*   4.5 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ಜಪ್ತಿ*   ತಲೆಮರೆಸಿಕೊಂಡ ಆರೋಪಿಯ ಬಂಧನಕ್ಕೆ ಜಾಲ ಬೀಸಿದ ಪೊಲೀಸರು,*   ದೂರಿನ ಮೇರೆಗೆ ಕಾರ್ಯಾಚರಣೆ

ಬೆಂಗಳೂರು(ಫೆ.12): ಸ್ನೇಹಿತೆಯೇ ಮನೆಯಲ್ಲೇ ಚಿನ್ನಾಭರಣ ಕಳವು(Theft) ಮಾಡಿದ್ದ ಮೂವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ರಾಜಗೋಪಾಲನಗರದ ಬಸವರಾಜು(25), ಮನು ಅಲಿಯಾಸ್‌ ಮನೋಜ್‌(22) ಮತ್ತು ವಿಜಯ್‌(19) ಬಂಧಿತರು(Accused). ಆರೋಪಿಗಳಿಂದ 4.50 ಲಕ್ಷ ರು. ಮೌಲ್ಯದ 103 ಗ್ರಾಂ ತೂಕದ ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇದೇ ಪ್ರಕರಣದ ಆರೋಪಿ ನವೀನ್‌ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ಆರೋಪಿಗಳು ಇತ್ತೀಚೆಗೆ ಮುನೇಶ್ವರ ಲೇಔಟ್‌ನ ತಿಗಳರಪಾಳ್ಯ ಮುಖ್ಯರಸ್ತೆಯ ಜಯಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Mumbai Robbery: ಯಾವ ವೆಬ್ ಸಿರೀಸ್‌ಗೂ ಕಡಿಮೆ ಇಲ್ಲ... ವೇಟರ್, ಆಟೋ ಡ್ರೈವರ್‌ ವೇಷ ಧರಿಸಿ ಕಳ್ಳರ ಗ್ಯಾಂಗ್ ಸೆರೆ!

ನಾಲ್ವರು ಆರೋಪಿಗಳು ಜಯಲಕ್ಷ್ಮಮ್ಮ ಅವರ ಪುತ್ರಿ ರಮ್ಯಾಳ ಸ್ನೇಹಿತರಾಗಿದ್ದರು. ರಮ್ಯಾಳ ಕಾಲೇಜು ಬಳಿ ಆಗಾಗ ಸೇರುತ್ತಿದ್ದರು. ಮನೆಯಲ್ಲಿ ಜಯಲಕ್ಷ್ಮಮ್ಮ ಹಾಗೂ ಅವರ ಪತಿ ಇಲ್ಲದ ಸಮಯದಲ್ಲಿ ಮನೆಗೆ ಬಂದು ರಮ್ಯಾಳನ್ನು ಭೇಟಿಯಾಗಿ ಹೋಗುತ್ತಿದ್ದರು. ಈ ವೇಳೆ ರಮ್ಯಾಳ ಗಮನಕ್ಕೆ ಬಾರದಂತೆ ಅವರ ಮನೆಯ ಬೀರುವಿನಲ್ಲಿದ್ದ ಒಡವೆಗಳನ್ನು ಕದ್ದಿದ್ದರು. ಇತ್ತೀಚೆಗೆ ಜಯಲಕ್ಷ್ಮಮ್ಮ ಅವರ ಎರಡನೇ ಪುತ್ರಿ ಮದುವೆ ಸಮಾರಂಭಕ್ಕೆ ತೆರಳಲು ಒಡವೆಗಳನ್ನು ಕೇಳಿದ್ದಾರೆ. ಈ ವೇಳೆ ಮನೆಯ ಬೀರು ನೋಡಿದಾಗ ಒಡವೆ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಜಯಲಕ್ಷ್ಮಮ್ಮ ಅವರು ನಾವು ಮನೆಯಲ್ಲಿ ಇಲ್ಲದಿರುವಾಗ ಮನೆಗೆ ಯಾರಾದರೂ ಬಂದಿದ್ದರಾ ಎಂದು ವಿಚಾರಿಸಿದ್ದಾರೆ. ಈ ವೇಳೆ ರಮ್ಯಾಳ ಸ್ನೇಹಿತರಾದ ಆರೋಪಿಗಳು ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಳು. ಈ ಸಂಬಂಧ ಜಯಲಕ್ಷ್ಮಮ್ಮ ಠಾಣೆಗೆ ದೂರು(Complaint) ನೀಡಿದ್ದರು.

