* ನಕಲಿ ವೆಬ್ ಸೃಷ್ಟಿಸಿ ಕಿಡ್ನಿ ದಾನಿಗಳಿಗೆ ಟೋಪಿ* ಬೆಂಗ್ಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿ* ಕಿಡ್ನಿ ದಾನಿಗಳಿಗೆ 4 ಕೋಟಿ ಆಮಿಷದ ಜಾಹೀರಾತು
ಬೆಂಗಳೂರು(ಏ.26): ನಗರದ ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ ಕಿಡ್ನಿ ದಾನ(Donate Kidney) ಮಾಡಿದರೆ .4 ಕೋಟಿ ನೀಡುವುದಾಗಿ ಜಾಹೀರಾತು ಹಾಕಿ ಬಳಿಕ ಸಂಪರ್ಕಕ್ಕೆ ಬಂದವರ ಬಳಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಲಕ್ಷಾಂತರ ರು. ಪಡೆದು ವಂಚಿಸುತ್ತಿದ್ದ ಮೂವರು ವಿದೇಶಿ ಪ್ರಜೆಗಳನ್ನು ಈಶಾನ್ಯ ಸೈಬರ್ ಕ್ರೈಂ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ನೈಜೀರಿಯಾ(Nigeria) ಮೂಲದ ಮಿರಾಕಲ್ ಅಲಿಯಾಸ್ ಮಿಮಿ (28), ಸೋವ್ ಕಾಲಿನ್ಸ್ ನಿ (32), ಘಾನಾ ಮೂಲದ ಮ್ಯಾಥ್ಯೂ ಇನೋಸೆಂಟ್ ಅಲಿಯಾಸ್ ಪಾಲ್ (38) ಬಂಧಿತರು. ಇವರಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಬಡವರ ಹಣವನ್ನು ನುಂಗಿದ ಪೋಸ್ಟ್ ಮ್ಯಾನ್
ಇತ್ತೀಚೆಗೆ ಜಯನಗರದ ಸಾಗರ್ ಆಸ್ಪತ್ರೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್(Fake Website) ತೆರೆದು ಕಿಡ್ನಿ ಕಸಿ ಮಾಡಲಾಗುತ್ತದೆ. ಕಿಡ್ನಿ ದಾನ ಮಾಡುವವರು ಹಾಗೂ ಕಿಡ್ನಿ ಬೇಕಿದ್ದವರು ಸಂಪರ್ಕಿಸುವಂತೆ ಆರೋಪಿಗಳು ಜಾಹೀರಾತು ನೀಡಿದ್ದರು. ಇದನ್ನು ಗಮನಿಸಿದ್ದ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಮಹೇಂದ್ರ ಕುಮಾರ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು(Accused) ನಗರದ ಸಾಗರ್, ಬ್ಯಾಪ್ಟಿಸ್ಟ್, ಕಾವೇರಿ ಆಸ್ಪತ್ರೆ ಸೇರಿದಂತೆ ನಗರದ ಹತ್ತಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳ ಹೆಸರಿನ ನಕಲಿ ವೆಬ್‌ಸೈಟ್ ತೆರೆದಿದ್ದರು. ನಮ್ಮ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಲಾಗುತ್ತಿದೆ. ಕಿಡ್ನಿ ದಾನ ಮಾಡುವವರು ಇದ್ದಲ್ಲಿ ಮುಂಗಡವಾಗಿ .2 ಕೋಟಿ ಹಾಗೂ ಕಿಡ್ನಿ ಕಸಿ ಪ್ರಕ್ರಿಯೆ ಮುಗಿದ ಬಳಿಕ .2 ಕೋಟಿ ನೀಡಲಾಗುವುದು. ಅಂತೆಯೆ ತಮ್ಮ ಬಳಿ ಕಿಡ್ನಿ ಮಾರಾಟಕ್ಕೆ ಇದ್ದು ಕೊಂಡುಕೊಳ್ಳುವವರು ಇದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದರು.
