ಪಿಇಎಸ್‌ ಕಾಲೇಜು ಹಿಂಬದಿಯ ವೀರಭದ್ರೇಶ್ವರ ಬೆಟ್ಟಕ್ಕೆ ಚಾರಣ ಹೊರಟ ವಿದ್ಯಾರ್ಥಿಗಳು, ಆದರೆ ದಾರಿ ತಪ್ಪಿ ಆಂದ್ರಹಳ್ಳಿಗೆ ಬಂದು ಕಂಗಾಲಾಗಿ ರಸ್ತೆ ಬಂದಿ ನಿಂತಿದ್ದ 5 ಚಾರಣಿಗರು, ಆಗ ಅಲ್ಲಿಗೆ ಬೈಕಲ್ಲಿ ಬಂದಿದ್ದ ಸುಲಿಗೆಕೋರರು, ಮಾರಕಾಸ್ತ್ರ ತೋರಿಸಿ ಮೊಬೈಲ್‌ ಸುಲಿಗೆ, ತಕ್ಷಣ ಪೊಲೀಸರಿಗೆ ವಿದ್ಯಾರ್ಥಿಗಳ ದೂರು, ಮುಂಜಾನೆ 2 ಗಂಟೆಗೆ ಸುಲಿಗೆಕೋರರ ಸೆರೆ 

ಬೆಂಗಳೂರು(ಜೂ.18):  ಚಾರಣಕ್ಕೆ ತೆರಳುವ ಬೆಟ್ಟದ ಹಾದಿ ತಪ್ಪಿ ಕಂಗಲಾಗಿ ನಿಂತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿ ಮೊಬೈಲ್‌ ಹಾಗೂ ಹಣ ದೋಚಿ ಪರಾರಿಯಾಗಿದ್ದ ಮೂವರು ಸುಲಿಗೆಕೋರರನ್ನು ಕೃತ್ಯ ನಡೆದ ಎರಡು ತಾಸಿನಲ್ಲೇ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ಹೊಯ್ಸಳ ವಾಹನ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ತಿಗಳಪಾಳ್ಯದ ಬಲರಾಮ, ಆತನ ಸಹಚರರಾದ ಮನು ಹಾಗೂ ಚೇತನ್‌ ಬಂಧಿತರಾಗಿದ್ದು, ಈ ಕೃತ್ಯ ಎಸಗಿ ತಪ್ಪಿಸಿಕೊಂಡಿರುವ ರಾಮ ಮತ್ತು ಲಿಂಗನ ಪತ್ತೆಗೆ ತನಿಖೆ ನಡೆದಿದೆ. ವಿದ್ಯಾರ್ಥಿಗಳಿಂದ ದೋಚಿದ್ದ ನಾಲ್ಕು ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಬಂಧಿತರಿಂದ ಜಪ್ತಿ ಮಾಡಲಾಗಿದೆ. ಆಂದ್ರಹಳ್ಳಿ ಮುಖ್ಯರಸ್ತೆಯಲ್ಲಿ ಶುಕ್ರವಾರ ರಾತ್ರಿ 11.50ರ ಸುಮಾರಿಗೆ ಈ ಕೃತ್ಯದ ಬಗ್ಗೆ ನಮ್ಮ-112 (ಪೊಲೀಸ್‌ ನಿಯಂತ್ರಣ ಕೊಠಡಿ) ಕರೆ ಮಾಡಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಕರೆ ಸ್ವೀಕರಿಸಿದ 10ನೇ ನಿಮಿಷದಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡಿದ ಬ್ಯಾಡರಹಳ್ಳಿ ಠಾಣೆ ಹೊಯ್ಸಳ ಸಿಬ್ಬಂದಿ, ತಾಂತ್ರಿಕ ಮಾಹಿತಿ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶನಿವಾರ ನಸುಕಿನ 2 ಗಂಟೆಗೆ ಆರೋಪಿಗಳನ್ನು ಕಂಬಿ ಹಿಂದೆ ನಿಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮ ಗಾಂಜಾ ಮಾರಾಟ; ಇಬ್ಬರು ಅಂತಾರಾಷ್ಟ್ರೀಯ ಪೆಡ್ಲರ್ಸ್ ಅರೆಸ್ಟ್

ಸುಲಿಗೆ ಮಾಡಿ ಪಾರ್ಟಿ:

