Terror suspect arrested in Bengaluru: ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನೊಬ್ಬನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕಾಶ್ಮೀರದಿಂದ ಪರಾರಿಯಾಗಿ ಬೆಂಗಳೂರಲ್ಲಿ ಹೆಸರು ಬದಲಾಯಿಸಿಕೊಂಡು ತಂಗಿದ್ದ ಎನ್ನಲಾಗಿದೆ.
ಬೆಂಗಳೂರು: ಬೆಂಗಳೂರಲ್ಲಿ ಕಳೆದ ಕೆಲ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ಕಾಶ್ಮೀರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಂಕಿತ ಉಗ್ರ ತಾಲಿಬ್ ಹುಸೇನ್ ಕಾಶ್ಮೀರದಿಂದ ಕೆಲ ವರ್ಷಗಳ ಹಿಂದೆ ಪರಾರಿಯಾಗಿದ್ದ. ಅಲ್ಲಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ತಾಲಿಬ್ ಹೆಸರು ಬದಲಿಸಿಕೊಂಡು ಕೆಲಸ ಮಾಡುತ್ತಿದ್ದ. ಮೊದಮೊದಲು ರೈಲ್ವೇ ನಿಲ್ದಾಣದಲ್ಲಿ ಕೂಲಿ ಮಾಡುತ್ತಿದ್ದ ಎನ್ನಲಾಗಿದೆ. ಅದಾದ ನಂತರ ಮಸೀದಿಯೊಂದರಲ್ಲಿ ವಾಸವಿದ್ದ, ಅಲ್ಲೇ ಪಾಠ - ಪ್ರವಚನವನ್ನೂ ಮಾಡುತ್ತಿದ್ದ ಎಂದು ಶಂಕಿಸಲಾಗಿದೆ.
ಕಾಶ್ಮೀರ ಪೊಲೀಸರಿಗೆ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಅದಾದ ನಂತರ ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ಆತನನ್ನು ಪತ್ತೆಹಚ್ಚಲಾಗಿದೆ. ತಾಲಿಬ್ ಹುಸೇನ್ 38 ವರ್ಷದವನಾಗಿದ್ದು, ಪತ್ನಿ ಮತ್ತು ಮೂರು ಮಕ್ಕಳ ಜತೆಗೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ಬೆಂಗಳೂರಿನಲ್ಲಿ ತನ್ನ ಹೆಸರು ತಾಲಿಕ್ ಎಂದು ಹೇಳಿಕೊಂಡಿದ್ದ.
ಇದನ್ನೂ ಓದಿ: Central Jail Expose: ಶಂಕಿತ ಉಗ್ರನಿಗೆ ಜೈಲಲ್ಲಿ ರಾಜಾತಿಥ್ಯ, ಜೈಲಲ್ಲೇ ತಯಾರಾಗುತ್ತೆ ಚಿಕನ್, ಕಬಾಬ್.!
ಮಸೀದಿ ಮುಖ್ಯಸ್ಥನಿಂದ ಆಶ್ರಯ:
ಓಕಳಿಪುರಂ ಮಸೀದ ಮುಖ್ಯಸ್ಥ ಅನ್ವರ್ ಪಾಷಾ ಶಂಕಿತ ಉಗ್ರ ತಾಲಿಬ್‌ಗೆ ಆಶ್ರಯ ನೀಡಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಆದರೆ ಶಂಕಿತ ಉಗ್ರ ಎಂಬ ವಿಚಾರ ಅವರಿಗೆ ತಿಳಿದಿತ್ತಾ ಎಂಬುದು ತನಿಖೆಯ ನಂತರವೇ ತಿಳಿಯಬೇಕಿದೆ. ಆದರೆ ಮನೆಯ ಮಾಲೀಕ ಅನ್ವರ್ ಮಾವಾಡ್ ಏಷಿಯಾನೆಟ್ ನ್ಯೂಸ್ ಜತೆ ಮಾತನಾಡಿದ್ದು, ಆಧಾರ್ ಕಾರ್ಡ್ ಕೂಡ ಆತನ ಬಳಿಯಿತ್ತು, ಆ ಕಾರಣಕ್ಕಾಗಿ ಮನೆ ನೀಡಲಾಗಿತ್ತು. ಆತ ಉಗ್ರ ಸಂಘಟನೆಯು ಜೊತೆ ಗುರುತಿಸಿಕೊಂಡಿರುವ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ಬಂಧಿಸಿದ ನಂತರ ಬಾಡಿ ವಾರೆಂಟ್ ಪಡೆದು ತಾಲಿಬ್‌ನನ್ನು ಪೊಲೀಸರು ಕಾಶ್ಮೀರಕ್ಕೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ತಮಿಳ್ನಾಡಲ್ಲಿ ಶಂಕಿತ ಐಸಿಸ್ ಉಗ್ರ ಮಹಮ್ಮದ್ ಬಂಧನ!
