ಹೈದರಾಬಾದ್ - ಬೆಂಗಳೂರು ಹೆದ್ದಾರಿಯಲ್ಲಿ ವೋಲ್ವೋ ಬಸ್‌ಗೆ ಬೆಂಕಿ: ಸುಟ್ಟು ಕರಕಲಾದ ಮಹಿಳೆ, ನಾಲ್ವರಿಗೆ ಗಂಭೀರ ಗಾಯ
ಜೋಗುಲಾಂಬ ಗದ್ವಾಲ್ ಜಿಲ್ಲೆಯ ಬೀಚುಪಲ್ಲಿಯಲ್ಲಿ ಇಂದು ಮುಂಜಾನೆ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಒಬ್ಬರು ಮೃತಪಟ್ಟಿದ್ದಾರೆ ಎಂದು ಇಟಿಕ್ಯಾಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಶೋಕ್ ತಿಳಿಸಿದ್ದಾರೆ. ಅಲ್ಲದೆ, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹೈದರಾಬಾದ್ (ಜನವರಿ 13, 2024): ತೆಲಂಗಾಣ ರಾಜಧಾನಿ ಹೈದರಾಬಾದ್‌ನಿಂದ ಆಂಧ್ರಪ್ರದೇಶದ ಚಿತ್ತೂರಿಗೆ ತೆರಳುತ್ತಿದ್ದ ವೋಲ್ವೋ ಬಸ್‌ಗೆ ಬೆಂಕಿ ತಗುಲಿದ್ದು, ಮಹಿಳೆಯೊಬ್ಬರು ಸುಟ್ಟು ಕರಕಲಾದ ಘಟನೆ ನಡೆದಿದೆ. ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯಲ್ಲಿ ವೋಲ್ವೋ ಬಸ್‌ಗೆ ಬೆಂಕಿ ತಗುಲಿ ಈ ಅವಘಡ ನಡೆದಿದೆ.
ಅಲ್ಲದೆ, ಈ ಅವಘಡದಲ್ಲಿ ಗಾಯಗೊಂಡಿರುವ ಇತರ ನಾಲ್ವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟಾರೆಯಾಗಿ, 30 ಪ್ರಯಾಣಿಕರು ಬಸ್‌ನಲ್ಲಿದ್ದರು ಮತ್ತು ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಮಗನ ಮುಖದಿಂದ ಗಂಡನ ನೆನಪಾಗ್ತಿದ್ದಕ್ಕೆ ಹತ್ಯೆ ಮಾಡಿದ್ರಾ ಬೆಂಗಳೂರು ಸ್ಟಾರ್ಟಪ್ ಕಂಪನಿಯ ಸಿಇಒ?
ಘಟನೆಯ ವಿವರ..
ಹೈದರಾಬಾದ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರ್ರವಳ್ಳಿ ಅಡ್ಡರಸ್ತೆಯಲ್ಲಿ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ.ಹೈದರಾಬಾದ್‌ನಿಂದ ತೆರಳುತ್ತಿದ್ದ ಖಾಸಗಿ ಒಡೆತನದ ವೋಲ್ವೋ ಬಸ್ ಪಲ್ಟಿಯಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಹೆಚ್ಚಿನ ಪ್ರಯಾಣಿಕರು ಗಾಜುಗಳನ್ನು ಒಡೆದು ವಾಹನದಿಂದ ಜಿಗಿದು ಬಸ್‌ನಿಂದ ಪಾರಾಗಿದ್ದಾರೆ. ಆದರೆ ಮಹಿಳೆಯೊಬ್ಬರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸುಟ್ಟು ಕರಕಲಾಗಿದ್ದಾರೆ.
ಜೋಗುಲಾಂಬ ಗದ್ವಾಲ್ ಜಿಲ್ಲೆಯ ಬೀಚುಪಲ್ಲಿಯಲ್ಲಿ ಇಂದು ಮುಂಜಾನೆ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಒಬ್ಬರು ಮೃತಪಟ್ಟಿದ್ದಾರೆ ಎಂದು ಇಟಿಕ್ಯಾಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಶೋಕ್ ತಿಳಿಸಿದ್ದಾರೆ. ಅಲ್ಲದೆ, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ ಪ್ರಯಾಣಿಕರಲ್ಲಿ ಮೂವರನ್ನು ಗದ್ವಾಲ್‌ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮತ್ತೊಬ್ಬರು ಪ್ರಯಾಣಿಕರನ್ನು ಹೈದರಾಬಾದ್‌ಗೆ ಕರೆದೊಯ್ಯಲಾಯಿತು.
ಗೋವಾದಲ್ಲಿ ಮಗನನ್ನು ಕೊಂದು ಬೆಂಗಳೂರಿಗೆ ಪರಾರಿಯಾಗ್ತಿದ್ದ ತಾಯಿ: ಸುಚನಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದೀಗೆ ನೋಡಿ..
ಮಾಹಿತಿ ಮೇರೆಗೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಮೂಲಕ ಬೆಂಕಿ ನಂದಿಸಿದ್ದಾರೆ. ಆದರೆ ಬೆಂಕಿಯಿಂದ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾಲಕ ನಿದ್ರೆಗೆ ಜಾರಿದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.