ಬೆಂಗಳೂರು(ಏ.30): ಅಕ್ರಮವಾಗಿ ರೆಮ್‌ಡೆಸಿವಿರ್‌ ಮಾರಾಟ ಮಾಡುತ್ತಿದ್ದವರ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪುಟ್ಟೇನಹಳ್ಳಿಯ ನಿವಾಸಿ ವೈದ್ಯ ಅಭಿಷೇಕ್‌ ಚೌಧರಿ(38), ವಿನೋದ್‌(35), ಸೋಮಲ್‌ರಾಜ್‌ (33) ಬಂಧಿತರು. ಆರೋಪಿಗಳಿಂದ 18 ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್‌ ಕೋಣನಕುಂಟೆ ರಸ್ತೆಯಲ್ಲಿ ಪಾರ್ವತಿ ಕ್ಲಿನಿಕ್‌ನಲ್ಲಿ ವೈದ್ಯರಾಗಿದ್ದರು. ಇದೇ ಕ್ಲಿನಿಕ್‌ಗೆ ಸೇರಿದ ಪಾರ್ವತಿ ಮೆಡಿಕಲ್‌ ಶಾಪ್‌ನಲ್ಲಿ ಡಾ. ಅಭಿಷೇಕ್‌, ವಿನೋದ್‌ ಮತ್ತು ಸೋಮಲ್‌ರಾಜ್‌ ಜತೆ ಸೇರಿ 18 ಸಾವಿರಕ್ಕೆ ಅಕ್ರಮವಾಗಿ ರೆಮ್‌ಡೆಸಿವಿರ್‌ ಲಸಿಕೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ಇವರ ಕ್ಲಿನಿಕ್‌ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿ ಕೋಣನಕುಂಟೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

900 ರು.ನ ರೆಮ್‌ಡೆಸಿವಿರ್‌ ಇಂಜೆಕ್ಷನ್‌ 20,000 ರೂ.ಗೆ ಸೇಲ್!‌

ಕಳೆದ ಒಂದು ವಾರದಲ್ಲಿ ಸಿಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 40 ಮಂದಿ ಆರೋಪಿಗಳನ್ನು ಬಂಧಿಸಿ, 80 ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಜಪ್ತಿ ಮಾಡಿದ್ದೇವೆ. ಬಂಧಿತರಲ್ಲಿ ಕೆಲವರು ಆಸ್ಪತ್ರೆಗಳ ಸ್ಟಾಫ್‌ ನರ್ಸ್‌ಗಳು, ಮೆಡಿಕಲ್‌ ರೆಪ್ರಸೆಂಟೇಟಿವ್‌ ಹಾಗೂ ಓರ್ವ ಆಯುರ್ವೇದಿಕ್‌ ಆಸ್ಪತ್ರೆ ವೈದ್ಯರೂ ಸೇರಿದ್ದಾರೆ. ಈ ಕಾರ್ಯಾಚರಣೆ ಮುಂದುವರೆಯಲಿದೆ. ಈ ದಂಧೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದರೆ ಕೂಡಲೇ ಪೊಲೀಸ್‌ ಕಂಟ್ರೋಲ್‌ ರೂಂ ಅಥವಾ ಸಿಸಿಬಿಗೆ ಮಾಹಿತಿ ಕೊಟ್ಟರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಸಿಬಿ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.