ವ್ಯಾಪಾರಿಯೊಬ್ಬರ ಪಾನ್‌ ಕಾರ್ಡ್‌, ಜಿಎಸ್‌ಟಿ ಐಡಿ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಆತನ ಹೆಸರಿನಲ್ಲೇ ವಹಿವಾಟು ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರು. ತೆರಿಗೆ ವಂಚಿಸಿದ್ದ ನಾಲ್ವರು ಚಾಲಾಕಿ ಆರೋಪಿಗಳನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜೂ.14) ವ್ಯಾಪಾರಿಯೊಬ್ಬರ ಪಾನ್‌ ಕಾರ್ಡ್‌, ಜಿಎಸ್‌ಟಿ ಐಡಿ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಆತನ ಹೆಸರಿನಲ್ಲೇ ವಹಿವಾಟು ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರು. ತೆರಿಗೆ ವಂಚಿಸಿದ್ದ ನಾಲ್ವರು ಚಾಲಾಕಿ ಆರೋಪಿಗಳನ್ನು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಡೆಲ್ಲಿ ಬಾಬು, ಬೆಂಗಳೂರಿನ ಆರ್‌.ಜಾನಕಿ ರಾಮ ರೆಡ್ಡಿ, ಹಿರೇಲಾಲ್‌, ತೇಜ್‌ ರಾಜ್‌ ಗಿರಿಯಾ ಬಂಧಿತರು. ಆರೋಪಿಗಳು ನಗರದ ವ್ಯಾಪಾರಿ ಹಮೀದ್‌ ರಿಜ್ವಾನ್‌ ಎಂಬುವವರ ಪಾನ್‌ಕಾರ್ಡ್‌, ಜಿಎಸ್‌ಟಿ ಐಡಿ, ಪಾಸ್‌ವರ್ಡ್‌ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ವ್ಯವಹಾರ ನಡೆಸಿ ಸರ್ಕಾರಕ್ಕೆ ವಂಚಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು: ಬ್ಯಾಂಕ್‌ ಅಧಿಕಾರಿ ಸೋಗಿನಲ್ಲಿ 4.89 ಲಕ್ಷ ರು. ವಂಚನೆ!

ಹಮೀದ್‌ ರಿಜ್ವಾನ್‌ ಅವರು 2011ರಲ್ಲಿ ‘ಎಆರ್‌ಎಸ್‌ ಎಂಟರ್‌ಪ್ರೈಸಸ್‌’ ಹೆಸರಿನ ಟಿನ್‌ ನಂಬರ್‌ ನೋಂದಾಯಿಸಿಕೊಂಡು 2013ರವರೆಗೆ ಮರದ ಪ್ಯಾಕಿಂಗ್‌ ಸಾಮಗ್ರಿಗಳ ತಯಾರಿಕೆ ಮತ್ತು ಮಾರಾಟದ ವ್ಯವಹಾರ ನಡೆಸುತ್ತಿದ್ದರು. ಬಳಿಕ ಕಂಪನಿಯನ್ನು ಸ್ಥಗಿತಗೊಳಿಸಿದ್ದರು. 2017ರಲ್ಲಿ ವ್ಯಾಟ್‌ನಿಂದ ಜಿಎಸ್‌ಟಿಗೆ ಮೈಗ್ರೇಟ್‌ ಆಗಿದ್ದು, ತಮ್ಮ ಪ್ಯಾನ್‌ ಕಾರ್ಡ್‌ ನೀಡಿ ಜಿಎಸ್‌ಟಿ ನಂಬರ್‌ ಪಡೆದುಕೊಂಡಿದ್ದರು.

ಈ ನಡುವೆ 2017-2018ರಲ್ಲಿ ಬೆಂಗಳೂರು ದಕ್ಷಿಣ ವಲಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರು, ಹಮೀದ್‌ ರಿಜ್ವಾನ್‌ ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 2017ರವರೆಗೆ ವ್ಯವಹಾರ ಮಾಡಿ ಜಿಎಸ್‌ಟಿ ಕಟ್ಟದಿರುವ ಬಗ್ಗೆ ಆಕ್ಷೇಪಿಸಿ ಹಮೀದ್‌ ವಿರುದ್ಧ ತೆರಿಗೆ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಂಡಿದ್ದರು. ಈ ವೇಳೆ ಹಮೀದ್‌ ಅವರು 2013ರ ಬಳಿಕ ನಾನು ಯಾವುದೇ ವ್ಯವಹಾರ ಮಾಡಿಲ್ಲ ಎಂದು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮತ್ತು ದಾಖಲೆಗಳನ್ನು ಸಲ್ಲಿಸಿದ್ದರು. ತಮ್ಮ ಪ್ಯಾನ್‌ ನಂಬರ್‌ ದುರ್ಬಳಕೆ ಮಾಡಿಕೊಂಡು ಹೊಸ ಜಿಎಸ್‌ಟಿ ನೋಂದಣಿ ಸಂಖ್ಯೆಯನ್ನು ಯಾರೋ ಅಪರಿಚಿತರು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ 2018ರಲ್ಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

Bengaluru crime: ₹99 ಸಾವಿರ ಕೋಟಿಗೆ ಸೂಪರ್‌ ಟ್ಯಾಕ್ಸ್‌ ಹೆಸರಲ್ಲಿ ಉದ್ಯಮಿಗೆ ₹40 ಲಕ್ಷ ಟೋಪಿ!

ಕೋಟ್ಯಂತರ ರು. ತೆರಿಗೆ ವಂಚನೆ

ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಸೈಬರ್‌ ಕ್ರೈಂ ಪೊಲೀಸರು, ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಹಿಂದೆ ಹಮೀದ್‌ ರಿಜ್ವಾನ್‌ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಆರೋಪಿಗಳ ಜತೆ ಸೇರಿ ಕಂಪನಿಗೆ ಸೇರಿದ ಜಿಎಸ್‌ಟಿ ನಂಬರ್‌, ಪ್ಯಾನ್‌ ಕಾರ್ಡ್‌ ದುರುಪಯೋಗ ಪಡಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದರು. ಹಮೀದ್‌ ರಿಜ್ವಾನ್‌ ಹೆಸರಿನಲ್ಲಿಯೇ ಬ್ಯಾಂಕ್‌ ಖಾತೆ ತೆರೆದು ವ್ಯವಹಾರ ನಡೆಸಿದ್ದಾರೆ. 2016-17ರಿಂದಲೂ ಸರ್ಕಾರಕ್ಕೆ ಕೋಟ್ಯಂತರ ರು. ಜಿಎಸ್‌ಟಿ ತೆರಿಗೆ ಪಾವತಿಸದೆ ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.