* ಹಣ ಸಮೇತ ಪರಾರಿಯಾಗಿದ್ದ ಮತ್ತೋರ್ವನ ಪತ್ತೆಗೆ ತೀವ್ರ ಶೋಧ* ಅಕೌಂಟ್ ಹ್ಯಾಕ್ ಮೂಲಕ ಲಕ್ಷಾಂತರ ರೂ. ಹಣ ದೋಚಿದ್ದ ಖದೀಮರು* ಮುಂಬೈಗೆ ತೆರಳಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
ಬೆಳಗಾವಿ(ಜು.03): ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಬರೋಬ್ಬರಿ 94.72 ಲಕ್ಷ ಹಣ ಲಪಟಾಯಿಸಿದ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಸೇರಿದಂತೆ ಮೂವರು ಖದೀಮರನ್ನು ಬಂಧಿಸುವಲ್ಲಿ ಜಿಲ್ಲೆಯ ಸದಲಗಾ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನೈಜೇರಿಯಾ ಮೂಲದ ಮುಂಬೈನಲ್ಲಿ ವಾಸವಾಗಿದ್ದ ಉಜಕಾ ಪೀಟರ ಚಿಗೋಜಿ (40), ಮಹಾರಾಷ್ಟ್ರದ ವಸಾಯಿ ತಾಲೂಕಿನ ನಾಯಗಾಂವದ ಇಂದ್ರೇಶ್ ಹರಿಶಂಕರ ಪಾಂಡೆ (28) ಹಾಗೂ ಪೂರ್ವ ಮುಂಬೈ ಠಾಕೂರ ಖಾಂದಿವಲಿಯ ಅಭಿಜೀತ್ ಘನಶ್ಯಾಮ್ ಮಿಶ್ರಾ (27) ಬಂಧಿತ ಆರೋಪಿಗಳು. ಹಣದ ಸಮೇತ ಪರಾರಿಯಾಗಿರುವ ಇನ್ನೋರ್ವ ಆರೋಪಿ ಆಫ್ರಿಕಾದ ಟೊನ್ನಿ ಎಂಬಾತನ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮೊಬೈಲ್ ಸಂಖ್ಯೆಯನ್ನೇ ಹ್ಯಾಕ್ ಮಾಡಿ 98 ಸಾವಿರ ಎಗರಿಸಿದ ವಂಚಕರು
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಅರಿಹಂತ ಸಂಸ್ಥೆಯ ಜನರಲ್ ಮ್ಯಾನೇಜರ್ ಅಶೋಕ್ ಬಂಕಾಪುರೆ ಅವರ ಐಸಿಐಸಿಐ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಮೇ 28ರಂದು 15,14,676 ಹಣ ಎಗರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಜೂ.3ರಂದು ಶಮನೆವಾಡಿಯಲ್ಲಿನ ಅರಿಹಂತ ಸಹಕಾರಿಯ ಉಳಿತಾಯ ಖಾತೆಗೆ ಖನ್ನ ಹಾಕಿದ ಖದೀಮರು 79,57,675 ಹಣವನ್ನು ಪಡೆದುಕೊಂಡಿದ್ದಾರೆ. ಅಕೌಂಟ್ ಹ್ಯಾಕ್ ಮೂಲಕ ಅರಿಹಂತ ಸಹಕಾರಿ ಬ್ಯಾಂಕ್ ಸೇರಿ ಒಟ್ಟು 94,72,351 ಹಣವನ್ನು ದೋಚಿರುವ ಕುರಿತು ಮ್ಯಾನೇಜರ್ ಅಶೋಕ ಬಂಕಾಪುರೆ ಅವರು ಎರಡೂ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ದೂರನ್ನು ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಸದಲಗಾ ಠಾಣೆಯ ಪೊಲೀಸರು, ಅಕೌಂಟ್ ಹ್ಯಾಕ್ ಮಾಡಿ ಹಣ ದೋಚಿದ್ದ ಖದೀಮರ ಪತ್ತೆಗೆ ಚಿಕ್ಕೋಡಿ ಸಿಪಿಐ ಆರ್.ಆರ್.ಪಾಟೀಲ ನೇತೃತ್ವದಲ್ಲಿ ಪಿಎಸ್‌ಐ ಆರ್.ವೈ.ಬೀಳಗಿ, ಪ್ರೊಬೇಷನರಿ ಪಿಎಸ್‌ಐ ಭರತ್ ಎಸ್., ಚಿಕ್ಕೋಡಿ ಠಾಣೆಯ ಪಿಎಸ್‌ಐ ರಾಕೇಶ ಬಗಲಿ, ಸಿಬ್ಬಂದಿ ಎಸ್.ಎ.ಗೊಡಸೆ, ಎಸ್.ಎಚ್.ದೇವರ, ಎಸ್.ಪಿ.ಗಲಗಲಿ, ಎಸ್.ಎಲ್.ಬಾಡಕರ, ಎಂ.ಆರ್.ಗಡ್ಡೆ, ಗಜು ಕಾಂಬಳೆ ತಂಡ ರಚನೆ ಮಾಡಲಾಗಿತ್ತು. ತನಿಖೆ ಕೈಗೊಂಡ ತಂಡ ಮುಂಬೈಗೆ ತೆರಳಿ ಮೂವರನ್ನು ಬಂಧಿಸುವಲ್ಲಿ ಸಫಲವಾಗಿದೆ.
