ಬೆಂಗಳೂರು: ಕಾರ್ ಲಾಕ್ ಮುರಿದು ಚಿನ್ನ, ಹಣ ಕಳ್ಳತನ, ಕದ್ದ ಹಣದಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಿದ ಖದೀಮ!
ಈಜೀಪುರ ಮುಖ್ಯ ರಸ್ತೆ 2ನೇ ಕ್ರಾಸ್‌ನ ಟೀ ಅಂಗಡಿ ಬಳಿ ಆರೋಪಿ ಸೈಯದ್ ವಾಸೀಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕಾರಿನಲ್ಲಿ ಹಣ ಹಾಗೂ ಚಿನ್ನಾಭರಣ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡ ಆರೋಪಿ
ಬೆಂಗಳೂರು(ಅ.26): ಖಾಸಗಿ ಆಸ್ಪತ್ರೆ ಪಕ್ಕದಲ್ಲಿ ನಿಲುಗಡೆ ಮಾಡಿದ್ದ ಕಾರೊಂದರ ಬಾಗಿಲ ಲಾಕ್ ಮುರಿದು ನಗದು, ಚಿನ್ನಾಭರಣವಿದ್ದ ಬ್ಯಾಗ್ ಕಳವು ಮಾಡಿದ್ದ ಆರೋಪಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈಜೀಪುರ ನಿವಾಸಿ ಬಂಧಿತ ಸೈಯದ್ ಸೈಯದ್ ವಾಸೀಫ್ (56) ಬಂಧಿತ. ಆರೋಪಿಯಿಂದ 144 ಗ್ರಾಂ ಚಿನ್ನಾಭರಣ 2 ಲಕ್ಷ ನಗದು, ಕಾರು ಸೇರಿ ಒಟ್ಟು ₹13.75 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಹೊರಮಾವು ಕೊಕನಟ್ ಗ್ರೂಟಿ ಲೇಔಟ್ ನಿವಾಸಿ ವಿಜಯಮ್ಮ ತಮ್ಮ ತಂಗಿಯ ಮಗನ ಜತೆಗೆ ಸೆ.19ರಂದು ತಮ್ಮ ಪತಿ ರಾಮಚಂದ್ರ ರೆಡ್ಡಿ ಅವರನ್ನು ಬಾಣಸವಾಡಿ ಟ್ರೈ ಲೈಫ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ತಮ್ಮ ಕಾರನ್ನು ಆಸ್ಪತ್ರೆ ಪಕ್ಕದ ಕಿರಿದಾದ ರಸ್ತೆಯಲ್ಲಿ ನಿಲುಗಡೆ ಮಾಡಿದ್ದರು.
ಮಂಗಳೂರು: ಸೈಟ್ ತೋರಿಸುವುದಾಗಿ ಹೇಳಿ ಮಹಿಳೆಗೆ ಲೈಂಗಿಕ ಕಿರುಕುಳ
ಆಸ್ಪತ್ರೆಗೆ ತೆರಳುವ ಧಾವಂತದಲ್ಲಿ ಈ 10 ಲಕ್ಷ ನಗದು ಹಾಗೂ 300 ಗ್ರಾಂ ಚಿನ್ನಾಭರಣವಿದ್ದ ಬ್ಯಾಗನ್ನು ಕಾರಿ ನಲ್ಲೇ ಬಿಟ್ಟು ಹೋಗಿದ್ದರು. ಆಸ್ಪತ್ರೆ ಒಳಗೆ ತೆರಳಿದ ಕೆಲ ಸಮಯದ ಬಳಿಕ ಬ್ಯಾಗ್ ನೆನಪಾಗಿ ಕಾರಿನ ಬಳಿ ಬಂದು ನೋಡಿದಾಗ, ದುಷ್ಕರ್ಮಿಗಳು ನಗದು ಹಾಗೂ ಚಿನ್ನಾ ಭರಣವಿದ್ದ ಬ್ಯಾಗ್ ಕಳವು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಇನ್‌ಸ್ಪೆಕ್ಟರ್ ಅರುಣ್ ಸಾಳುಂಕೆ ನೇತೃತ್ವದಲ್ಲಿ ತನಿಖೆ ನಡೆಸಿ ಬಂಧಿಸಲಾಗಿದೆ.
ಕಾರಿನೊಳಗೆ ಬಚ್ಚಿಟ್ಟಿದ್ದ ಚಿನ್ನಾಭರಣ ಜಪ್ತಿ:
ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಈಜೀಪುರ ಮುಖ್ಯ ರಸ್ತೆ 2ನೇ ಕ್ರಾಸ್‌ನ ಟೀ ಅಂಗಡಿ ಬಳಿ ಆರೋಪಿ ಸೈಯದ್ ವಾಸೀಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕಾರಿನಲ್ಲಿ ಹಣ ಹಾಗೂ ಚಿನ್ನಾಭರಣ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆರೋಪಿ ನೀಡಿದ ಮಾಹಿತಿ ಮೇರೆಗೆ ಈಜೀಪುರ ಮುಖ್ಯ ರಸ್ತೆಯಲ್ಲಿ ನಿಲುಗಡೆ ಮಾಡಿದ್ದ ಸ್ಯಾಂಟ್ರೋ ಕಾರಿನಲ್ಲಿ ಬಚ್ಚಿಟ್ಟಿದ್ದ 144 ಗ್ರಾಂ ಚಿನ್ನಾಭರಣ ಹಾಗೂ ₹2 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕದ್ದ ಹಣದಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಿದ!
ಆರೋಪಿ ಸೈಯದ್ ವಾಸೀಫ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ರಿಯಲ್ ಎಸ್ಟೇಟ್ ಏಜೆಂಟ್ ಕೆಲಸ ಮಾಡಿಕೊಂಡಿದ್ದಾನೆ. ಆರೋಪಿಯು ಅಂದು ಟ್ರೈ ಲೈಫ್ ಆಸ್ಪತ್ರೆ ಬಳಿ ಕಾರಿನೊಳಗೆ ಬ್ಯಾಗ್ ಇರುವುದನ್ನು ನೋಡಿ, ತನ್ನ ಬಳಿಯಿದ್ದ ಚಪ್ಪಟೆ ಆಕಾರದ ಸಲಾಕೆಯಿಂದ ಕಾರಿನ ಬಾಗಿಲ ಲಾಕ್ ಮುರಿದು ಬ್ಯಾಗ್ ಕಳವು ಮಾಡಿದ್ದ. ಬಳಿಕ ಕದ್ದ ಮಾಲುಗಳ ಪೈಕಿ ಕೆಲವು ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ. ಹಣದಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸಿದ್ದ. ಮೋಜು-ಮಸ್ತಿ ಮಾಡಿ ಸ್ವಲ್ಪ ಹಣ ವ್ಯಯಿಸಿದ್ದ ಎಂಬುದು ತಿಳಿದು ಬಂದಿದೆ.