80 ರಷ್ಟು ಹಳೇ ನೋಟು ನೀಡಿದರೆ ಶೇ.20 ರಷ್ಟು ಹೊಸ ನೋಟು ಕೊಡುವುದಾಗಿ ಹೇಳಿ ಬದಲಾಯಿಸಲು ಮುಂದಾಗಿದ್ದ ಆರೋಪಿಗಳು. 

ಬೆಂಗಳೂರು(ಡಿ.31):  ಆರು ವರ್ಷಗಳ ಹಿಂದೆ ರದ್ದುಗೊಂಡಿರುವ 500 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಯತ್ನಿಸಿದ್ದ ಮೂವರು ರಿಯಲ್‌ ಎಸ್ಟೇಟ್‌ ಏಜೆಂಟ್‌ಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪದ್ಮನಾಭನಗರದ ಯೋಗಾನಂದಂ ಅಲಿಯಾಸ್‌ ಯೋಗೇಶ್‌, ಆಂಧ್ರಪ್ರದೇಶದ ವೆಂಕಟ ನಾರಾಯಣ ಅಲಿಯಾಸ್‌ ರಾಜಣ್ಣ ಹಾಗೂ ಹರಿಪ್ರಸಾದ್‌ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಇನ್ನೂ ಕೆಲವರ ಪತ್ತೆಗೆ ತನಿಖೆ ಮುಂದುವರೆದಿದೆ.

ಆರೋಪಿಗಳಿಂದ ನಿಷೇಧಿತ 500 ಮುಖ ಬೆಲೆಯ 88 ಲಕ್ಷ ಮೌಲ್ಯದ ನೋಟುಗಳನ್ನು ಜಪ್ತಿ ಮಾಡಲಾಗಿದೆ. 2016ರಲ್ಲೆ 500 ರು ಮುಖಬೆಲೆಯ ಈ ರದ್ದಾದ ನೋಟುಗಳನ್ನು ಕಮಿಷನ್‌ ಆಸೆ ತೋರಿಸಿ ಜನರಿಗೆ ಬದಲಾವಣೆ ಮಾಡಲು ಕೆಲವರು ಯತ್ನಿಸಿದ್ದಾರೆ. ಅಂತೆಯೇ ಈ ಮೂವರು ಆರೋಪಿಗಳು, ಕೂಡಾ ನಗರದಲ್ಲಿ 80/20ರ ಅನುಪಾತದಲ್ಲಿ ಹಳೇ ಮತ್ತು ಹೊಸ ನೋಟು ಬದಲಾವಣೆಗೆ ಯೋಜಿಸಿದ್ದರು. ತಮಿಳುನಾಡು ಮೂಲದ ವ್ಯಕ್ತಿಯಿಂದ 88 ಲಕ್ಷ ರು ಮೊತ್ತದ ಹಳೇ ನೋಟು ಪಡೆದಿದ್ದ ಯೋಗೇಶ್‌, ರಾಜಣ್ಣ ಹಾಗೂ ಹರಿಪ್ರಸಾದ್‌ ಅವರು, ನಗರದಲ್ಲಿ 80 ರಷ್ಟು ಹಳೇ ನೋಟು ನೀಡಿದರೆ ಶೇ.20 ರಷ್ಟು ಹೊಸ ನೋಟು ಕೊಡುವುದಾಗಿ ಹೇಳಿ ಬದಲಾಯಿಸಲು ಮುಂದಾಗಿದ್ದರು.

Uttara Kannada: ನಿಧಿ ಪಡೆಯುವ ಆಸೆಯಿಂದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಾವಿ ತೋಡಿದ ಅನ್ಯಕೋಮಿನ ಖದೀಮರು

ಕೊನೆಗೆ ಒಬ್ಬೊಬ್ಬರಾಗಿ ಶೇ.2 ಕಮಿಷನ್‌ ಲೆಕ್ಕದಲ್ಲಿ ಬದಲಾವಣೆಗೆ ಜನರಿಗೆ ಅವರು ಗಾಳ ಹಾಕುತ್ತಿದ್ದರು. ಅಂತೆಯೇ ಡಿ.28ರ ತಡರಾತ್ರಿ, ಖಚಿತ ಮಾಹಿತಿ ಪಡೆದು ಇನ್‌ಸ್ಪೆಕ್ಟರ್‌ ಗಿರೀಶ್‌ ನಾಯ್ಕ್‌ ನೇತೃತ್ವದ ತಂಡ ದಾಳಿ ನಡೆಸಿದೆ. ಆಗ ಕಾರಿನಲ್ಲಿ 40 ಲಕ್ಷ ರು ಮೌಲ್ಯದ ಹಳೆಯ ನೋಟು ಪತ್ತೆಯಾಗಿವೆ. ಆನಂತರ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಇನ್ನುಳಿದ 48 ಲಕ್ಷ ರು ಮೌಲ್ಯದ ನೋಟುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.