತೇವೆ..ನೀವೂ ನಮ್ಮ ಖಾತೆಗೆ ಹಣ ಜಮಾ ಮಾಡಿದ್ರೆ ದಾಳಿ ಮಾಡಲ್ಲವೆಂದು ಒತ್ತಾಯಿಸಿತು.
ಆ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶ್ವಸಿಯಾಗಿದ್ರು. ಸೈಬರ್ ಕ್ರೈಂ ಪೊಲೀಸರು ಎಷ್ಟೇ ಪ್ರಕರಣಗಳು ಭೇದಸಿದರು. ಇತ್ತೀಚಿನ ದಿನಗಳಲ್ಲಿ ಖದೀಮರು ನಾನಾ ದಾರಿಗಳನ್ನು ಹುಡುಕಿಕೊಂಡು ಹಣ ದೊಚ್ಚಲು ಹತ್ತಾರು ದಾರಿಗಳನ್ನು ಹುಡುಕಲು ಮುಂದಾಗಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿ ಹೆಸರಿನಲ್ಲಿ ವಂಚನೆಗೆ ಯತ್ನ
ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ ಹೆಸರಿನಲ್ಲಿಯೂ ಖದೀಮರು ವಂಚನೆ ಮಾಡಲು ಹೋಗಿ ಫೇಲ್ ಆಗಿದ್ದಾರೆ. ರಾಯಚೂರು ಡಿಸಿ ಚಂದ್ರಶೇಖರ್ ನಾಯಕ ಅವರ ಫೋಟೋ ವಾಟ್ಸಪ್ ಡಿಪಿಗೆ ಇಟ್ಟು ವಂಚನೆಗೆ ಯತ್ನಿಸಿದರು. ಡಿಸಿ ಹೆಸರು ಮತ್ತು ವಾಟ್ಸಾಪ್ ಡಿಪಿಗೆ ಅವರ ಫೋಟೋವನ್ನು ಬಳಕೆ ಮಾಡಿ 8838440508 ಮೊಬೈಲ್ ನಂಬರ್ ನಿಂದ ವಾಟ್ಸಾಪ್ ಮೂಲಕ ಜಿಲ್ಲೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಮೆಸೇಜ್ ಮಾಡಿದ್ರು.
ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಗೆ ಬೆದರಿಕೆ, ಗೂಗಲ್ ಪೇ ಮೂಲಕ ಹಣಕ್ಕೆ ಬೇಡಿಕೆ
ಅಮೆಜಾನ್ ಪೇ ಮೂಲಕ ಗಿಫ್ಟ್ ಕಾರ್ಡ್ ಗಳನ್ನು ಖರೀದಿಸುವಂತೆ ಮೆಸೇಜ್ ರವಾನಿಸಿದರು. ಜಿಲ್ಲಾಧಿಕಾರಿ ಫೋಟೋ ಇರುವ ವಾಟ್ಸಾಪ್ ಮೆಸೇಜ್ ಕಂಡು ಅಧಿಕಾರಿಗಳು ಶಾಕ್ ಆಗಿದ್ರು. ಅಷ್ಟೇ ಅಲ್ಲದೇ ಖದೀಮರು ಜಿಲ್ಲಾಧಿಕಾರಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಯೋಗಕ್ಷೇಮ ಕೂಡ ಮೆಸೇಜ್ ನಲ್ಲಿ ವಿಚಾರಣೆ ಮಾಡಿದ್ರು. ಆ ಬಳಿಕ ಅಮೆಜಾನ್ ಪೇ ಮೂಲಕ ಗಿಫ್ಟ್ ಕಾರ್ಡ್ ಗಳನ್ನು ಖರೀದಿಸುವಂತೆ ಮೆಸೇಜ್ ಮಾಡಿದ್ರು. ಕೆಲ ಅಧಿಕಾರಿಗಳು ವಾಟ್ಸಾಪ್ ಚಾಟ್ ಮಾಡಿ ಸುಮ್ಮನೇ ಆಗಿದ್ರು.
ಕೇಂದ್ರ ಸಚಿವರ ಸಭೆಯಲ್ಲಿಯೇ ಅಧಿಕಾರಿಗಳೇ ಬಂತು ಮೆಸೇಜ್!
