ಬೆಂಗಳೂರು(ಆ.27): ಕೆಲ ದಿನಗಳ ಹಿಂದೆ ಎಂಇಎಸ್‌ ರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಘಟಕದಲ್ಲಿ 27.82 ಲಕ್ಷ ದೋಚಿದ್ದ ಸೋದರರು ಸೇರಿ ಮೂವರನ್ನು ಜಾಲಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಸಂಜಯನಗರದ ಸಮರ್‌ ಜೋತ್‌ ಸಿಂಗ್‌, ಆತನ ಸಹೋದರ ಯಹ್‌ಮಾ ಮತ್ತು ಜಾಫರ್‌ ಬಂಧಿತರಾಗಿದ್ದು, ಆರೋಪಿಗಳಿಂದ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ಜಪ್ತಿ ಮಾಡಲಾಗಿದೆ. ಜಾಲಹಳ್ಳಿ ಹತ್ತಿರದ ಎಂಇಎಸ್‌ ರಸ್ತೆಯಲ್ಲಿ ಆ.10ರ ರಾತ್ರಿ 1.30ರಲ್ಲಿ ಕೆನರಾ ಬ್ಯಾಂಕ್‌ ಎಟಿಎಂ ಘಟಕದಲ್ಲಿ ಯಂತ್ರವನ್ನು ಒಡೆದು ಹಣ ದೋಚಿದ್ದರು. ಗ್ಯಾಸ್‌ ಕಟರ್‌ ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೆಂದ್ರ ಕುಮಾರ್‌ ಮೀನಾ ತಿಳಿಸಿದ್ದಾರೆ.

ಎಟಿಎಂ ದೋಚಲು ಬಂದ ಸೋದರರು:

ಪಂಜಾಬ್‌ ಮೂಲದ ಸಮರ್‌ ವೃತ್ತಿಪರ ಕಳ್ಳನಾಗಿದ್ದು, ಆತನ ಮೇಲೆ ರಾಜ್ಯ ಹಾಗೂ ಅನ್ಯ ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆತನ ಮೂಲ ಹೆಸರು ಗುರ್‌ಮಿತ್‌ ಸಿಂಗ್‌ ಆಗಿತ್ತು. ಅಪರಾಧ ಕೃತ್ಯಗಳಲ್ಲಿ ಹೆಸರು ಮರೆಮಾಚುವ ದೃಷ್ಟಿಯಿಂದ ಸಮರ್‌ ಜೋತ್‌ ಸಿಂಗ್‌ ಎಂದೂ ಬದಲಾಯಿಸಿಕೊಂಡಿದ್ದ. 2004ರಲ್ಲಿ ಬೂಟಾ ಸಿಂಗ್‌ ಎಂಬಾತನನ್ನು ಕೊಲೆ ಮಾಡಿ ಜೈಲು ಸೇರಿದ ಆತ, ಜಾಮೀನು ಪಡೆದ ಬಳಿಕ ಸಮರ್‌ ಹೆಸರಿನಲ್ಲಿ ಕರ್ನಾಟಕ್ಕೆ ಪ್ರವೇಶಿಸಿದ. ಆರಂಭದಲ್ಲಿ ಕೆಲ ತಿಂಗಳು ಬಟ್ಟೆ ವ್ಯಾಪಾರ ಮಾಡಿ ನಷ್ಟಅನುಭವಿಸಿದ ಬಳಿಕ ಎಟಿಎಂಗಳಲ್ಲಿ ಹಣ ಲೂಟಿಗಿಳಿದ ಎಂದು ಪೊಲೀಸರು ತಿಳಿಸಿದ್ದಾರೆ.

ಖತರ್ನಾಕ್ ಎಟಿಎಂ ಕಳ್ಳರು.. ಅಬ್ಬಬ್ಬಾ ಇವರ ವಾಕಿಂಗ್ ಸ್ಟೈಲ್ ನೋಡಿ !

