ದೇವರ ಮೂರ್ತಿ ಕದ್ದು ನಿದ್ದೆ ಬಿಟ್ಟ ಕಳ್ಳ, ಮನೆಯವರ ಅನಾರೋಗ್ಯಕ್ಕೆ ಬೆದರಿ, ಕ್ಷಮಾಪಣೆ ಪತ್ರದೊಂದಿಗೆ ವಾಪಸು ತಂದಿಟ್ಟ!
ಪ್ರಯಾಗರಾಜ್ ದೇವಸ್ಥಾನವೊಂದರಲ್ಲಿ ಅಚ್ಚರಿ ಘಟನೆ ನಡೆದಿದೆ. ದೇವರ ವಿಗ್ರಹ ಕದ್ದಿದ್ದ ಕಳ್ಳನೊಬ್ಬ ಅದನ್ನು ಹಿಂತಿರುಗಿಸಿದ್ದಾನೆ. ಕಳ್ಳತನ ಮಾಡಿದ ದಿನದಿಂದ ಆತ ಅನುಭವಿಸಿದ ಹಿಂಸೆಯೇ ವಿಗ್ರಹ ವಾಪಸ್ ಮಾಡಲು ಕಾರಣವಾಗಿದೆ.
ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳನ್ನು ನಂಬೋದು ಕಷ್ಟ. ದೇವರು, ಅಗೋಚರ ಶಕ್ತಿಗಳ ಬಗ್ಗೆ ಆಗಾಗ ಸುದ್ದಿಗಳು ಬರ್ತಿರುತ್ತವೆ. ಆದ್ರೆ ಅದೆಷ್ಟು ಸತ್ಯ ಎಂಬುದನ್ನು ಈವರೆಗೆ ಯಾರಿಂದಲೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ದೇವರ ವಸ್ತುವನ್ನೇ ಕದ್ದರೆ ದೇವರು ಬಿಡ್ತಾನಾ ಅಂತ ಭಕ್ತರು ಹೇಳೋದನ್ನು ಕೇಳಿರಬಹುದು. ಇದು ಅನೇಕ ಬಾರಿ ನಿಜ ಕೂಡ ಆಗಿದೆ. ದುಃಸ್ವಪ್ನಕ್ಕೆ ಹೆದರಿ ಕಳ್ಳನೊಬ್ಬ ದೇವರ ವಿಗ್ರಹ (God Idol) ವನ್ನು ವಾಪಸ್ ತಂದಿಟ್ಟ ಘಟನೆ ನಡೆದಿದೆ.
ಪ್ರಯಾಗರಾಜ್ (Prayagraj) ನ ಗೌಘಾಟ್ ಆಶ್ರಮ ದೇವಸ್ಥಾನ (Temple) ದಲ್ಲಿ ಘಟನೆ ನಡೆದಿದೆ. ಶ್ರೀಕೃಷ್ಣ ಮತ್ತು ರಾಧೆ (Krishna and Radha) ಯ ಅಷ್ಟಧಾತು ವಿಗ್ರಹವನ್ನು ಕಳ್ಳತನ ಮಾಡಲಾಗಿತ್ತು. ಸೆಪ್ಟೆಂಬರ್ 23 ರಂದು ಕಳ್ಳತನ ನಡೆದಿತ್ತು. ಅಕ್ಟೋಬರ್ 1 ರಂದು ದೇವಸ್ಥಾನದ ಹೊರಗೆ ಗೋಣಿಚೀಲವನ್ನು ಇಳಿಸಿ ವ್ಯಕ್ತಿಯೊಬ್ಬ ಓಡಿಹೋಗುತ್ತಿರುವುದನ್ನು ಜನರು ನೋಡಿದ್ದಾರೆ. ಚೀಲವನ್ನು ಪರಿಶೀಲಿಸಿದಾಗ, ವಿಗ್ರಹಗಳು ಮತ್ತು ಪತ್ರ ಕಂಡು ಬಂದಿದೆ. ವಿಗ್ರಹವನ್ನು ವಾಪಸ್ ಮಾಡಿದ ಕಳ್ಳ, ಪತ್ರದ ಮೂಲಕ, ಅರ್ಚಕರ ಕ್ಷಮೆ ಕೇಳಿದ್ದಾನೆ.
ಅತ್ತೆಗೊಂದು ಕಾಲ ಮುಗೀತು, ಸೊಸೆ ಕಾಲ ಶುರುವಾಯ್ತು: ಅತ್ತೆಯ ಹಲ್ಲು ಮುರಿಯುವಂತೆ ಹೊಡೆದ ಕಿರಿ ಸೊಸೆ!
ನಾನು ದೊಡ್ಡ ತಪ್ಪು ಮಾಡಿದೆ. ಅರಿವಿಲ್ಲದೆ ಶ್ರೀಕೃಷ್ಣ ಮತ್ತು ರಾಧೆಯ ವಿಗ್ರಹಗಳನ್ನು ಕದ್ದಿದ್ದೇನೆ ಎಂದು ಕಳ್ಳ ಪತ್ರದಲ್ಲಿ ಬರೆದಿದ್ದಾನೆ. ಕಳ್ಳತನ ಮಾಡಿದಂದಿನಿಂದ ನನಗೆ ದುಃಸ್ವಪ್ನ ಕಾಡುತ್ತಿದೆ. ನೆಮ್ಮದಿಯಿಂದ ಮಲಗಲು, ತಿನ್ನಲು ಸಾಧ್ಯವಾಗ್ತಿಲ್ಲ. ನನ್ನ ಹೆಂಡತಿ ಮತ್ತು ಮಗ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಾನು ವಿಗ್ರಹಗಳನ್ನು ಮಾರಾಟ ಮಾಡಿ, ಹಣ ಮಾಡಿಕೊಳ್ಳಲು ಬಯಸಿದ್ದೆ. ಆದ್ರೆ ದುಃಸ್ವಪ್ನಕ್ಕೆ ಹೆದರಿ ಇದನ್ನು ಹಿಂತಿರುಗಿಸುತ್ತಿದ್ದೇನೆ ಎಂದು ಬರೆದಿದ್ದಾನೆ.
