ಶೋ ರೂಮ್‌ಗಳೇ ಟಾರ್ಗೆಟ್: ದುಬಾರಿ ಬಟ್ಟೆ ಕದಿಯುತ್ತಿದ್ದ ಕುಖ್ಯಾತ ಕಳ್ಳನ ಬಂಧನ
ಶೋ ರೂಮ್‌ಗಳು, ಅಂಗಡಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗವಾರದ ಗೋವಿಂದಪುರ ಕ್ರಾಸ್ ಸೈಯದ್ ಮೊಹಮ್ಮದ್ ಫೈಜಲ್ ಅಲಿಯಾಸ್ ಅಂಡಾ(25) ಬಂಧಿತ.
ಬೆಂಗಳೂರು (ಜೂ.08): ಶೋ ರೂಮ್‌ಗಳು, ಅಂಗಡಿಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗವಾರದ ಗೋವಿಂದಪುರ ಕ್ರಾಸ್ ಸೈಯದ್ ಮೊಹಮ್ಮದ್ ಫೈಜಲ್ ಅಲಿಯಾಸ್ ಅಂಡಾ(25) ಬಂಧಿತ. ಆರೋಪಿಯಿಂದ ₹1,350 ನಗದು, ಬೆಲೆ ಬಾಳುವ ಉಡುಪುಗಳು, ಒಂದು ದ್ವಿಚಕ್ರ ವಾಹನ ಸೇರಿ ಒಟ್ಟು ₹1.35 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮೇ 27ರಂದು ದುಷ್ಕರ್ಮಿಗಳು ಇಂದಿರಾನಗರದ 100 ಅಡಿ ರಸ್ತೆಯ ‘ಅಂಡರ್ ಆರ್ಮರ್ ಷೋ ರೂಮ್’ನ ಗ್ಲಾಸ್ ಡೋರ್ ಲಾಕ್ ಮುರಿದು ಸುಮಾರು ₹3.25 ಲಕ್ಷ ಮೌಲ್ಯದ ಪ್ಯಾಟ್‌ಗಳು, ಟಿ ಶರ್ಟ್‌ಗಳು ಸೇರಿದಂತೆ ದುಬಾರಿ ವಸ್ತುಗಳ ಕಳ್ಳತನವಾಗಿತ್ತು.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಫೈಜಲ್ ವೃತ್ತಿಪರ ಕಳ್ಳನಾಗಿದ್ದಾನೆ. ಈತ ಜಯನಗರ, ಜೆ.ಬಿ.ನಗರ, ಕಬ್ಬನ್ ಪಾರ್ಕ್, ಗೋವಿಂದಪುರ ವೈಯಾಲಿ ಕಾವಲ್, ಹೈಗ್ರೌಂಡ್ಸ್, ಮೈಸೂರಿನ ದೇವರಾಜ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಷೋ ರೂಮ್‌ಗಳು, ದೊಡ್ಡ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಬೀಗಿ ಮುರಿದು ದುಬಾರಿ ವಸ್ತುಗಳು, ನಗದು ಸೇರಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಕದ್ದ ವಸ್ತುಗಳನ್ನು ಮಾರಾಟ ಮಾಡಿ ಹಣ ಪಡೆದು ಮೋಜು-ಮಸ್ತಿ ಮಾಡಿ ವ್ಯಯಿಸುತ್ತಾನೆ.
35 ಪ್ರಕರಣಗಳು ದಾಖಲು: ಈತನ ವಿರುದ್ಧ ಬೆಂಗಳೂರು ನಗರ ಮತ್ತು ಮೈಸೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 35ಕ್ಕೂ ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತನ್ನ ಕಳ್ಳತನ ಚಾಳಿ ಮುಂದುವರೆಸಿದ್ದ. ಮೇ 27ರಂದು ಇಂದಿರಾನಗರದ ನೂರಡಿ ರಸ್ತೆಯ ಬಟ್ಟೆ ಷೋ ರೂಮ್ ಬೀಗ ಮುರಿದು ಕಳ್ಳತನ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿಚಾರಣೆಯಿಂದ ಇಂದಿರಾನಗರ ಮೂರು, ಉಪ್ಪಾರಪೇಟೆ ಒಂದು ಹಾಗೂ ಜಯನಗರ ಒಂದು ಸೇರಿ ಒಟ್ಟು ಐದು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋತಿರುವ ಲೋಕಸಭೆ ರಿಸಲ್ಟ್ ಬಗ್ಗೆ ವರದಿ ಕೇಳಿದ ರಾಹುಲ್ ಗಾಂಧಿ
ಮೂರು ವರ್ಷದ ಹಿಂದೆ ಗುಂಡೇಟು: ಆರೋಪಿ ಸೈಯದ್ ಮೊಹಮ್ಮದ್ ಫೈಜಲ್ 2021ನೇ ಸಾಲಿನಲ್ಲಿ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಬಂದಿದ್ದಾಗ ಬಂಧಿಸಲು ಮುಂದಾಗಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಈ ವೇಳೆ ಅಂದಿನ ಜಯನಗರ ಠಾಣಾ ಇನ್‌ಸ್ಪೆಕ್ಟರ್ ಆಗಿದ್ದ ಎಚ್.ವಿ.ಸುದರ್ಶನ್ ಫೈಜಲ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಕಾಕತಾಳೀಯ ಎಂದರೆ, ಈಗ ಇಂದಿರಾನಗರ ಪೊಲೀಸ್ ಠಾಣೆಯ ಇನ್‌ಪೆಕ್ಟರ್ ಆಗಿರುವುದು ಅದೇ ಎಚ್.ವಿ.ಸುದರ್ಶನ್. ಈ ಪ್ರಕರಣದಲ್ಲಿಯೂ ಆರೋಪಿಯನ್ನು ಸುದರ್ಶನ್ ಕೈಗೆ ಸಿಕ್ಕಿಬಿದ್ದಿದ್ದಾನೆ.