ಅತ್ತಿಬೆಲೆಯಲ್ಲಿ ಸಂಗ್ರಹಿಸಿ ರಾಜ್ಯ ವಿವಿಧೆಡೆಗೆ ಸಾಗಾಟ| ಮನೆ ಮೇಲೆ ದಾಳಿ ಮಾಡಿ 40 ಕೆ.ಜಿ. ಗಾಂಜಾ ಹಾಗೂ 50 ಗ್ರಾಂ ಎಡಿಎಂಎ ಜಪ್ತಿ| ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆಗೆ ಗಾಂಜಾ ಸಾಗಾಟ| 

ಬೆಂಗಳೂರು(ಅ.01): ನಗರದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರನ್ನು ಬಂಧಿಸಿದ ಜೆ.ಸಿ.ನಗರ ಠಾಣೆ ಪೊಲೀಸರು, ಆರೋಪಿಗಳಿಂದ 45 ಕೆ.ಜಿ ಗಾಂಜಾ ಹಾಗೂ 70 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಕಾಡುಗೋಡಿಯ ಪೃಥ್ವಿ ಲೇಔಟ್‌ ನಿವಾಸಿ ಜಿಂಡೋ ಜೇಮ್ಸ್‌, ಅತ್ತಿಬೆಲೆಯ ಆದರ್ಶ ಹಾಗೂ ಇನ್ಮೇಶ್‌ ಬಂಧಿತರು. ಆರೋಪಿಗಳಿಂದ 25 ಲಕ್ಷ ಮೌಲ್ಯದ 45 ಕೆ.ಜಿ ಗಾಂಜಾ ಹಾಗೂ 70 ಗ್ರಾಂ ಎಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬೋರ್‌ ಬಂಕ್‌ ರಸ್ತೆ ಬಳಿ ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಮೂವರು ಪೆಡ್ಲರ್‌ಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇರಳ ಮೂಲದ ಆರೋಪಿಗಳು, ಡ್ರಗ್ಸ್‌ ದಂಧೆ ಸಲುವಾಗಿ ಕಾಡುಗೋಡಿ ಹಾಗೂ ಅತ್ತಿಬೆಲೆಯಲ್ಲಿ ಸೇರಿ ಮೂರು ಕಡೆ ಮನೆ ಬಾಡಿಗೆ ಪಡೆದಿದ್ದರು. ಮೊದಲು ಮಾದಕ ವಸ್ತು ವ್ಯಸನಿಗಳಾಗಿದ್ದ ಆರೋಪಿಗಳು, ನಂತರ ಪೆಡ್ಲರ್‌ಗಳಾಗಿ ಬದಲಾಗಿದ್ದಾರೆ. ಪೆಡ್ಲರ್‌ ಲೂಬಿನ್‌ ಅಮಲ್‌ನಾಥ್‌ ಎಂಬಾತನಿಂದ ಅವರು ಗಾಂಜಾ ಖರೀದಿಸುತ್ತಿದ್ದರು. ಬಳಿಕ ಹಣದಾಸೆ ಅಮಲ್‌ನಾಥ್‌ ಜತೆ ಸೇರಿ ದಂಧೆ ಶುರು ಮಾಡಿದ್ದರು. ಕೆಲ ದಿನಗಳ ಹಿಂದೆ ಅಮಲ್‌ನಾಥ್‌ನನ್ನು ಜಾಲಹಳ್ಳಿ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಡವ್ ರಾಣಿ ಸಂಜನಾ ಡ್ರಗ್ಸ್ ಮಾತ್ರವಲ್ಲ, ಈ ಖತರ್ನಾಕ್ ಕೆಲಸವನ್ನೂ ಮಾಡ್ತಿದ್ರಂತೆ..!

ವಿಶಾಖಪಟ್ಟಣದ ಪೆಡ್ಲರ್‌ಗಳನ್ನು ಅಮಲ್‌ನಾಥ್‌ ಮೂಲಕ ಜೇಮ್ಸ್‌ ತಂಡಕ್ಕೆ ಪರಿಚಯವಾಗಿದೆ. ಆನಂತರ ಆಂಧ್ರ ಗಡಿ ಭಾಗದಿಂದ ಗಾಂಜಾ ಖರೀದಿಸಿ ಅದನ್ನು ಗೂಡ್ಸ್‌ ವಾಹನದಲ್ಲಿ ಅಥವಾ ತಮ್ಮ ಕಾರಿನ ಮೂಲಕ ಅತ್ತಿಬೆಲೆ ನಿವಾಸಕ್ಕೆ ತರುತ್ತಿದ್ದರು. ಇಲ್ಲಿಂದ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆಗೆ ಅವರು ಸಾಗಿಸುತ್ತಿದ್ದರು. ಕೇರಳದಿಂದ ಡ್ರಗ್ಸ್‌ ದಂಧೆ ಸಲುವಾಗಿ ನಗರಕ್ಕೆ ಆರೋಪಿಗಳು ಬರುತ್ತಿದ್ದರು. ಕೆಲ ದಿನಗಳ ಹಿಂದೆ ವ್ಯಸನಿಯೊಬ್ಬನನ್ನು ಬಂಧಿಸಲಾಯಿತು. ಆತನ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಜೆ.ಸಿ.ನಗರ ಉಪ ವಿಭಾಗದ ಎಸಿಪಿ ರೀನಾ ಎನ್‌.ಸುವರ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪೆಡ್ಲರ್‌ಗಳನ್ನು ಸೆರೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅತ್ತಿಬೆಲೆ ಮನೆ ಮೇಲೆ ದಾಳಿ ಮಾಡಿ 40 ಕೆ.ಜಿ. ಗಾಂಜಾ ಹಾಗೂ 50 ಗ್ರಾಂ ಎಡಿಎಂಎ ಜಪ್ತಿ ಮಾಡಲಾಗಿದೆ. ಎಡಿಎಂಎ ಮಾದಕ ವಸ್ತುವನ್ನು ಕೊತ್ತನೂರು ಸಮೀಪದ ನೈಜೀರಿಯಾ ಪ್ರಜೆಯೊಬ್ಬನಿಂದ ಖರೀದಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.