Asianet Suvarna News Asianet Suvarna News

ಮೊದಲು ಗಾಂಜಾ, ಬಳಿಕ ಎಂಡಿಎಂಎ: ಹೌದು, ನಾನು ಡ್ರಗ್ಗಿಣಿ: ನಟಿ ರಾಗಿಣಿ ತಪ್ಪೊಪ್ಪಿಗೆ!

ಹೌದು, ನಾನು ಡ್ರಗ್ಗಿಣಿ: ನಟಿ ರಾಗಿಣಿ ತಪ್ಪೊಪ್ಪಿಗೆ!| ಗೆಳೆಯ ರವಿಶಂಕರ್‌ ಜೊತೆ ಸೇರಿ ಡ್ರಗ್ಸ್‌ ಸೇವನೆ ಆರಂಭ| ಮೊದಲು ಗಾಂಜಾ, ಬಳಿಕ ಎಂಡಿಎಂಎ: ಬಾಯ್ಬಿಟ್ಟನಟಿ

Sandalwood Actress Ragini Dwivedi Admits That She Is A Drug Addict
Author
Bangalore, First Published Sep 6, 2020, 7:21 AM IST

ಬೆಂಗಳೂರು(ಸೆ.06): ‘ನಾನು ಗೆಳೆಯ ರವಿಶಂಕರ್‌ನಿಂದ ಎಡಿಎಂಎ ಡ್ರಗ್ಸ್‌ ಸೇವನೆ ಆರಂಭಿಸಿದೆ. ಆತನ ಸ್ನೇಹದಿಂದ ತಪ್ಪು ದಾರಿ ತುಳಿದೆ. ಮತ್ತೆಂದಿಗೂ ಈ ರೀತಿ ಮಾಡುವುದಿಲ್ಲ’ ಎಂದು ಸಿಸಿಬಿ ವಿಚಾರಣೆಯಲ್ಲಿ ನಟಿ ರಾಗಿಣಿ ದ್ವಿವೇದಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

"

ಮಾದಕ ವಸ್ತು ಮಾರಾಟ ಜಾಲ ಪ್ರಕರಣದ ಸಂಬಂಧ ಶುಕ್ರವಾರ ಬಂಧಿಸಿದ ಬಳಿಕ ರಾಗಿಣಿಯನ್ನು ಸಿಸಿಬಿ ಏಳು ತಾಸುಗಳ ಸುದೀರ್ಘ ವಿಚಾರಣೆ ನಡೆಸಿತು. ಈ ವೇಳೆ ಸಾರಿಗೆ ಇಲಾಖೆ ನೌಕರ ರವಿಶಂಕರ್‌ನೊಂದಿಗಿನ ಗೆಳೆತನ, ಕನ್ನಡ ಚಲನಚಿತ್ರಗಳಲ್ಲಿ ನಟನೆ, ಐಷಾರಾಮಿ ಪಾರ್ಟಿಗಳು ಹಾಗೂ ಡ್ರಗ್ಸ್‌ ಸೇವನೆ ಸೇರಿದಂತೆ ತನ್ನ ಬದುಕಿನ ಕುರಿತು ಸವಿಸ್ತಾರವಾಗಿ ಆಕೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

‘ಕೆಲ ವರ್ಷಗಳ ಹಿಂದೆ ನನಗೆ ಪೇಜ್‌ ತ್ರಿ ಪಾರ್ಟಿಯೊಂದರಲ್ಲಿ ರವಿಶಂಕರ್‌ ಪರಿಚಯವಾಯಿತು. ಸರ್ಕಾರಿ ಅಧಿಕಾರಿ ಎಂಬ ಕಾರಣಕ್ಕೆ ಆತನ ಮೇಲೆ ವಿಶ್ವಾಸವಿರಿಸಿದೆ. ಕ್ರಮೇಣ ಆತ್ಮೀಯರಾದೆವು. ಈ ಗೆಳೆತನದಲ್ಲೇ ಸುತ್ತಾಟ, ಪಾರ್ಟಿಗೆ ಹೋಗೋದು ಶುರುವಾಯಿತು. ಪಬ್‌, ಕ್ಲಬ್‌, ಪಂಚಾತಾರಾ ಹೋಟೆಲ್‌ ಹಾಗೂ ರೆಸಾರ್ಟ್‌ಗಳಲ್ಲಿ ನಡೆಯುತ್ತಿದ್ದ ಹುಟ್ಟಹಬ್ಬ, ಹೊಸ ವರ್ಷಾಚರಣೆ ಹೀಗೆ ಎಲ್ಲ ಬಗೆಯ ಪಾರ್ಟಿಗಳಿಗೆ ರವಿಶಂಕರ್‌ ಜತೆ ಹಾಜರಾಗಿದ್ದೇನೆ. ಮೊದಮೊದಲು ನನಗೆ ಡ್ರಗ್ಸ್‌ ಸೇವನೆ ಚಟವಿರಲಿಲ್ಲ. ನಾನು ಪಾರ್ಟಿಗಳಲ್ಲಿ ರವಿಶಂಕರ್‌ನಿಂದ ಡ್ರಗ್ಸ್‌ ಸೇವನೆ ಆರಂಭಿಸಿದೆ. ಕೊನೆಗೆ ಅದು ವ್ಯಸನವಾಯಿತು. ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಯಾವತ್ತೂ ತಪ್ಪು ಮಾಡಲಿಲ್ಲ. ನನ್ನ ಫ್ಲ್ಯಾಟ್‌ನಲ್ಲೂ ಸಹ ಡ್ರಗ್ಸ್‌ ಸೇವಿಸಿದೆ’ ಎಂದು ರಾಗಿಣಿ ಹೇಳಿರುವುದಾಗಿ ತಿಳಿದುಬಂದಿದೆ.

