Ballari: ಬಂಗಾರದ ಅಂಗಡಿಯಲ್ಲಿ ಕಳ್ಳತನ: ಕ್ಷಣಾರ್ಧದಲ್ಲಿ ನಡೆದ ಘಟನೆಗೆ ಕಂಗಾಲಾದ ಮಾಲೀಕ!
ಕಳ್ಳತನ ಮಾಡೊ ಸನ್ನಿವೇಶ ಕ್ಷಣಾರ್ಧದಲ್ಲಿ ಹೇಗೆ ನಡೆಯುತ್ತದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಯಾಕೆಂದರೆ ಒಂದೇ ಒಂದು ಕ್ಷಣ ಮೈಮರೆತ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣವನ್ನು ಹಾಡುಹಗಲೇ ಕಳ್ಳತನ ಮಾಡಲಾಗಿದೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ
ಬಳ್ಳಾರಿ (ಮೇ.13): ಕಳ್ಳತನ (Theft) ಮಾಡೊ ಸನ್ನಿವೇಶ ಕ್ಷಣಾರ್ಧದಲ್ಲಿ ಹೇಗೆ ನಡೆಯುತ್ತದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಯಾಕೆಂದರೆ ಒಂದೇ ಒಂದು ಕ್ಷಣ ಮೈ ಮರೆತ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣವನ್ನು (ಘೊಲದ) ಹಾಡುಹಗಲೇ ಕಳ್ಳತನ ಮಾಡಲಾಗಿದೆ. ಇಂತಹದ್ದೊಂದು ಘಟನೆಗೆ ಸಂಡೂರಿನ ಬಂಗಾರದ ಅಂಗಡಿ ಸಾಕ್ಷಿಯಾಗಿದೆ. ಘಟನೆಯಲ್ಲಿ ಕಳ್ಳನ (Thief) ಕರಾಮತ್ತು ಮೆಚ್ಚಬೇಕೋ ಅಥವಾ ಮಾಲೀಕರ ನಿರ್ಲಕ್ಷ್ಯಕ್ಕೆ ತೆತ್ತ ಬೆಲೆ ಅನ್ನೋಬೇಕೋ ಗೊತ್ತಿಲ್ಲ.
ಕಣ್ಣೆದುರಿಗೆ ನಡೆದ ಘಟನೆ ಆದರೆ ಯಾರಿಗೂ ಗೊತ್ತಾಗಲೇ ಇಲ್ಲ: ಅದು ಜನನಿಬಿಡ ಪ್ರದೇಶದಲ್ಲಿರೋ ಸಂಡೂರು ಪಟ್ಟಣದ SSV ಜ್ಯುವೆಲರ್ಸ್ ಎನ್ನುವ ಬಂಗಾರದ ಅಂಗಡಿ. ಇಲ್ಲಿ ಹಾಡುಹಗಲೇ ಮೂವತ್ತು ಲಕ್ಷಕ್ಕೂ ಹೆಚ್ಚು ಮೊತ್ತದ ಬಂಗಾರದ ಆಭರಣ ಕಳ್ಳತನ ಮಾಡಲಾಗಿದೆ. ಹೌದು! ಎಂದಿನಂತೆ ಅಂಗಡಿ ಮಾಲೀಕ ಮೆಹಬೂಬ್ ಭಾಷ ಅಂಗಡಿಯ ಒಂದು ಬಾಗಿಲಿನ ಬೀಗ ತಗೆದು ಅಂಗಡಿಯೊಳಗೆ ಚಿನ್ನವಿದ್ದ ಚೀಲವನ್ನಿಟ್ಟಿದ್ದಾರೆ.