ಇಂದು(ಮಂಗಳವಾರ) ರಾಯಚೂರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ ಕೂಡ ಸಭೆಯಲ್ಲಿ ಇದ್ರು. ಇಂತಹ ವೇಳೆಯಲ್ಲಿ ಖದೀಮರು ಜಿಲ್ಲಾಧಿಕಾರಿ ಎಂದು ಹೇಳಿಕೊಂಡು ಅಧಿಕಾರಿಗಳಿಗೆ ಮೆಸೇಜ್ ಮಾಡಲು ಶುರು ಮಾಡಿದರು. ಆ ವೇಳೆ ಅಧಿಕಾರಿಗಳು ಜಿಲ್ಲಾಧಿಕಾರಿ ಎದುರೇ ಇದ್ದಾರೆ. ಆದ್ರೆ ನಮಗೆ ಮೆಸೇಜ್ ಯಾರು ಮಾಡುತ್ತಿದ್ದಾರೆ ಎಂದು ಅನುಮಾನ ಬಂದಿದೆ. ತಕ್ಷಣವೇ ಅಧಿಕಾರಿಗಳು ಸರ್ ಈ ವಾಟ್ಸಾಪ್ ನಂಬರ್ ನಿಮ್ಮದಾ ಅಂತ ಕೇಳಿದ್ದಾರೆ. ಆಗ ಜಿಲ್ಲಾಧಿಕಾರಿಗಳು ಅವರ ವಾಟ್ಸಾಪ್ ಮೆಸೇಜ್ ಗಳು ನೋಡಿ ಶಾಕ್ ಆಗಿದ್ರು.
ಸೈಬರ್ ಠಾಣೆಗೆ ದೂರು
ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೆಸರಿನಲ್ಲಿ ಯಾರೋ ಖದೀಮರು ವಂಚನೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಅಲರ್ಟ್ ಆಗಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಫೇಕ್ ಮೆಸೇಜ್ ಬಂದ್ರೆ ದೂರು ನೀಡಲು ಸೂಚನೆ ನೀಡಿದ್ದಾರೆ. ಜೊತೆಗೆ ಖದೀಮರ ವಿರುದ್ಧ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಪ್ರಕರಣ ಕೂಡ ದಾಖಲು ಮಾಡಲು ಮುಂದಾಗಿದ್ದಾರೆ.
ಲೋನ್ ಆ್ಯಪ್ ಮುಖಾಂತರ ವಂಚನೆಗೆ ಯತ್ನ :
ಇಷ್ಟು ದಿನಗಳ ಕಾಲ ಮೊಬೈಲ್ ಗಳಿಗೆ ಫೋನ್ ಮಾಡಿ, ನಾವು ಬ್ಯಾಂಕ್ ನವರು ನಿಮಗೆ ಒಂದು ಮೆಸೇಜ್ ಬಂದಿದೆ ಎಂದು ಹೇಳಿ ಒಟಿಪಿ ಪಡೆದು ವಂಚನೆ ಮಾಡುತ್ತಿದ್ರು. ಆದ್ರೆ ಇತ್ತೀಚಿಗೆ ಟೆಸ್ಟ್ ಮೆಸೇಜ್ ಕಳುಹಿಸಿ.. ಅದರಲ್ಲಿ ಒಂದು ಲಿಂಕ್ ಕಳುಹಿಸಿ ಆ ಲಿಂಕ್ ಒತ್ತಿದ ತಕ್ಷಣವೇ ಖದೀಮರು ತಮಗೆ ಬೇಕಾದ ದಾಖಲೆಗಳು ಪಡೆದು ಬ್ಲಾಕ್ ಮೆಲ್ ಮಾಡುವ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ ಹತ್ತಾರು ಪ್ರತಿಷ್ಠಿತ ಬ್ಯಾಂಕ್ ನ ಹೆಸರು ಹೇಳಿ ನಿಮ್ಮ ನಂಬರ್ ಗೆ ಲೋನ್ ಆಫರ್ ಇದೆ. ನಿಮಗೆ ಉಚಿತ ಬಡ್ಡಿದರದಲ್ಲಿ ಲೋನ್ ನೀಡುತ್ತೇವೆ ಎಂದು ದಾಖಲೆಗಳು ಪಡೆದು ಮೋಸ ಮಾಡುವ ಹತ್ತಾರು ಕಂಪನಿಗಳು ಕೆಲಸ ಮಾಡುತ್ತಿವೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಮೊಬೈಲ್ ಬಳಕೆ ಮಾಡುವುದರ ಜೊತೆಗೆ ಖದೀಮರ ಫೋನ್ ಗಳು ಬಂದಾಗ ಎಚ್ಚರದಿಂದ ವ್ಯವಹಾರ ಮಾಡಬೇಕಾಗಿದೆ.