ಎಂಡಿಎಂಎ ಡ್ರಗ್ಸ್‌ ಚಟ:

ಡ್ರಗ್ಸ್‌ ಚಟ ಹತ್ತಿಕೊಂಡ ಮೊದಲೆಲ್ಲ ಗಾಂಜಾ ಸೇವಿಸುತ್ತಿದ್ದೆ. ಆಮೇಲೆ ನಿಧಾನವಾಗಿ ಎಂಡಿಎಂಎ ಸೇವಿಸಲಾರಂಭಿಸಿದೆ. ರವಿಶಂಕರ್‌ ಹಾಗೂ ರಾಹುಲ್‌ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಎಂಡಿಎಂಎ ಯಾವಾಗಲೂ ಸಿಗುತ್ತಿತ್ತು. ರವಿಶಂಕರ್‌ನಿಂದಲೇ ಕೆಲವು ಬಾರಿ ಆ ಡ್ರಗ್ಸ್‌ ಪಡೆದು ಮನೆಯಲ್ಲೂ ಇಟ್ಟಿದ್ದೆ ಎಂದು ರಾಗಿಣಿ ಹೇಳಿದ್ದಾರೆ ಎನ್ನಲಾಗಿದೆ.

ರವಿಶಂಕರ್‌ ಸ್ನೇಹ ಮಾಡಿ ತಪ್ಪು ಮಾಡಿದೆ. ಚಲನಚಿತ್ರ, ರಾಜಕೀಯ, ಮಾಧ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನನಗೆ ಸ್ನೇಹಿತರಿದ್ದಾರೆ. ಯಾರೊಂದಿಗೂ ಅಸಭ್ಯವಾಗಿ ನಡೆದು ಕೊಂಡಿಲ್ಲ. ನಮ್ಮ ತಂದೆ ಭಾರತೀಯ ಸೈನ್ಯದಲ್ಲಿದ್ದು ನಿವೃತ್ತರಾಗಿದ್ದಾರೆ. ಮನೆಯಲ್ಲಿ ಸುಸಂಸ್ಕೃತವಾಗಿಯೇ ಬೆಳೆದಿದ್ದೇನೆ. ನಮ್ಮ ಪೋಷಕರ ಜತೆ ಯಲಹಂಕದಲ್ಲಿ ವಾಸವಾಗಿದ್ದೇನೆ. 12 ವರ್ಷಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿದ್ದೇನೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ನಟರ ಜತೆ ನಟಿಸಿದ್ದೇನೆ. ನನ್ನ ಜೀವನಕ್ಕೆ ಕಪ್ಪು ಚುಕ್ಕೆ ಮತ್ತಿಕೊಂಡಿದೆ. ನನ್ನಿಂದ ತಪ್ಪಾಗಿದೆ. ಮತ್ತೆಂದಿಗೂ ಈ ರೀತಿ ತಪ್ಪು ಮಾಡುವುದಿಲ್ಲ ಎಂದು ಗೋಳಾಡಿದ್ದಾರೆ ಎನ್ನಲಾಗಿದೆ.

ಏನಿದು ಎಂಡಿಎಂಎ?

ಮಾಲಿ (molly) ಎಂದೂ ಕರೆಯಲಾಗುವ ಎಂಡಿಎಂಎ (ಮಿಥೈಲೀನ್‌ ಡೈಆಕ್ಸಿ ಮೀಥಾಂಫಿಟಮೈನ್‌) ಎಂಬ ಮಾದಕ ವಸ್ತು ಉನ್ಮಾದ ಬರಿಸಲು ಬಳಸಲಾಗುತ್ತದೆ. ಸೇವಿಸಿದ 30ರಿಂದ 45 ನಿಮಿಷಗಳಲ್ಲಿ ಉಂಟಾಗುವ ಉದ್ರೇಕ ಸುಮಾರು 3ರಿಂದ 6 ತಾಸುಗಳ ವರೆಗೂ ಇರುತ್ತದೆ.

Follow Us:
Download App:
  • android
  • ios