ಬಳ್ಳಾರಿ ಮೇಯರ್ ಸ್ಥಾನಕ್ಕೆ ಕೋಟಿ ಕೋಟಿ ಡೀಲ್: ಶಾಸಕ ನಾಗೇಂದ್ರ ಮಾವನ ವಿರುದ್ಧ ತಿರುಗಿಬಿದ್ದ ಪಾಲಿಕೆ ಸದಸ್ಯ
ನಂತರ ಇನ್ನೊಂದು ಬಾಗಿಲು ತೆಗೆಯಲು ಪಕ್ಕದಲ್ಲೇ ನಿಂತು ಶೆಟರ್ ಬೀಗ ತೆಗೆಯುತ್ತಿದ್ದಾರೆ. ಈ ವೇಳೆ ಬಂದ ಕಳ್ಳ ಬಂಗಾರವಿದ್ದ ಬ್ಯಾಗ್ ಕಳ್ಳತನ ಮಾಡಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಬ್ಯಾಗ್‌ನಲ್ಲಿ 825 ಗ್ರಾಂ ಬಂಗಾರ ಇತ್ತು. 32,54,000 ಮೌಲ್ಯ ಆಗುತ್ತದೆ ಎಂದು ಹೇಳಲಾಗ್ತಿದೆ. ಈ ಕುರಿತು ಚಿನ್ನದಂಗಡಿ ಮಾಲೀಕ ಮೆಹಬೂಬ ಬಾಷಾ ಸಂಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ: ಇನ್ನೂ ಚಿನ್ನದ ಬ್ಯಾಗ ಕದ್ದು ಬೈಕ್‌ನಲ್ಲಿ ಪರಾರಿಯಾದ ಓರ್ವ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ನಂತರ ರಸ್ತೆಯಲ್ಲಿ ಮೂವರು ಕಳ್ಳರು ಬೈಕ್ ಮೇಲೆ ಹೋಗ್ತಿರೋದು ಕೂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಶೇಷವೆಂದರೆ ಚಿನ್ನ ಕದ್ದ ಕಳ್ಳರು ಪೊಲೀಸ್ ಠಾಣೆಯ (Police Station) ಮುಂದಿನ ರಸ್ತೆಯಲ್ಲೆ ಪರಾರಿಯಾಗಿದ್ದಾರೆ.
ಕುಡುತಿನಿ ಪಪಂ ಅಧ್ಯಕ್ಷ ರಾಜಶೇಖರ ಸೇರಿ ಮೂವರ ಸದಸ್ಯರ ಸದಸ್ಯತ್ವ ರದ್ದು
ಬಂಗಾರ ಮನೆಯಲ್ಲಿ ಇಡೋದು ವಾಡಿಕೆ: ಸಾಮಾನ್ಯವಾಗಿ ನಿತ್ಯದ ವ್ಯಾಪಾರ ವಹಿವಾಟು ಮುಗಿದ ಬಳಿಕ ಅಂಗಡಿಯಲ್ಲಿ ಇರೋ ಚಿನ್ನವನ್ನು ಒಂದು ಬ್ಯಾಗ್‌ನಲ್ಲಿ ಹಾಕಿಕೊಂಡು ಮನೆಗೆ ತೆಗೆದುಕೊಂಡು ಹೋಗ್ತಾರೆ. ಅದೇ ರೀತಿ ಮೆಹಬೂಬ್ ಭಾಷ ಕೂಡ ಬಂಗಾರವನ್ನು ಬ್ಯಾಗ್‌ವೊಂದರಲ್ಲಿ ಮನೆಗೆ ತೆಗೆದುಕೊಂಡು ಮಾರನೇ ದಿನ ಅಂಗಡಿಗೆ ತಂದಿದ್ರು. ಆದರೆ ಅಂಗಡಿ ಬಾಗಿಲು ತೆಗೆಯೋ ವೇಳೆ ಈ ಘಟನೆ ನಡೆದಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸರು (Police) ಸಿಸಿಟಿವಿಯ ಆಧಾರದಲ್ಲಿ ಕಳ್ಳರನ್ನು ಹುಡುಕುತ್ತಿದ್ದಾರೆ.