ಈ ಜಾಹೀರಾತು ನೋಡಿದ ಹಲವರು ಅಪಾರ ಹಣದಾಸೆಗೆ ಕಿಡ್ನಿ ಮಾರಾಟ ಮಾಡಲು ಆರೋಪಿಗಳ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದಾರೆ. ಈ ವೇಳೆ ಆರೋಪಿಗಳು ನೋಂದಣಿ ಶುಲ್ಕ, ಮೆಡಿಕಲ್ ಶುಲ್ಕ, ವೈದ್ಯರ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳ ಹೆಸರಿನಲ್ಲಿ ಆನ್‌ಲೈನ್ ಮುಖಾಂತರ ಲಕ್ಷಾಂತರ ರು. ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಮುಂಗಡ .2 ಕೋಟಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಆದರೆ, ಶೇ.30ರಷ್ಟುಹಣವನ್ನು ನಮ್ಮ ಬ್ಯಾಂಕ್ ಖಾಯೆಗೆ ಜಮೆ ಮಾಡಿದ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಹಣವನ್ನು ಡ್ರಾ ಮಾಡಬಹುದು ಎಂದು ಹೇಳುತ್ತಿದ್ದರು. ಬಳಿಕ ಹಣ ಪಡೆದು ಸಂಪರ್ಕಕ್ಕೆ ಸಿಗದೆ ವಂಚಿಸುತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಡಿಆರ್ ಆಧರಿಸಿ ಬಂಧನ
ಸಾಗರ ಆಸ್ಪತ್ರೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ನಕಲಿ ವೆಬ್‌ಸೈಟ್, ಅದರಲ್ಲಿ ಹಾಕಿದ್ದ ಮೊಬೈಲ್ ಸಂಖ್ಯೆಗಳ ಜಾಡು ಹಿಡಿದು ಸಿಡಿಆರ್ ಮುಖಾಂತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಈ ವೇಳೆ ಆರೋಪಿಗಳು ಹೆಗಡೆ ನಗರ ಹಾಗೂ ಎಚ್‌ಬಿಆರ್ ಲೇಔಟ್‌ನಲ್ಲಿ ಓಡಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಈ ವಂಚನ ರಹಸ್ಯ ಬಯಲಾಗಿದೆ.
ಚಾಮರಾಜನಗರ: ಜಮೀನು ಮಾರಿ ಸಾಲ ತೀರಿಸಿ ಎಂದು ಪಟ್ಟಿ ಮಾಡಿಟ್ಟು ಯುವಕ ಆತ್ಮಹತ್ಯೆ
ವೀಸಾ ಅವಧಿ ಮುಕ್ತಾಯ
ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿರುವ ಮೂವರು ಆರೋಪಿಗಳು, ಪಾಸ್‌ಪೋರ್ಚ್ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ನೆಲೆಸಿದ್ದರು. ಮೋಜಿನ ಜೀವನ ನಡೆಸುವ ಸಲುವಾಗಿ ಸುಲಭವಾಗಿ ಹಣ ಸಂಪಾದಿಸಲು ಈ ವಂಚನೆ ಮಾರ್ಗ ಅನುಸರಿಸಿದ್ದರು. ಅದರಂತೆ ಹಲವರಿಗೆ ವಂಚಿಸಿ ಮೋಜು-ಮಸ್ತಿ ಮಾಡಿಕೊಂಡು ಕಾಲ ಕಳೆಯುತ್ತಿದ್ದರು. ಆರೋಪಿಗಳು ಈವರೆಗೆ ಎಷ್ಟುಮಂದಿಗೆ ವಂಚನೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಆರೋಪಿಗಳಿಂದ ಜಪ್ತಿ ಮಾಡಿರುವ ಲ್ಯಾಪ್‌ಟಾಪ್‌ನಲ್ಲಿ ವಂಚನೆಗೆ ಒಳಗಾದ ಕೆಲವರ ಮಾಹಿತಿ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆಗೆ ಒಳಗಾದವರು ದೂರು ನೀಡಲು ಮನವಿ
ಸಾರ್ವಜನಿಕರು ಇಂತಹ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡುವಾಗ ನೈಜ ದಾಖಲೆಗಳನ್ನು ಪರಿಶೀಲಿಸಬೇಕು. ಸ್ಥಳೀಯ ವ್ಯಕ್ತಿಗಳ ಕೆವೈಸಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ಸಿಮ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ತೆರೆದು ಅಪರಾಧ ಎಸೆಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕು. ಇನ್ನು ಆನ್‌ಲೈನ್ ಮುಖಾಂತರ ಕಿಡ್ನಿದಾನ ಅಥವಾ ಕಿಡ್ನಿ ಮಾರಾಟಕ್ಕೆ ಯತ್ನಿಸಿ ಹಣ ಕಳೆದುಕೊಂಡು ವಂಚನೆಗೆ ಒಳಗಾಗಿದ್ದರೆ ಈಶಾನ್ಯ ಸೈಬರ್ ಕ್ರೈಂ ಠಾಣೆಗೆ ಸಂಪರ್ಕಿಸುವಂತೆ ಅಧಿಕಾರಿಗಳು ಕೋರಿದ್ದಾರೆ.