ಪಿಇಎಸ್‌ ಕಾಲೇಜು ಸಮೀಪದ ವೀರಭದ್ರೇಶ್ವರ ಬೆಟ್ಟಕ್ಕೆ ಚಾರಣಕ್ಕೆ ಹೋಗಲು ಶುಕ್ರವಾರ ರಾತ್ರಿ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾದ ಮನ್ವಿತ್‌ ರಾವ್‌, ಜೋಸಾ, ಧೃತಿ, ರಿಯಾ ಹಾಗೂ ಆಶ್ಮಿತಾ ಉಬರ್‌ ಕ್ಯಾಬ್‌ನಲ್ಲಿ ಹೊರಟ್ಟಿದ್ದರು. ಆದರೆ ಲೋಕೇಷನ್‌ ತಪ್ಪಾಗಿ ನಿಗದಿತ ಸ್ಥಳಕ್ಕೆ ತೆರಳದೆ ಆಂದ್ರಹಳ್ಳಿ ಮುಖ್ಯರಸ್ತೆಗೆ ವಿದ್ಯಾರ್ಥಿಗಳು ಬಂದಿದ್ದಾರೆ. ಕ್ಯಾಬ್‌ನಿಂದ ಕೆಳಗಿಳಿದ ಬಳಿಕ ಅವರಿಗೆ ತಪ್ಪು ವಿಳಾಸಕ್ಕೆ ಬಂದಿರುವುದು ಗೊತ್ತಾಗಿದೆ. ಅಷ್ಟರಲ್ಲಿ ಕ್ಯಾಬ್‌ ಚಾಲಕ ಅಲ್ಲಿಂದ ತೆರಳಿದ್ದ. ಹೀಗಾಗಿ ಬೇರೊಂದು ಕ್ಯಾಬ್‌ ಬುಕ್‌ ಮಾಡಲು ಆಂಧ್ರಹಳ್ಳಿ ಮುಖ್ಯರಸ್ತೆಯ ವೆಂಕಟೇಶ್ವರ ಬಡಾವಣೆಯಲ್ಲಿರುವ ಫಾರ್ಮಸಿ ಬಳಿಗೆ ವಿದ್ಯಾರ್ಥಿಗಳು ಬಂದಿದ್ದರು.

ಆ ವೇಳೆ ಅಲ್ಲಿಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಬಲರಾಮ ಹಾಗೂ ಆತನ ಸಹಚರರು, ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಅವರ ಬಳಿ ಇದ್ದ 4 ಮೊಬೈಲ್‌ಗಳು ಹಾಗೂ .3500 ದೋಚಿ ಪರಾರಿಯಾಗಿದ್ದಾರೆ. ನಂತರ ವಿದ್ಯಾರ್ಥಿಗಳು, ಪೊಲೀಸ್‌ ನಿಯಂತ್ರಣ ಕೊಠಡಿಗೆ ರಾತ್ರಿ 11.50ರಲ್ಲಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ 10 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಹೊಯ್ಸಳ ವಾಹನದಲ್ಲಿ ಗಸ್ತು ನಡೆಸುತ್ತಿದ್ದ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಸಿದ್ದಪ್ಪ, ಹೆಡ್‌ ಕಾನ್‌ಸ್ಟೇಬಲ್‌ ರೇಣುಕುಮಾರ್‌, ಕಾಡೇಗೌಡ ಹಾಗೂ ಕಾನ್‌ಸ್ಟೇಬಲ್‌ ಕಸ್ತೂರಿ ತೆರಳಿದ್ದಾರೆ.

Bengaluru: ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ: ನಕಲಿ ಐಪಿಎಸ್‌ ಅಧಿಕಾರಿ ಪೊಲೀಸರ ಬಲೆಗೆ!

ಆರೋಪಿಗಳ ಚಹರೆ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆದು ವಿದ್ಯಾರ್ಥಿಗಳಿಂದ ದೋಚಿದ್ದ ಮೊಬೈಲ್‌ ಕರೆಗಳ ಲೋಕೇಷನ್‌ ಜಾಡು ಹಿಡಿದು ಬೆನ್ನುಹತ್ತಿದ್ದಾರೆ. ಸುಲಿಗೆ ಕೃತ್ಯ ಎಸಗಿದ ಜೋಶ್‌ನಲ್ಲಿ ತಿಗಳರಪಾಳ್ಯದ ತನ್ನ ರೂಮ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಬಲರಾಮ ಹಾಗೂ ಆತನ ಇಬ್ಬರು ಸಹಚರರನ್ನು ಸೆರೆ ಹಿಡಿದಿದ್ದಾರೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಕಿಡಿಗೇಡಿ ಬಾಲರಾಮ

ಆರೋಪಿಗಳ ಪೈಕಿ ಬಲರಾಮ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಬ್ಯಾಡರಹಳ್ಳಿ ಠಾಣೆಯಲ್ಲಿ ಎಂಓಬಿ ಕಾರ್ಡ್‌ (ಹಳೆಯ ಸುಲಿಗೆಕೋರ) ತೆರೆಯಲಾಗಿದೆ. ರಾತ್ರಿ ವೇಳೆ ಜನರಿಗೆ ಬೆದರಿಸಿ ಸುಲಿಗೆ ಕೃತ್ಯಕ್ಕೆ ಆತ ಕುಖ್ಯಾತನಾಗಿದ್ದು, ಹೀಗೆ ಸಂಪಾದಿಸಿದ ಹಣದಲ್ಲಿ ಬಲರಾಮ ಮೋಜು ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.