ನವದೆಹಲಿ(ಏ.17): ದೇಶದಲ್ಲಿ ಕೊರೋನಾ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಏರಿಕೆಯಾದ ಬೆನ್ನಲ್ಲೇ, ಚಿಕಿತ್ಸೆಗೆ ಬಳಸುವ ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಕಾಳಸಂತೆಯಲ್ಲಿ ಮಾರಾಟ ಭರ್ಜರಿ ಏರಿಕೆ ಕಂಡಿದೆ. ರೆಮ್‌ಡೆಸಿವಿರ್‌ನಿಂದ ಕೋವಿಡ್‌ ಗುಣವಾಗುವ ಸಂಪೂರ್ಣ ಭರವಸೆ ಇಲ್ಲವಾದರೂ, ಸದ್ಯಕ್ಕೆ ಇರುವ ಔಷಧಗಳ ಪೈಕಿ ಅದು ಒಂದಾಗಿರುವ ಕಾರಣ ಗಂಭೀರ ಆರೋಗ್ಯ ಸ್ಥಿತಿಯಲ್ಲಿ ಇರುವವರಿಗೆ ವೈದ್ಯರು ಇದೇ ಇಂಜೆಕ್ಷನ್‌ ಬರೆದುಕೊಡುತ್ತಿದ್ದಾರೆ.

ಆದರೆ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದ ಕಾರಣ, ಇಂಜೆಕ್ಷನ್‌ ಕಾಳಸಂತೆಯಲ್ಲಿ ಮಾತ್ರ ಲಭ್ಯವಾಗುವಂತೆ ಆಗಿದೆ. ಬಹುತೇಕ ರಾಜ್ಯ ಸರ್ಕಾರಗಳು, ಇಂಜೆಕ್ಷನ್‌ ಕೊರತೆ ಇಲ್ಲ ಎಂದು ಹೇಳುತ್ತಿವೆಯಾದರೂ, ರೋಗಿಗಳಿಗೆ ಮಾತ್ರ ಅವು ಲಭ್ಯವಾಗುತ್ತಿಲ್ಲ. ಹೀಗಾಗಿ ಕನಿಷ್ಠ 900 ರು.ನಿಂದ ಗರಿಷ್ಠ 5400 ರು. (ಭಾರತದಲ್ಲಿ 6 ಕಂಪನಿಗಳಿಂದ ಮಾರಾಟ) ಲಸಿಕೆಗಳು 5000 ರು.ನಿಂದ 40000 ರು.ವರೆಗೂ ಮಾರಾಟ ಮಾಡಲಾಗುತ್ತಿದೆ. ಪರಿಣಾಮ ಇಂಜೆಕ್ಷನ್‌ ಬಡ ರೋಗಿಗಳ ಕೈಗೆ ಎಟುಕದಂತೆ ಆಗಿದೆ.

ಬಂಧನ:

ಈ ನಡುವೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ರೆಮ್‌ಡೆಸಿವರ್‌ ಅನ್ನು ಅಕ್ರಮವಾಗಿ ಮಾರುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಉತ್ತರ ಪ್ರದೇಶದಲ್ಲಿ 3 ಆರೋಪಿಗಳ ಬಳಿಯಿದ್ದ 265 ಚುಚ್ಚುಮದ್ದುಗಳು ಮತ್ತು ಮಧ್ಯಪ್ರದೇಶದಲ್ಲಿ ಔಷಧ ಅಂಗಡಿ ಮಾಲಿಕನ ಬಳಿಯಿದ್ದ 400 ಇಂಜೆಕ್ಷನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಒಎಲ್‌ಎಕ್ಸ್‌ನಲ್ಲಿ ಸೇಲ್‌:

ರೆಮ್‌ಡೆಸಿವರ್‌ ಅನ್ನು ಆನ್‌ಲೈನ್‌ನಲ್ಲಿ ಮಾರಾಟವಾಗದಂತೆ ಕೈಗೊಂಡಿದ್ದಾಗ್ಯೂ, ಆನ್‌ಲೈನ್‌ ಮಾರಾಟ ತಾಣವಾದ ಒಎಎಲ್‌ಎಕ್ಸ್‌ನಲ್ಲೂ ಈ ಚುಚ್ಚುಮದ್ದುಗಳನ್ನು ಭಾರೀ ದರಕ್ಕೆ ಮಾರಾಟ ಮಾಡಲಾಗುತ್ತಿದೆ.