ನಿವೃತ್ತ ಅಧಿಕಾರಿಯ ಹತ್ಯೆ| 9 ತಿಂಗಳಿಂದ ಬಾಡಿಗೆ ನೀಡದ ಕುಟುಂಬ| ಇದೇ ವಿಚಾರಕ್ಕೆ ಜಗಳ| ನಿವೃತ್ತ ಉಪತಹಸೀಲ್ದಾರಳ ಕತ್ತು ಕೊಯ್ದು ಕೊಲೆ| ಆಟೋದಲ್ಲಿ ಶವ ಸಾಗಿಸಿ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ ಬಾಡಿಗೆದಾರ| ಒಂದೇ ಕುಟುಂಬದ ಮೂವರ ಬಂಧನ|
ಬೆಂಗಳೂರು(ಫೆ.06): ಮನೆ ಬಾಡಿಗೆ ನೀಡುವಂತೆ ಕೇಳಿದ್ದ ಮನೆ ಮಾಲೀಕರೂ ಆದ ನಿವೃತ್ತ ಉಪ ತಹಸೀಲ್ದಾರ್ ಒಬ್ಬರನ್ನು ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಒಂದೇ ಕುಟುಂಬದ ಮೂವರು ಆರೋಪಿಗಳನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲ ನಿವಾಸಿ ನಿವೃತ್ತ ಉಪ ತಹಸೀಲ್ದಾರ್ ರಾಜೇಶ್ವರಿ (61) ಕೊಲೆಯಾದವರು. ಈ ಸಂಬಂಧ ಪಾವರ್ತಿಪುರಂನ ಜೆರನ್ ಪಾಷಾ, ಆಲಂಪಾಷಾ, ಹಾಗೂ ಮಹಿಳೆ ಆಶ್ರಫ್ ಉನ್ನಿಸಾ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಕೋರಮಂಗಲದಲ್ಲಿ ಕುಟುಂಬ ಸಮೇತ ರಾಜೇಶ್ವರಿ ಅವರು ನೆಲೆಸಿದ್ದು, ಒಂದು ವರ್ಷದ ಹಿಂದೆ ಉಪ ತಹಸೀಲ್ದಾರ್ ಹುದ್ದೆಯಿಂದ ನಿವೃತ್ತರಾಗಿದ್ದರು. ಪಾರ್ವತಿಪುರಂನಲ್ಲಿ ರಾಜೇಶ್ವರಿ ಅವರಿಗೆ ಸೇರಿದ್ದ ಮೂರು ಅಂತಸ್ತಿನ ಕಟ್ಟಡ ಇದೆ. ಈ ಕಟ್ಟಡದಲ್ಲಿನ ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಮೂರನೇ ಮಹಡಿಯಲ್ಲಿ ಆರೋಪಿ ಆಲಂಪಾಷಾ ಕುಟುಂಬ ಒಂದು ವರ್ಷದಿಂದ ನೆಲೆಸಿತ್ತು. ಆರೋಪಿ ಕುಟುಂಬ ಕಳೆದ ಒಂಬತ್ತು ತಿಂಗಳಿಂದ ಬಾಡಿಗೆ ನೀಡದೆ ರಾಜೇಶ್ವರಿ ಅವರಿಗೆ ಸತಾಯಿಸುತ್ತಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರಾಜೇಶ್ವರಿ ಅವರು ಫೆ.3ರಂದು ಮಧ್ಯಾಹ್ನ ಬಾಡಿಗೆದಾರನ ಮನೆಗೆ ತೆರಳಿ ಬಾಡಿಗೆ ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಆರೋಪಿ ಆಲಂಪಾಷಾ ಹಾಗೂ ರಾಜೇಶ್ವರಿ ಅವರ ನಡುವೆ ಜಗಳ ನಡೆದಿದೆ. ಈ ವೇಳೆ ಆರೋಪಿ ರಾಜೇಶ್ವರಿ ಅವರ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಮಹಿಳೆಯನ್ನು ಮನೆ ಒಳಗೆ ಎಳೆದುಕೊಂಡು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದ. ಕೊಲೆ ಮಾಡಿದ ಬಳಿಕ ತನ್ನ ಸಂಬಂಧಿಕರಿಗೆ ಮಾಹಿತಿ ತಿಳಿಸಿ ಮನೆ ಬಳಿ ಕರೆಯಿಸಿಕೊಂಡಿದ್ದ. ನಂತರ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಗೋಣಿ ಚೀಲದಲ್ಲಿ ಶವವನ್ನು ಹಾಕಿಕೊಂಡು ಆಟೋದಲ್ಲಿ ಬಿಡದಿ ಸಮೀಪದ ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸೀಮೆಣ್ಣೆ ಹಾಕಿ ಸುಟ್ಟು ಹಾಕಿದ್ದರು. ತಾಯಿ ನಾಪತ್ತೆ ಬಗ್ಗೆ ಠಾಣೆಗೆ ರಾಜೇಶ್ವರಿ ಪುತ್ರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವಿವಿ ಪುರಂ ಠಾಣೆ ಪೊಲೀಸರು ಆರೋಪಿ ಕುಟುಂಬವನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಂಪು ಸ್ಕೂಟರ್‌ನಲ್ಲಿ ಗೆಳತಿ ಶವ ತಂದು ರಸ್ತೆಗೆ ಎಸೆದ ಕಿರಾತಕರು!
200 ಸಿಸಿಟಿವಿ ಪರಿಶೀಲನೆ
ಆರೋಪಿಗಳನ್ನು ಮೊದಲಿಗೆ ವಿಚಾರಣೆ ನಡೆಸಿದಾಗ ನಮಗೆ ಏನು ಗೊತ್ತಿಲ್ಲದಂತೆ ನಟಿಸಿದ್ದರು. ಸ್ಥಳೀಯರು ಹಾಗೂ ಬಾತ್ಮೀದಾರರ ಮೂಲಕ ಆಲಂಪಾಷಾ ಮನೆಗೆ ಆಟೋವೊಂದು ಬಂದಿದ್ದು, ಅದರಲ್ಲಿ ಚೀಲವೊಂದನ್ನು ಕೊಂಡೊಯ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಆಧಾರದ ಮೇಲೆ ಆಟೋ ಸಂಚರಿಸಿದ ಪ್ರತಿಯೊಂದು ರಸ್ತೆಯ ಸುಮಾರು 200 ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆಲಂಪಾಷಾ, ಆತನ ಸಹೋದರು, ಚಿಕ್ಕಪ್ಪ ಅನುಮಾನಾಸ್ಪದವಾಗಿ ಹೋಗುತ್ತಿರುವುದು ಪತ್ತೆಯಾಗಿತ್ತು.
ಅದರಿಂದ ಅನುಮಾನಗೊಂಡ ಪೊಲೀಸರು ಕೂಡಲೇ ಆಲಂಪಾಷಾನನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ. ಅಜ್ಜಿ ಆಶ್ರಫ್ ಉನ್ನಿಸಾ, ಮನೆಯಿಂದ ಮೃತ ದೇಹ ಕೊಂಡೊಯ್ಯಲು ಸಹಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ಆರೋಪಿ ಆಲಂಪಾಷಾ ಕೇಟರಿಂಗ್ ಕೆಲಸ ಮಾಡುತ್ತಿದ್ದ. ಆತನ ಚಿಕ್ಕಪ್ಪ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 6, 2021, 7:33 AM IST