2022ರಲ್ಲಿ ಕೂಡ ಇಂಥ ಘಟನೆ ನಡೆದಿತ್ತು. ಉತ್ತರ ಪ್ರದೇಶದ ಚಿತ್ರಕೂಟದಲ್ಲಿರುವ ಬಾಲಾಜಿ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು. ಅಷ್ಟಧಾತು ಅಮೂಲ್ಯ ವಿಗ್ರಹಗಳನ್ನು ಕಳ್ಳರು ಕದ್ದೊಯ್ದಿದ್ದರು. ಆದ್ರೆ ದೇವರ ವಿಗ್ರಹ ಕದ್ದ ಮೇಲೆ ಅವರಿಗೆ ಸರಿಯಾಗಿ ನಿದ್ರೆ ಬರ್ತಿರಲಿಲ್ಲ. ದುಃಸ್ವಪ್ನಗಳು ಬರಲು ಶುರುವಾಗಿದ್ದವು. ದೇವಾಲಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ 16 ವಿಗ್ರಹಗಳನ್ನು ಕಳವು ಮಾಡಿದ್ದ ಅವರು ಕದ್ದ ವಿಗ್ರಹಗಳು ತುಂಬಿದ ಗೋಣಿಚೀಲವನ್ನು ದೇವಸ್ಥಾನದ ಬಳಿ ಇಟ್ಟಿದ್ದರು. ಕದ್ದ ವಿಗ್ರಹಗಳ ಜೊತೆಗೆ ಕಳ್ಳರು ತಮ್ಮ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳುವ ಪತ್ರವನ್ನು ಇಟ್ಟಿದ್ದರು. ದೇವಸ್ಥಾನದ ಅರ್ಚಕರಿಗೆ ಬರೆದ ಪತ್ರದಲ್ಲಿ ಕಳ್ಳರು ತಮಗೆ ದುಃಸ್ವಪ್ನ ಕಾಡುತ್ತಿದೆ. ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ವಿಗ್ರಹಗಳನ್ನು ಹಿಂದಿರುಗಿಸುತ್ತಿದ್ದೇವೆ ಎಂದು ಬರೆದಿದ್ದರು.
ಇಂಥ ಘಟನೆ ಅನೇಕ ಬಾರಿ ನಡೆದಿದೆ. ಕೆಲ ದಿನಗಳ ಹಿಂದೆ ಭೋಪಾಲ್ ನಲ್ಲಿ ಕಾರು ಚಾಲಕನೊಬ್ಬ ಮಾಲೀಕನ ಮನೆಯಲ್ಲಿ ಕಳ್ಳತನ ಮಾಡಿ ಎಲ್ಲ ಹಣವನ್ನು ದೋಚಿದ್ದ. ಮನೆ ಮಾಲೀಕನಿಗೆ ಪತ್ರವೊಂದನ್ನು ಬರೆದಿಟ್ಟಿದ್ದ. ಅಗತ್ಯ ಕಾರಣಕ್ಕೆ ಹಣವನ್ನು ಕದಿಯುತ್ತಿದ್ದೇನೆ. ನಾನು 20 ದಿನಗಳಲ್ಲಿ ಎಲ್ಲವನ್ನೂ ಹಿಂತಿರುಗಿಸ್ತೇನೆಂದು ಬರೆದಿದ್ದ. ಅದೇ ರೀತಿ ಘಟನೆ ಖ್ಯಾತ ಮರಾಠಿ ಕವಿ ನಾರಾಯಣ್ ಸುರ್ವೆ ಅವರ ಮನೆಯಲ್ಲಿ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ್ದ ಕಳ್ಳ ಎಲ್ಲವನ್ನೂ ಕದ್ದಿದ್ದ. ಆದ್ರೆ ಕದ್ದ ನಂತ್ರ, ಅದು ಕವಿ ನಾರಾಯಣ್ ಸುರ್ವೆ ಮನೆ ಎಂಬುದು ಆತನಿಗೆ ತಿಳಿಯಿತು. ತನ್ನ ಕೆಲಸಕ್ಕೆ ಪಶ್ಚಾತಾಪಪಟ್ಟಿದ್ದಲ್ಲದೆ, ಕ್ಷಮೆ ಕೋರಿ ಪತ್ರವನ್ನು ಬರೆದಿಟ್ಟು, ಕದ್ದ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿದ್ದ. ಈ ಘಟನೆ ರಾಯಗಢ ಜಿಲ್ಲೆಯ ನೇರಲ್‌ನಲ್ಲಿ ನಡೆದಿತ್ತು. ಕವಿ ನಾರಾಯಣ್ ಸುರ್ವೆ 2010ರಲ್ಲೇ ನಿಧನರಾಗಿದ್ರೂ ಅವರ ಮೇಲಿನ ಗೌರವ ಹಾಗೂ ಅವರು ಮಾಡಿದ ಸಮಾಜ ಸೇವೆಗೆ ಕಳ್ಳ ಪ್ರಭಾವಿತನಾಗಿದ್ದ.