ಕದ್ದ ಆಭರಣ ಮಾರಾಟ

ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಆರ್‌.ಜಿ.ರವಿಕುಮಾರ್‌ ನೇತೃತ್ವದ ತಂಡ ರಮ್ಯಾಳ ಸ್ನೇಹಿತರಾದ ಬಸವರಾಜು, ಮನು ಮತ್ತು ವಿಜಯ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಒಡವೆ ಕದ್ದಿದ್ದು ನಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಮೂವರು ಆರೋಪಿಗಳ ಪೈಕಿ ಬಸವರಾಜು ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲು(Jail) ಸೇರಿ ಜಾಮೀನಿನ ಮೇಲೆ ಹೊರಬಂದಿದ್ದ. ಬಳಿಕವೂ ಆರೋಪಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ.

Bengaluru Crime: ಸ್ನೇಹಿತನ ಹತ್ಯೆ ಮಾಡಿದ್ದ ಆಟೋ ಚಾಲಕನ ಬಂಧನ

ವಿಚಾರಣೆ ವೇಳೆ ಎರಡು ದ್ವಿಚಕ್ರವಾಹನ ಕದ್ದಿರುವುದು ಬೆಳಕಿಗೆ ಬಂದಿದೆ. ಅಂತೆಯೆ ಉಳಿದಿಬ್ಬರು ಆರೋಪಿ ಬಸವರಾಜನ ಮಾತು ಕೇಳಿ ಕಳ್ಳತನದಲ್ಲಿ ಭಾಗಿಯಾಗಿದ್ದರು. ಕದ್ದ ಆಭರಣಗಳನ್ನು ಮಾರಾಟ ಮಾಡಿದ್ದರು. ಈ ಮೂವರ ಬಂಧನದ ವಿಚಾರ ತಿಳಿದು ಮತ್ತೋರ್ವ ಆರೋಪಿ ನವೀನ್‌ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂಟಿ ವೃದ್ಧರ ಮನೆಯಲ್ಲಿ ದರೋಡೆ: ನಾಲ್ವರ ಸೆರೆ

ಬೆಂಗಳೂರು: ಇತ್ತೀಚಿಗೆ ಒಂಟಿಯಾಗಿ ನೆಲೆಸಿದ್ದ ವೃದ್ಧರೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ(Robbery) ಪರಿಚಿತ ಗಾರೆ ಕೆಲಸಗಾರ ಸೇರಿದಂತೆ ನಾಲ್ವರು ಕಿಡಿಗೇಡಿಗಳು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಿಲಕನಗರದ ತಬ್ರೇಜ್‌ ಅಹಮದ್‌, ಜಿಗಣಿ ಸಮೀರ್‌ ಪಾಷ, ಕನಕನಗರದ ಫಯಾಜ್‌ ಬಾದ್‌ ಸಾದಿಕ್‌ ಖಾನ್‌ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯ ಮಹಮ್ಮದ್‌ ಅದ್ನಾನ್‌ ಬಂಧಿತರಾಗಿದ್ದು, ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ರಫೀಕ್‌ ಪಾಷಾ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ 4.5 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ 4 ಲಕ್ಷ ರು. ಬಾಳುವ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಯಲಚೇನಹಳ್ಳಿ ಸರ್ಕಾರಿ ಆಸ್ಪತ್ರೆ ಸಮೀಪ ನೆಲೆರುವ ಉಮರ್‌ ಆಯಾನ್‌ ಖಾನ್‌(76) ಅವರ ಮನೆಗೆ ನುಗ್ಗಿ ಆರೋಪಿಗಳು ಈ ಕೃತ್ಯ ಎಸಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.