ಕೂಪನ್‌ಗಳ ಹಂಚಿ 50 ಕಡೆ ಕಾಂಗ್ರೆಸ್ ಗೆಲುವು, ನಿಖಿಲ್ ಸೋಲಿಗೂ ಇದೇ ಕಾರಣ: ಎಚ್‌ಡಿಕೆ
ಸುಳ್ಳು ಗ್ಯಾರಂಟಿಗಳ ಜತೆಗೆ ಅಕ್ರಮವಾಗಿ ಕೂಪನ್‌ಗಳನ್ನು ಹಂಚಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ 45-50 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಗೆಲುವು ಸಾಧಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು (ಮೇ.27): ಸುಳ್ಳು ಗ್ಯಾರಂಟಿಗಳ ಜತೆಗೆ ಅಕ್ರಮವಾಗಿ ಕೂಪನ್‌ಗಳನ್ನು ಹಂಚಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ 45-50 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಅಕ್ರಮವಾಗಿ ಗೆಲುವು ಸಾಧಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಶುಕ್ರವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಅಕ್ರಮದ ಬಗ್ಗೆ ಮಿಸ್ಟರ್ ಸಿದ್ದರಾಮಯ್ಯ ಧೈರ್ಯ ಇದ್ದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ. ಇದೇ ವೇಳೆ ಕೂಪನ್ ಗಿಫ್ಟ್‌ಗಳನ್ನು ಪ್ರದರ್ಶಿಸಿದ ಅವರು, ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಪಕ್ಷವು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಹಂಚಿದ ಕ್ಯೂಆರ್ ಕೋಡ್‌ಗಳುಳ್ಳ ಈ ಕೂಪನ್‌ಗಳೇ ಕಾರಣ. ಇದು ಗಂಭೀರ ಸ್ವರೂಪದ ಚುನಾವಣೆ ಅಕ್ರಮ ಎಂದು ದೂರಿದರು.
ಮೂರು ಸಾವಿರ ರು. ಮತ್ತು ಐದು ಸಾವಿರ ರು. ಮೊತ್ತದ ಕ್ಯೂಆರ್ ಕೋಡ್‌ಗಳನ್ನು ಹೊಂದಿರುವ ಕೂಪನ್‌ಗಳನ್ನು ಮತದಾನಕ್ಕೆ ಕೆಲವೇ ಗಂಟೆಗಳ ಮುನ್ನ ಮತದಾರರಿಗೆ ಹಂಚಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರಷ್ಟೇ ಈ ಕೂಪನ್ ನಗದಾಗುತ್ತದೆ. ಆಗ ಕೂಪನ್ ಹೊಂದಿರುವವರು ನಿಗದಿತ ಮಾಲ್ ಅಥವಾ ಮಳಿಗೆಗೆ ಹೋಗಿ ಕೂಪನ್‌ನಲ್ಲಿ ನಿಗದಿತ ಮೊತ್ತದ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ಆಮಿಷವೊಡ್ಡಲಾಗಿದೆ. ಇದು ಚುನಾವಣೆಯ ಮಹಾ ಅಕ್ರಮ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗವು ತನಿಖೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಸುಮಾರು 42 ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಗಿಫ್ಟ್ ಕೂಪನ್ ಹಂಚಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ ಸುಮಾರು 60 ಸಾವಿರ ಕೂಪನ್ ಹಂಚಿದ್ದಾರೆ ಎಂದರು.
ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ತಂಡವಾಗಿ ಕೆಲಸ ಮಾಡಿ: ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ವಿಸರ್ಜನೆ ಮಾಡಿತ್ತಾ?: ನಮ್ಮ ಬಗ್ಗೆ ಕಾಂಗ್ರೆಸ್ ಟ್ವಿಟ್ ಮಾಡಿದ್ದು, ಪಕ್ಷ ವಿಸರ್ಜನೆ ಯಾವಾಗಾ ಮಾಡುತ್ತೀರಿ ಎಂದು ಕೇಳಿದೆ. ಈ ಹಿಂದೆ ಒಂದು ಚುನಾವಣೆಯಲ್ಲಿ 179 ಸ್ಥಾನದಿಂದ 39 ಸ್ಥಾನಕ್ಕೆ ಇಳಿದಾಗ ಕಾಂಗ್ರೆಸ್ ನಾಯಕರು ಪಕ್ಷ ವಿಸರ್ಜನೆ ಮಾಡಿದ್ರಾ? ದುರಹಂಕಾರದ ಮಾತು ಬೇಡ. ಪಕ್ಷ ವಿಸರ್ಜನೆ ಮಾಡುವುದು, ಅಂತ್ಯ ಸಂಸ್ಕಾರ ಮಾಡುವುದು ಇದೆಲ್ಲಾ ಅವರಿಂದ ಕಲಿಯಬೇಕಿಲ್ಲ. 123 ಸ್ಥಾನ ಬಂದು ಪಂಚರತ್ನ ಯೋಜನೆಗಳನ್ನು ಜಾರಿ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೆ. ಆ ಹೇಳಿಕೆ ಕಾಂಗ್ರೆಸಿಗರಿಗೆ ಬೇರೆ ರೀತಿ ಕೇಳಿಸಿದೆ. ಅವರಂತಹ ಕುತಂತ್ರ ರಾಜಕಾರಣ ಮಾಡಿ ನಾವು ಪಕ್ಷ ಕಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಲೋಕಸಭೆ ರಿಸಲ್ಟ್ ಮೇಲೆ ಕಾಂಗ್ರೆಸ್ ಸರ್ಕಾರದ ಭವಿಷ್ಯ: ಎಚ್‌ಡಿಕೆ
ರಾಜ್ಯಾಧ್ಯಕ್ಷರಾಗಿ ಇಬ್ರಾಹಿಂ ಮುಂದುವರಿಕೆ: ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಮುಂದುವರಿಯಲಿದ್ದಾರೆ. ಚುನಾವಣೆ ಸೋಲಿನ ಹೊಣೆ ಹೊತ್ತು ಅವರು ರಾಜೀನಾಮೆ ಕೊಟ್ಟಿದ್ದಾರೆ. ಅವರನ್ನು ಮುಂದುವರಿಸಬೇಕಾ? ಅಥವಾ ಬೇಡವಾ ಎಂಬುದನ್ನು ನಾವು ತೀರ್ಮಾನ ಮಾಡುತ್ತೇವೆ. ಅವರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ. ಇನ್ನು, ಪಕ್ಷದ ಯುವಘಟಕ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಸಹ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಸಹ ಅಂಗೀಕಾರವಾಗಿಲ್ಲ. ಯಾರನ್ನು ನೇಮಿಸಬೇಕು ಎಂಬುದನ್ನು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.