*   ನೈಟಿ ಧರಿಸಿ ಕನ್ನ ಹಾಕಿದೋರು ಸೈರನ್‌ಗೆ ಪರಾರಿ*   ರಾಜಗೋಪಾಲ ನಗರದ ಮಣಪ್ಪುರಂ ಫೈನಾನ್ಸ್‌ನಲ್ಲಿ ಕಳ್ಳತನಕ್ಕೆ ಸ್ಕೆಚ್‌*   ಸುಳಿವು ಸಿಗದಂತೆ ನೈಟಿ ಧರಿಸಿ, ಬೀಗ ಮುರಿದ ಸ್ನೇಹಿತರು 

ಬೆಂಗಳೂರು(ಜೂ.03): ಖಾಸಗಿ ಫೈನಾನ್ಸ್‌ ಸಂಸ್ಥೆಗೆ ರಾತ್ರಿ ವೇಳೆ ಮಹಿಳೆಯರ ನೈಟಿ ಉಡುಪು ಧರಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಲು ಯತ್ನಿಸಿದ ವೇಳೆ ಸೈರನ್‌ ಶಬ್ದಕ್ಕೆ ಭಯಗೊಂಡು ಪರಾರಿಯಾಗಿದ್ದ ನೇಪಾಳಿ ಪ್ರಜೆ ಸೇರಿದಂತೆ ಮೂವರು ಚಾಲಾಕಿಗಳು ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ರಾಜಗೋಪಾಲ ನಗರದ ನಿವಾಸಿ ಕುಮಾರ್‌, ನೇಪಾಳ ಮೂಲದ ಬಾಬಾ ರಾಜಾ ಸಿಂಗ್‌ ಅಲಿಯಾಸ್‌ ಅಂಬರೀಷ್‌ ಹಾಗೂ ಸುಂಕದಕಟ್ಟೆಯ ನಾಗರಾಜ್‌ ಬಂಧಿತರಾಗಿದ್ದು, ಆರೋಪಿಗಳಿಂದ ಬೈಕ್‌, ಮಹಿಳೆಯರ ನೈಟಿ ಉಡುಪು, ಆಟೋ ಹಾಗೂ ಕಟ್ಟರ್‌ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ವಿಡಿಯೋ, ಫೋಟೋ ಅಪ್‌ಲೋಡ್‌ ಮಾಡುತ್ತಿದ್ದ ವ್ಯಕ್ತಿ ಬಂಧನ

ಇತ್ತೀಚೆಗೆ ರಾಜಗೋಪಾಲ ನಗರದ ಮಣಪ್ಪುರಂ ಫೈನಾನ್ಸ್‌ ಕಚೇರಿ ಬೀಗ ಮುರಿದು ಆರೋಪಿಗಳು ಚಿನ್ನಾಭರಣ ದೋಚಲು ಯತ್ನಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ಬಿ.ಆರ್‌.ಜಗದೀಶ್‌ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾಲ ಪಡೆದು ಸಂಚು ರೂಪಿಸಿದ:

ರಾಮನಗರ ಜಿಲ್ಲೆಯ ಖಾಸಗಿ ಬಸ್‌ ಚಾಲಕ ಕುಮಾರ್‌, ತನ್ನ ಕುಟುಂಬದ ಜತೆ ರಾಜಗೋಪಾಲ ನಗರದಲ್ಲಿ ನೆಲೆಸಿದ್ದಾನೆ. ಅದೇ ಮಣಪ್ಪುರಂ ಫೈನಾನ್ಸ್‌ ಕಚೇರಿಯಲ್ಲಿ ಚಿನ್ನ ಅಡಮಾನವಿಟ್ಟು .1 ಲಕ್ಷ ಸಾಲ ಪಡೆದಿದ್ದ. ಇನ್ನು ರಾಜಗೋಪಾಲ ನಗರ ಸಮೀಪದ ಚಿಕನ್‌ ಮಾರಾಟ ಮಳಿಗೆಯಲ್ಲಿ ಮೂರು ವರ್ಷಗಳಿಂದ ನೇಪಾಳ ಮೂಲದ ಬಾಬಾ ರಾಜಾ ಸಿಂಗ್‌ ಕೆಲಸ ಮಾಡುತ್ತಿದ್ದ. ತುಮಕೂರು ಜಿಲ್ಲೆಯ ಆಟೋ ಚಾಲಕ ನಾಗರಾಜ, ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ಈ ಮೂವರು ಹಲವು ದಿನಗಳಿಂದ ಸ್ನೇಹಿತರಾಗಿದ್ದರು. ಈ ಗೆಳೆತನದಲ್ಲಿ ದಿಢೀರ್‌ ಶ್ರೀಮಂತರಾಗಲು ಮಣಪ್ಪುರಂ ಕಚೇರಿಗೆ ಕನ್ನ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇದೇ ರೀತಿ ಕಳೆದ ಏಪ್ರಿಲ್‌ನಲ್ಲಿ ರಾಜಗೋಪಾಲ ನಗರ ಸಮೀಪ ಎಟಿಎಂ ಯಂತ್ರ ಒಡೆದು ಹಾಕಿ ಹಣ ಕಳವಿಗೆ ಆರೋಪಿಗಳು ಯತ್ನಿಸಿದ್ದ ಸಂಗತಿ ತನಿಖೆ ವೇಳೆ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇಫ್‌ ಲಾಕರನ್ನೂ ತೆರೆದಿದ್ದ ಗ್ಯಾಂಗ್‌