ಇದಕ್ಕೆ ಆತನ ಸೋದರ ಯಹ್‌ಮಾ ಸಾಥ್‌ ಕೊಟ್ಟಿದ್ದಾನೆ. 2019ರಲ್ಲಿ ಎಟಿಎಂ ಕಳ್ಳತನ ಪ್ರಕರಣದಲ್ಲಿ ಸಮರ್‌ ಬಂಧನವಾಗಿತ್ತು. ಅದೇ ವೇಳೆ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಜಾಫರ್‌ ಸಹ ಜೈಲು ಸೇರಿದ್ದ. ಆಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಮರ್‌ಗೆ ಜಾಫರ್‌ ಪರಿಚಯವಾಗಿದೆ. ಇದೇ ಜೂನ್‌ನಲ್ಲಿ ಸಮರ್‌ನನ್ನು ಜಾಮೀನು ಕೊಡಿಸಿ ಬಿಡುಗಡೆಗೊಳಿಸಿದ ಜಾಫರ್‌, ನಂತರ ಆ ಸೋದರರ ಜತೆ ಸೇರಿ ಎಟಿಎಂ ಘಟಕದಲ್ಲಿ ಹಣ ದೋಚಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕ್ಯಾಮೆರಾದಲ್ಲಿ ಕಳ್ಳರ ಮುಖ ಚಹರೆ ಸೆರೆ

ಜಾಲಹಳ್ಳಿ ಹತ್ತಿರದ ಎಂಇಎಸ್‌ ರಸ್ತೆಯಲ್ಲಿ ಆ.10ರ ತಡರಾತ್ರಿ 1.30ರಲ್ಲಿ ಕೆನರಾ ಬ್ಯಾಂಕ್‌ ಎಟಿಎಂ ಯಂತ್ರವನ್ನು ಗ್ಯಾಸ್‌ ಕಟರ್‌ ನಿಂದ ಕತ್ತರಿಸಿ .27.82 ಲಕ್ಷವನ್ನು ಆರೋಪಿಗಳು ದೋಚಿದ್ದರು. ಕೃತ್ಯಕ್ಕೂ ಮುನ್ನ ಎಟಿಎಂ ಘಟಕದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ನಾಶಗೊಳಿಸಿದ್ದರು. ಆದರೆ ಹಣ ದೋಚಿ ಪರಾರಿಯಾಗುವ ವೇಳೆ ಸ್ಥಳದಲ್ಲೇ ಗ್ಯಾಸ್‌ ಕಟ್ಟರ್‌ ಬಿಟ್ಟು ಪರಾರಿಯಾಗಿದ್ದರು. ಇದರ ಬೆನ್ನಹತ್ತಿದ್ದಾಗ ಆರೋಪಿಗಳ ಸುಳಿವು ಸಿಕ್ಕಿತು ಎಂದು ಡಿಸಿಪಿ ಧರ್ಮೇಂದ್ರ ಮೀನಾ ತಿಳಿಸಿದ್ದಾರೆ.

ಗ್ಯಾಸ್‌ ಕಟ್ಟರ್‌ ಖರೀದಿಸಿದ್ದ ಅಂಗಡಿ ಪತ್ತೆ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಅನಂತರ ಹಣ ದೋಚಲು ಎಟಿಎಂ ಘಟಕ ಪ್ರವೇಶಿಸಿದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ಸಮರ್‌ ತಂಡದ ಮುಖಚಹರೆ ಸೆರೆಯಾಗಿತ್ತು. ಈ ಸುಳಿವು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸೆರೆಯಾದರು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಕಾರು ಖರೀದಿಸಿದ್ದ ಸಮರ್‌

ಸಂಜಯನಗರದಲ್ಲಿ ಸ್ವಂತ ಮನೆ ಖರೀದಿಸಿ ಸಮರ್‌ ಸೋದರರು ನೆಲೆಸಿದ್ದರು. ಎಟಿಎಂ ದೋಚಿದ್ದ ಹಣದಲ್ಲಿ ಸ್ಕೋಡಾ ಕಾರು ಕೊಂಡಿದ್ದ. ಈಗ ಆರೋಪಿಗಳಿಂದ 17.34 ಲಕ್ಷ ನಗದು, ಕಾರು ಹಾಗೂ ಬುಲೆಟ್‌ ಸೇರಿ ಮೂವರು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಭೇದಿಸಿದ ಪೊಲೀಸರಿಗೆ 50 ಸಾವಿರ ಬಹುಮಾನ ನೀಡಿ ಆಯುಕ್ತ ಕಮಲ್‌ ಪಂತ್‌ ಅಭಿನಂದಿಸಿದ್ದಾರೆ.