ಬೆಂಗಳೂರು(ಸೆ.06): ರಾಗಿಣಿ ಸ್ನೇಹಿತ ಹಾಗೂ ಸಾರಿಗೆ ಇಲಾಖೆ ಉದ್ಯೋಗಿ ರವಿಶಂಕರ್‌ ಅವರನ್ನು ಎರಡು ವರ್ಷಗಳ ಹಿಂದಿನ ಹಳೆಯ ಮಾದಕ ವಸ್ತು ಮಾರಾಟ ಪ್ರಕರಣ ಸಂಬಂಧ ಬಂಧಿಸಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

"

2018ರಲ್ಲಿ ಗಾಂಜಾ ಮಾರಾಟ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆ ಕೃತ್ಯದಲ್ಲಿ ಪ್ರತೀಕ್‌ ಶೆಟ್ಟಿಸೇರಿದಂತೆ ಇತರೆ ಆರೋಪಿಗಳು ಬಂಧಿತರಾಗಿದ್ದರು. ಅಂದು ವಿಚಾರಣೆ ವೇಳೆ ಸರ್ಕಾರಿ ನೌಕರ ರವಿಶಂಕರ್‌, ಚಲನಚಿತ್ರ ನಟರು ಹಾಗೂ ಉದ್ಯಮಿಗಳಿಗೆ ತಾನು ಗಾಂಜಾ ಪೂರೈಸಿದ್ದೆ ಎಂದು ಪ್ರತೀಕ್‌ ಶೆಟ್ಟಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.

ಆ.21ರಂದು ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಕಿಂಗ್‌ಪಿನ್‌ ಡಿ.ಅನಿಕಾ ತಂಡವು ಎನ್‌ಸಿಬಿ ಬಲೆಗೆ ಬಿದ್ದಿತ್ತು. ಈ ಪ್ರಕರಣದ ಬಳಿಕ ಎಚ್ಚೆತ್ತ ಸಿಸಿಬಿ ಪೊಲೀಸರು, ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿದ್ದ ಹಳೇ ಪ್ರಕರಣಕ್ಕೆ ಮರು ಜೀವ ನೀಡಿದರು. ಅಂತೆಯೇ ಪ್ರತೀಕ್‌ ಶೆಟ್ಟಿ ಹೇಳಿಕೆ ಆಧರಿಸಿ ರವಿಶಂಕರ್‌ನನ್ನು ಬಂಧಿಸಿ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆದಿದ್ದಾರೆ. ರವಿಶಂಕರ್‌ ಮೊಬೈಲ್‌ ಕರೆಗಳ ಪರಿಶೀಲಿಸಿದಾಗ ರಾಗಿಣಿ ಹಾಗೂ ಇತರರ ಸಂಪರ್ಕ ಜಾಲ ಬೆಳಕಿಗೆ ಬಂದಿತ್ತು.

ಮೊದಲು ಗಾಂಜಾ, ಬಳಿಕ ಎಂಡಿಎಂಎ: ಹೌದು, ನಾನು ಡ್ರಗ್ಗಿಣಿ: ನಟಿ ರಾಗಿಣಿ ತಪ್ಪೊಪ್ಪಿಗೆ!

ಹಳೆ ಪ್ರಕರಣದ ಕಸ್ಟಡಿ ಮುಗಿದ ನಂತರ ಸಿಸಿಬಿ ಪೊಲೀಸರು, ಈಗ ಹೊಸದಾಗಿ ನಟಿ ರಾಗಿಣಿ ಸೇರಿದಂತೆ ಇತರರ ವಿರುದ್ಧ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲೂ ಕೂಡಾ ರವಿಶಂಕರ್‌ನನ್ನು ಆರೋಪಿ ಎಂದೂ ನ್ಯಾಯಾಲಯಕ್ಕೆ ಮಾಹಿತಿ ನೀಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ರವಿಶಂಕರ್‌ ವಿರುದ್ಧ ಆರೋಪಗಳ ವಿವರ

ಆರೋಪ.1

ಸರ್ಕಾರದ ನಿಷೇಧಿಸಿದ ಮಾದಕ ವಸ್ತು ಹಾಗೂ ಮತ್ತು ತರುವ ವಸ್ತುಗಳ ಬಳಕೆ ಹಾಗೂ ಮಾರಾಟ (ಎನ್‌ಡಿಪಿಎಸ್‌ ಕಾಯ್ದೆ 21 ಸಿ) ಕಾಯ್ದೆಯಡಿ ಆರೋಪವಾಗಿದೆ. ಈ ಕೃತ್ಯವು ಸಾಬೀತಾದರೆ ಆರೋಪಿಗಳಿಗೆ ಕನಿಷ್ಠ 10 ವರ್ಷಗಳಿಂದ ಗರಿಷ್ಠ 20 ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಬಹುದು. .10 ಲಕ್ಷದಿಂದ .20 ಲಕ್ಷ ದಂಡ ಹಾಕಲು ಅವಕಾಶವಿದೆ.

ಆರೋಪ.2

ಅಪರಾಧ ಒಳ ಸಂಚು ರೂಪಿಸಿರುವುದು (ಐಪಿಸಿ 120 ಬಿ). ಅಂದರೆ ಡ್ರಗ್ಸ್‌ ಮಾರಾಟಕ್ಕೆ ಪಾರ್ಟಿ ಆಯೋಜನೆ ಮಾಡಿರುವುದು ಸಂಚು ಎಂದು ಪರಿಗಣಿಸಲಾಗಿದೆ. ಈ ಕೃತ್ಯವು ರುಜುವಾತಾದರೆ ತಪ್ಪಿತಸ್ಥರಿಗೆ 2 ವರ್ಷಗಳಿಂದ ಜೀವಾವಧಿ ಶಿಕ್ಷೆ ವಿಧಿಸಬಹುದು.

ಆರೋಪ.3

ಸರ್ಕಾರ ನಿಷೇಧಿಸಿದ ಮಾದಕ ವಸ್ತು ಹಾಗೂ ಮತ್ತು ಭರಿಸುವ ವಸ್ತುಗಳ ಸೇವನೆ (ಎನ್‌ಡಿಪಿಎಸ್‌ ಕಾಯ್ದೆ 27 ಬಿ) ಆರೋಪವಾಗಿದೆ. ಈ ಕೃತ್ಯವು ಸಾಬೀತಾದರೆ ಆರೋಪಿಗಳಿಗೆ ಆರು ತಿಂಗಳು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಬಹುದು.