ಅಪರಾಧ ಚಟುವಟಿಕೆಗಳಿಗೆ ತನ್ನೊಂದಿಗೆ ಕೈ ಜೋಡಿಸುವಂತೆ ಬೆದರಿಕೆ ಹಾಕಿದ್ದ ಸ್ನೇಹಿತನನ್ನು ಮೂವರು ಗೆಳೆಯರು ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು (ಮೇ.27): ಅಪರಾಧ ಚಟುವಟಿಕೆಗಳಿಗೆ ತನ್ನೊಂದಿಗೆ ಕೈ ಜೋಡಿಸುವಂತೆ ಬೆದರಿಕೆ ಹಾಕಿದ್ದ ಸ್ನೇಹಿತನನ್ನು ಮೂವರು ಗೆಳೆಯರು ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹದೇವಪುರ ನಿವಾಸಿ ರೇಣುಕುಮಾರ್‌ (24) ಕೊಲೆಯಾದ ವ್ಯಕ್ತಿ. ಘಟನೆ ಸಂಬಂಧ ಪ್ರಶಾಂತ್‌, ಶ್ರೀಕಾಂತ್‌ ಮತ್ತು ವಸಂತಕುಮಾರ್‌ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ರೇಣುಕುಮಾರ್‌ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. ಈತನ ವಿರುದ್ಧ ಕೊಲೆಗೆ ಯತ್ನ, ದರೋಡೆ, ಹಲ್ಲೆ ಮುಂತಾದ ಕೃತ್ಯ ಸಂಬಂಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಎಂಟು ಅಪರಾಧ ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ರೇಣುಕುಮಾರ್‌ ಕಳೆದ ತಿಂಗಳು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಇತ್ತೀಚೆಗೆ ತನ್ನ ಸ್ನೇಹಿತರಾದ ಶ್ರೀಕಾಂತ್‌ ಮತ್ತು ಪ್ರಶಾಂತ್‌ನನ್ನು ಕರೆದು ‘ನೀವು ಇಬ್ಬರು ನನ್ನ ಜತೆ ಇರಬೇಕು. ಒಂಟಿಯಾಗಿ ಏನಾದರೂ ಕೆಲಸ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ನಾನು ಜೈಲಿಗೆ ಹೋಗಿ ಬಂದಿದ್ದೇನೆ. ನಾನೇ ನಿಮಗೆಲ್ಲಾ ಬಾಸ್‌. ನಾನು ಹೇಳಿದಂತೆ ಕೇಳಬೇಕು’ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ನರೇಂದ್ರ ಮೋದಿ ಸರ್ಕಾರಕ್ಕೆ 9 ವರ್ಷ: 9 ಪ್ರಶ್ನೆ ಮುಂದಿಟ್ಟ ಕಾಂಗ್ರೆಸ್‌

ಗುರುವಾರ ಸಹ ಶ್ರೀಕಾಂತ್‌ ಮತ್ತು ಪ್ರಶಾಂತ್‌ಗೆ ಇದೇ ವಿಚಾರವಾಗಿ ಬೆದರಿಸಿದ್ದ ಎನ್ನಲಾಗಿದೆ. ರೇಣುಕುಮಾರ್‌ನ ವರ್ತನೆಯಿಂದ ಕೋಪಗೊಂಡಿದ್ದ ಪ್ರಶಾಂತ್‌ ಮತ್ತು ಶ್ರೀಕಾಂತ್‌, ರೇಣುಕುಮಾರ್‌ನನ್ನು ಹೀಗೆ ಬಿಟ್ಟರೆ ತಮಗೆ ತೊಂದರೆ ಕೊಡುತ್ತಾನೆ ಎಂದು ಭಾವಿಸಿ, ಆತನನ್ನೇ ಕೊಲೆ ಮಾಡಲು ನಿರ್ಧರಿಸಿದ್ದರು. ಅದರಂತೆ ಕೋಲಾರ ಮೂಲದ ಸ್ನೇಹಿತ ವಸಂತಕುಮಾರ್‌ನನ್ನು ಕರೆಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು. ಗುರುವಾರ ಮಧ್ಯರಾತ್ರಿ ಮಹದೇವಪುರದ ರಾಘವ ಅಪಾರ್ಚ್‌ಮೆಂಟ್‌ ಬಳಿ ರೇಣುಕುಮಾರ್‌ನನ್ನು ಕರೆಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಹದೇವಪುರ ಠಾಣೆ ಪೊಲೀಸರು, ತಕ್ಷಣ ಕಾರ್ಯಾಚರಣೆ ನಡೆಸಿ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೂಪನ್‌ಗಳ ಹಂಚಿ 50 ಕಡೆ ಕಾಂಗ್ರೆಸ್‌ ಗೆಲುವು, ನಿಖಿಲ್‌ ಸೋಲಿಗೂ ಇದೇ ಕಾರಣ: ಎಚ್‌ಡಿಕೆ

ಮಹಿಳಾ ಅಧಿಕಾರಿ ಮೇಲೆ ಸೋದರನಿಂದ ಹಲ್ಲೆ: ಹಣ ನೀಡಲು ನಿರಾಕರಿಸಿದ್ದಕ್ಕೆ ಮಹಿಳಾ ಕೆಎಎಸ್‌ ಅಧಿಕಾರಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೈದು ಅವರ ಕುಟುಂಬಕ್ಕೆ ಭಾನಾಮತಿ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ ಆರೋಪದಡಿ ಕೆಎಎಸ್‌ ಅಧಿಕಾರಿಯ ಸ್ವಂತ ತಮ್ಮನ ವಿರುದ್ಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಜಯನಗರ 5ನೇ ಬ್ಲಾಕ್‌ ನಿವಾಸಿ ಡಾ. ಮೈತ್ರಿ ಹಲ್ಲೆಗೆ ಒಳಗಾದ ಕೆಎಎಸ್‌ ಅಧಿಕಾರಿ. ಇವರು ನೀಡಿದ ದೂರಿನ ಮೇರೆಗೆ ಜಯನಗರ ನಿವಾಸಿ ಡಾ. ಸಂಜಯ್‌ ಎಂಬಾತನ ವಿರುದ್ಧ ಕೊಲೆ ಬೆದರಿಕೆ, ಹಲ್ಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.