ಹಿಜ್ಬುಲ್ ಮುಜಾಹಿದ್ದೀನ್ ಲಿಂಕ್:
ಶಂಕಿತ ಉಗ್ರ ತಾಲಿಬ್ ಹುಸೇನ್ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಜತೆ ನಂಟಿದೆ ಎನ್ನಲಾಗುತ್ತಿದೆ. ಹಿಜ್ಬುಲ್ ಮುಜಾಹಿದ್ದೀನ್ ತಾಲಿಬ್‌ಗೆ ಸಂಪೂರ್ಣ ತರಬೇತಿ ನೀಡಿದೆ. ತಾಲಿಬ್ ಹಲವು ವರ್ಷಗಳಿಂದ ಹಿಜ್ಬುಲ್ ಸಂಘಟನೆ ಜತೆ ನಿಕಟ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಜತೆಗೆ ಹಲವಾರು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 2014 ಚೆನ್ನೈ ಬ್ಲಾಸ್ಟ್ ಪ್ರಮುಖ ಆರೋಪಿ ಬಂಧನ, ಅಲ್-ಉಮಾ ಜತೆ ನಂಟು
ಎರಡು ಮದುವೆ ಮಾಡಿಕೊಂಡಿದ್ದ ತಾಲಿಬ್:
ಶಂಕಿತ ಉಗ್ರ ತಾಲಿಬ್ ಹುಸೇನ್ ಜಮ್ಮು ಕಾಶ್ಮೀರದಲ್ಲಿ ಒಂದು ಮದುವೆಯಾಗಿದ್ದ, ನಂತರ ಬೆಂಗಳೂರಿನಲ್ಲಿ ಇನ್ನೊಂದು ಮದುವೆಯಾಗಿದ್ದ. ಜಮ್ಮುವಿನಲ್ಲಿ ಮದುವೆಯಾಗಿದ್ದ ಪತ್ನಿ ಮೃತಪಟ್ಟಿದ್ದಳು, ನಂತರ ಇಲ್ಲಿ ಮದುವೆಯಾಗಿ ಎರಡು ಮಕ್ಕಳು ಪಡೆದಿದ್ದ. ಇಲ್ಲಿನ ಹೆಸರಿನಲ್ಲಿ ಆಧಾರ್ ಕಾರ್ಡ್ ಹೊಂದಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ. ಓಕಳಿಪುರಂ ಮಸೀದಿಗೆ ಹೊಂದಿಕೊಂಡ ಮನೆಯಲ್ಲಿ ಕಳೆದ ಒಂಭತ್ತು ತಿಂಗಳಿಂದ ವಾಸವಾಗಿದ್ದ. ರೈಲ್ವೇನಲ್ಲಿ ಗೂಡ್ಸ್ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮಾಡುತ್ತಿದ್ದ. ಲಾಕ್‌ಡೌನ್ ವೇಳೆ ಎಲ್ಲರಂತೆ ಕೆಲಸವಿಲ್ಲದೇ ತಾಲಿಬ್ ಒದ್ದಾಡಿದ್ದ. ಅದಾದ ನಂತರವೇ ಕರುಣೆಯ ಮೇಲೆ ಮನೆ ನೀಡಿದ್ದರು.