ಮಣಪ್ಪುರಂನಲ್ಲಿ ಸಾಲ ಪಡೆದಿದ್ದ ಕುಮಾರ್‌, ಸಾಲದ ಕಂತು ಪಾವತಿಗೆ ತೆರಳಿದ್ದಾಗ ಅಲ್ಲಿನ ವಹಿವಾಟು ಹಾಗೂ ಭದ್ರತೆ ಬಗ್ಗೆ ತಿಳಿದುಕೊಂಡಿದ್ದ. ಅಂತೆಯೇ ತನ್ನ ಇಬ್ಬರು ಸ್ನೇಹಿತರಿಗೆ ಹಣದಾಸೆ ತೋರಿಸಿ ಆತ ಸಹಕಾರ ಪಡೆದಿದ್ದಾನೆ. ಪೂರ್ವ ನಿಯೋಜಿತ ಸಂಚಿನಂತೆ ಮಣಪ್ಪುರಂ ಕಚೇರಿಗೆ ಮೇ 25ರಂದು ರಾತ್ರಿ 8ಕ್ಕೆ ವಹಿವಾಟು ಮುಗಿಸಿ ಸಿಬ್ಬಂದಿ ಬೀಗ ಹಾಕಿಕೊಂಡು ತೆರಳಿದ ಬಳಿಕ ರಾತ್ರಿ 2ರ ಸುಮಾರಿಗೆ ಕಚೇರಿಯ ಗೇಟ್‌ನ ಬೀಗ ಮುರಿದು ಆರೋಪಿಗಳು ಒಳ ಪ್ರವೇಶಿಸಿದ್ದಾರೆ. ನಂತರ ರೋಲಿಂಗ್‌ ಷಟರ್‌ಅನ್ನು ಗ್ಯಾಸ್‌ ಕಟರ್‌ ಬಳಸಿ ಕತ್ತರಿಸಿ ಒಳ ನುಗ್ಗಿದ ಆರೋಪಿಗಳು, ಬಳಿಕ ಸೇಫ್‌ ಲಾಕರ್‌ ಇರುವ ಕೋಣೆಗೆ ಹಾಕಿದ್ದ ಬೀಗವನ್ನು ಸಹ ಗ್ಯಾಸ್‌ ಕಟರ್‌ನಿಂದ ಕತ್ತರಿಸಿ ಕಳ್ಳತನಕ್ಕೆ ಯತ್ನಿಸಿದ್ದರು. ಆದರೆ ಆ ವೇಳೆ ಸೈರನ್‌ ಶಬ್ಧ ಆರಂಭಗೊಂಡಿದ್ದರಿಂದ ಭೀತಿಗೊಂಡು ಮೂವರು ಕಾಲ್ಕಿತ್ತಿದ್ದರು. ಗುರುತು ಸಿಗದಂತೆ ಮಹಿಳೆಯರ ನೈಟಿ ಧರಿಸಿದ್ದರು.

ಚಿಕ್ಕೋಡಿ: ಎಂಟು ವರ್ಷದ ಮಗಳ ಜತೆ ತಾಯಿ ಆತ್ಮಹತ್ಯೆ

ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಕಾರ್ಯ ಸ್ಥಗಿತಗೊಂಡ ಕೂಡಲೇ ಆ ಶಾಖೆಯ ವ್ಯವಸ್ಥಾಪಕರ ಮೊಬೈಲ್‌ಗೆ ಮಣಪ್ಪುರಂ ನಿಯಂತ್ರಣ ಕೊಠಡಿ ಸಿಬ್ಬಂದಿ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವಿಷಯ ತಿಳಿದ ಕೂಡಲೇ ಕಚೇರಿ ಬಳಿ ವ್ಯವಸ್ಥಾಪಕರು ಬಂದಾಗ ಕಳ್ಳತನ ಯತ್ನ ಕೃತ್ಯ ಗೊತ್ತಾಗಿದೆ. ತಕ್ಷಣವೇ ರಾಜಗೋಪಾಲ ನಗರ ಠಾಣೆಗೆ ಅವರು ದೂರು ದಾಖಲಿಸಿದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಗ್ಯಾಸ್‌ ಕಟರ್‌ ನೀಡಿದ ಸುಳಿವು

ಸೈರನ್‌ ಸದ್ದಿಗೆ ಭೀತಿಗೊಂಡು ಪರಾರಿಯಾಗುವಾಗ ಸ್ಥಳದಲ್ಲೇ ಗ್ಯಾಸ್‌ ಕಟರ್‌ಅನ್ನು ಆರೋಪಿಗಳು ಬಿಟ್ಟು ಹೋಗಿದ್ದರು. ಈ ಗ್ಯಾಸ್‌ ಕಟರ್‌ ಖರೀದಿ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಸುಳಿವು ಸಿಕ್ಕಿತು ಎಂದು ಪೊಲೀಸರು ಹೇಳಿದ್ದಾರೆ.