ರಾಜ್ಯದಲ್ಲಿ ಸೋತಿರುವ ಲೋಕಸಭೆ ಸ್ಥಾನಗಳ ಬಗ್ಗೆ ಎಲ್ಲಾ ಸಚಿವರ ಮೇಲೆ ಹೊಣೆಗಾರಿಕೆ ಇರಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 

ಬೆಂಗಳೂರು (ಜೂ.08): ರಾಜ್ಯದಲ್ಲಿ ಸೋತಿರುವ ಲೋಕಸಭೆ ಸ್ಥಾನಗಳ ಬಗ್ಗೆ ಎಲ್ಲಾ ಸಚಿವರ ಮೇಲೆ ಹೊಣೆಗಾರಿಕೆ ಇರಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಜತೆಗೆ ಚುನಾವಣಾ ಫಲಿತಾಂಶದ ಬಗ್ಗೆ ವರದಿ ಕೇಳಿದ್ದು, ಎಲ್ಲಾ ನಾಯಕರ ಜತೆ ಚರ್ಚೆ ಮಾಡಿ ಸದ್ಯದಲ್ಲೇ ಹೈಕಮಾಂಡ್‌ಗೆ ವರದಿ ಸಲ್ಲಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಬೆಂಗಳೂರಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಚಿವರು ಹಾಗೂ ನೂತನ ಸಂಸದರು, ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಶಿವಕುಮಾರ್‌ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಫಲಿತಾಂಶದ ಬಗ್ಗೆ, ಸೋಲಿನ ಬಗ್ಗೆ ಎಲ್ಲ ಸಚಿವರ ಮೇಲೆ ಹೊಣೆಗಾರಿಕೆ ಇರಬೇಕು. ಎಲ್ಲೆಲ್ಲಿ ಲೋಪವಾಗಿದೆಯೋ ಸರಿಪಡಿಸಿಕೊಳ್ಳಬೇಕು. ಎಲ್ಲ ನಾಯಕರೊಂದಿಗೆ ಚರ್ಚಿಸಿ ಮುಂದಿನ ಕಾರ್ಯ ಯೋಜನೆ ರೂಪಿಸಲು ಸಲಹೆ ನೀಡಿದ್ದಾರೆ ಎಂದರು.

ಎಲ್ಲರ ಮೇಲೂ ಹೊಣೆಗಾರಿಕೆ ಇರಬೇಕು: ಕೆಲ ಸಚಿವರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಅವರು, ಸಚಿವರ ಕ್ಷೇತ್ರದಲ್ಲಿ ಚುನಾವಣೆ ಫಲಿತಾಂಶ ಏನಾಯಿತು ಎಂದು ಚರ್ಚೆ ಮಾಡಿದರು. ರಾಜ್ಯದಲ್ಲಿ ಇನ್ನೂ 5-6 ಸೀಟು ಗೆಲ್ಲುವ ನಿರೀಕ್ಷೆ ಇತ್ತು. ಎಲ್ಲೆಲ್ಲಿ ಹಿನ್ನಡೆಯಾಗಿದೆಯೋ ಅಲ್ಲಿ ಸರಿಪಡಿಸಿಕೊಳ್ಳಬೇಕು. ಮತ್ತೆ ಜನರ ಬಳಿಗೆ ಹೋಗಬೇಕು. ಎಲ್ಲರ ಮೇಲೂ ಹೊಣೆಗಾರಿಕೆ ಇರಬೇಕು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ ಎಂದು ಶಿವಕುಮಾರ್‌ ತಿಳಿಸಿದರು.

ಮಂತ್ರಿಗಿರಿಗಾಗಿ ಬಿಜೆಪಿ ಮೇಲೆ ಒತ್ತಡ ಹೇರಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಅಶ್ವತ್ಥನಾರಾಯಣ್‌ಗೆ ತಿರುಗೇಟು: ರಾಹುಲ್ ಗಾಂಧಿ ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯಲು ಬಂದಿದ್ದಾರಾ ಎಂಬ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಅವರ ಹೇಳಿಕೆಗೆ, ‘ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ನಿಗಮ ಮಂಡಳಿಗಳಲ್ಲಿ ಹಣ ದುರುಪಯೋಗ ಪ್ರಕರಣ ಈ ಹಿಂದೆಯೂ ಆಗಿದೆ. ಈಗ ಆತ್ಮಹತ್ಯೆಯಿಂದಾಗಿ ಪ್ರಕರಣ ಈಚೆ ಬಂದಿದೆ. ಬಿಜೆಪಿ ಅವಧಿಯಲ್ಲಿನ ಪ್ರಕರಣಗಳು ಇವೆ. ಸಚಿವರು ಈಗಾಗಲೇ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ’ ಎಂದು ತಿರುಗೇಟು ನೀಡಿದರು.