ಬೆಂಗಳೂರು(ಅ.02): ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಸೆರೆ ಹಿಡಿದ ಶ್ರೀರಾಮಪುರ ಠಾಣೆ ಪೊಲೀಸರು, ಆರೋಪಿಗಳಿಂದ 25 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.

ಲಿಂಗರಾಜಪುರದ ಕಾರ್ತಿಕ್‌ ಅಲಿಯಾಸ್‌ ಕಬಾಲಿ, ಕೋರಮಂಗಲದ ವಿಕ್ಕಿ ಹಾಗೂ ಕೂಡ್ಲು ವಿನಾಯಕ ನಗರದ ಪ್ರೇಮ್‌ಕುಮಾರ್‌ (21) ಬಂಧಿತರಾಗಿದ್ದು, ಆರೋಪಿಗಳಿಂದ 25 ಲಕ್ಷ ಮೌಲ್ಯದ 40 ಕೆ.ಜಿ.ಗಾಂಜಾ, ಎರಡು ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾ ಜಪ್ತಿ ಮಾಡಲಾಗಿದೆ. 

ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಯಶವಂತಪುರದಿಂದ ರೈಲ್ವೆ ಹಳಿ ಪಕ್ಕದ ರಸ್ತೆ ಬಳಿ ಸೆ.29ರಂದು ಸಂಜೆ 5.30ರಲ್ಲಿ ಆಟೋದಲ್ಲಿ ಕಾರ್ತಿಕ್‌ ತಂಡ ಗಾಂಜಾ ಸಾಗಿಸುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್‌ ಕುಮಾರ್‌ ಮೀನಾ ತಿಳಿಸಿದ್ದಾರೆ.

ಆಂಧ್ರದಿಂದ ಗೂಡ್ಸ್‌ ಆಟೋದಲ್ಲಿ ಗಾಂಜಾ ತಂದು ಮಾರಾಟ: 25 ಲಕ್ಷ ಮೌಲ್ಯದ ಮಾದಕ ವಸ್ತು ವಶ

ಪೆಡ್ಲರ್‌ ಆದ ಡಿ.ಜೆ:

ಕಾರ್ತಿಕ್‌ ವೃತ್ತಿಪರ ಪೆಡ್ಲರ್‌ ಆಗಿದ್ದು, ಆತನ ವಿರುದ್ಧ ನಗರದಲ್ಲಿ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಗಾಂಜಾ ಮಾರಾಟ ಪ್ರಕರಣದಲ್ಲಿ ಆತನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ಜಾಮೀನು ಪಡೆದು ಹೊರ ಬಂದ ನಂತರ ಮತ್ತೆ ತನ್ನ ಚಾಳಿ ಮುಂದುವರೆಸಿದ್ದಾನೆ. ಕೋರಮಂಗಲದ ಪಬ್‌ವೊಂದರಲ್ಲಿ ಡಿ.ಜೆ. ಆಗಿದ್ದ ವಿಕ್ಕಿ ಹಾಗೂ ಆನ್‌ಲೈನ್‌ ಕಂಪನಿಯ ಡಿಲಿವರಿ ಬಾಯ್‌ ಪ್ರೇಮ್‌ ಕುಮಾರ್‌ ಮಾದಕ ವಸ್ತು ವ್ಯಸನಿಗಳಾಗಿದ್ದು, ಕಾರ್ತಿಕ್‌ ಬಳಿ ಗಾಂಜಾ ಖರೀದಿಸಿ ಸೇವಿಸುತ್ತಿದ್ದರು. ಬಳಿಕ ಅವರಿಗೆ ಹಣದಾಸೆ ತೋರಿಸಿ ದಂಧೆಗೆ ಕಾರ್ತಿಕ್‌ ಬಳಸಿಕೊಂಡಿದ್ದಾನೆ. ಒಡಿಶಾದಲ್ಲಿ ಗಾಂಜಾ ಖರೀದಿಸಿ ತಂದು ನಗರದಲ್ಲಿ ಆರೋಪಿಗಳು ಮಾರುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.