ತಮಿಳುನಾಡು ಬಿಎಸ್‌ಪಿ ಅಧ್ಯಕ್ಷನ ಬರ್ಬರ ಹತ್ಯೆ: ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು
ಶುಕ್ರವಾರ ತಡರಾತ್ರಿ ಪೆರಂಬೂರ್ ಬಳಿಯ ಸೆಂಬಿಯಂನಲ್ಲಿ ಜನನಿಬಿಡ ಪ್ರದೇಶದಲ್ಲಿ ತಮಿಳುನಾಡು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು 6 ಮಂದಿಯ ತಂಡವು ಕಡಿದು ಹತ್ಯೆ ಮಾಡಿದೆ.
ಚೆನ್ನೈ: ಶುಕ್ರವಾರ ತಡರಾತ್ರಿ ಪೆರಂಬೂರ್ ಬಳಿಯ ಸೆಂಬಿಯಂನಲ್ಲಿ ಜನನಿಬಿಡ ