3 ವರ್ಷದಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಖದೀಮ ಕೊನೆಗೂ ಪರಪ್ಪನ ಅಗ್ರಹಾರ ಜೈಲಿಗೆ

ಬೆಂಗಳೂರು(ಜು.23):  ಕದ್ದ ಬೈಕ್‌ಗಳಲ್ಲಿ ವ್ಹೀಲಿಂಗ್‌ ‘ರೀಲ್ಸ್‌’ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಚಾಲಾಕಿ ಖದೀಮನೊಬ್ಬ ಮೈಕೋಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬನ್ನೇರುಘಟ್ಟ ರಸ್ತೆಯ ಅರೆಕೆರೆ ನಿವಾಸಿ ಸೈಯದ್‌ ಸುಹೈಲ್‌ ಬಂಧಿತನಾಗಿದ್ದು, ಆರೋಪಿಯಿಂದ 50 ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಮೈಕೋ ಲೇಔಟ್‌ ವ್ಯಾಪ್ತಿಯಲ್ಲಿ ಸರಣಿ ಬೈಕ್‌ ಕಳ್ಳತನಗಳಾಗಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

11 ಕಿ.ಮೀ. ಬೈಕ್‌ ವ್ಹೀಲಿಂಗ್‌ ರೀಲ್ಸ್‌!: 

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಸುಹೈಲ್‌ ಕುಟುಂಬ, ಹಲವು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದು ನೆಲೆಸಿತ್ತು. ಇತ್ತೀಚೆಗೆ ಆತನ ತಂದೆ ನಿಧನದ ಬಳಿಕ ಕುಟುಂಬದವು ಸ್ವಂತ ಊರಿಗೆ ಮರಳಿದ್ದರು. ಆದರೆ ಪೋಷಕರ ಜತೆ ಊರಿಗೆ ತೆರಳದೆ ನಗರದಲ್ಲೆ ನೆಲೆ ನಿಂತ ಸುಹೈಲ್‌, ಸುಲಭವಾಗಿ ಹಣ ಸಂಪಾದನೆಗೆ ಬೈಕ್‌ ಕಳ್ಳತನಕ್ಕಿಳಿದಿದ್ದ. ಮನೆ ಬಳಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಆತ ಕಳವು ಮಾಡಿ ಕಡಿಮೆ ಬೆಲೆಗೆ ವಿಲೇವಾರಿ ಮಾಡುತ್ತಿದ್ದ.

Ballari: ಮಗಳ ಮದುವೆಗೆ ತಂದಿಟ್ಟಿದ್ದ ಚಿನ್ನಕ್ಕೆ ಕನ್ನ ಹಾಕಿದ ಖದೀಮರು!

ಹೀಗೆ ಕದ್ದ ಬೈಕ್‌ಗಳಲ್ಲಿ ವೀಲ್ಹಿಂಗ್‌ ಮಾಡುತ್ತಿದ್ದಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡಿ ಅಪ್‌ಲೋಡ್‌ ಮಾಡುತ್ತಿದ್ದ. ಕೆಲವು ಲೈಕ್‌ ಬಂದ ಬಳಿಕ ಆ ರೀಲ್ಸ್‌ ವಿಡಿಯೋ ಡಿಲೀಟ್‌ ಮಾಡುತ್ತಿದ್ದ. ಒಮ್ಮೆ 11 ಕಿ.ಮೀ. ವ್ಹೀಲಿಂಗ್‌ ಮಾಡಿದ ವಿಡಿಯೋವನ್ನು ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಚಾರ ತಿಳಿದ ಮೈಕೋ ಲೇಔಟ್‌ ಉಪ ವಿಭಾಗದ ಎಸಿಪಿ ಕರಿಬಸವೇಗೌಡ ನೇತೃತ್ವದ ತಂಡವು, ಇನ್‌ಸ್ಟಾಗ್ರಾಮ್‌ ವಿಡಿಯೋ ಆಧರಿಸಿ ಕಾರ್ಯಾಚರಣೆಗಿಳಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕಳವು ಬೈಕ್‌ಗಳನ್ನು ಚನ್ನರಾಯಪಟ್ಟಣ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಹೆಚ್ಚಾಗಿ ಆರೋಪಿ ವಿಲೇವಾರಿ ಮಾಡಿದ್ದ. ಮೂರು ವರ್ಷಗಳಿಂದ ಬೈಕ್‌ ಕಳವು ಮಾಡುತ್ತಿದ್ದರೂ ಸಹ ಪೊಲೀಸರಿಗೆ ಸಿಗದೆ ಓಡಾಡುತ್ತಿದ್ದ ಸುಹೇಲ್‌ಗೆ ಕೊನೆಗೂ ಮೈಕೋ ಲೇಔಟ್‌ ಠಾಣೆ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ದರ್ಶನ ಮಾಡಿಸಿದ್ದಾರೆ. ಆರೋಪಿಯಿಂದ 50 ಬೈಕ್‌ಗಳನ್ನು ಜಪ್ತಿ ಮಾಡಲಾಗಿದ್ದು, ಇದರಲ್ಲಿ 38 ಬೈಕ್‌ಗಳ ಮಾಲಿಕರನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೇಶ್ಯೆಯರ ಚಟಕ್ಕೆ ಕಾರು ಕದಿಯುತ್ತಿದ್ದ ಖದೀಮನ ಬಂಧನ..!

ತಮಿಳುನಾಡು ತಂಡ ಸೆರೆ

ನಗರದಲ್ಲಿ ಬೈಕ್‌ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಮತ್ತೊಂದು ತಂಡ ಬೊಮ್ಮನಹಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದೆ. ತಮಿಳುನಾಡು ಮೂಲದ ನೆಡುಚೆಲಿಯನ್‌, ತಿರುಪತಿ ಹಾಗೂ ವಲ್ಲರಸು ಬಂಧಿತರಾಗಿದ್ದು, ಆರೋಪಿಗಳಿಂದ 26 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

ತಮಿಳುನಾಡಿನಿಂದ ಬಸ್‌ನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಹಗಲು ವೇಳೆ ಸುತ್ತಾಡಿ ಬೈಕ್‌ಗಳು ಹೆಚ್ಚು ನಿಲ್ಲಿಸುವ ಪ್ರದೇಶಗಳನ್ನು ಗುರುತಿಸುತ್ತಿದ್ದರು. ಆನಂತರ ಇರುಳಿನಲ್ಲಿ ಆ ನಿಗದಿತ ಸ್ಥಳಕ್ಕೆ ಮೂವರ ಪೈಕಿ ಒಬ್ಬಾತ ತೆರಳಿ ಲಾಕ್‌ ಮುರಿದು ಬೈಕ್‌ ಕಳವು ಮಾಡುತ್ತಿದ್ದ. ಇನ್ನುಳಿದ ಇಬ್ಬರು ದೂರದಲ್ಲೇ ನಿಂತು ಸಾರ್ವಜನಿಕರ ಓಡಾಟದ ಮೇಲೆ ನಿಗಾ ವಹಿಸುತ್ತಿದ್ದರು. ಹೀಗೆ ಒಂದು ಬಾರಿ ಮೂರು ಬೈಕ್‌ಗಳನ್ನು ಕಳವು ಮಾಡಿ ಆರೋಪಿಗಳು ತಮಿಳುನಾಡಿಗೆ ಮರಳುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಇತ್ತೀಚೆಗೆ ಆಗ್ನೇಯ ವಿಭಾಗದಲ್ಲಿ ಬೈಕ್‌ ಕಳ್ಳತನ ಬಗ್ಗೆ ಎಚ್ಚೆತ್ತ ಪೊಲೀಸರು, ಕೃತ್ಯ ನಡೆದ ವ್ಯಾಪ್ತಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ತಮಿಳುನಾಡು ಗ್ಯಾಂಗ್‌ನ ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.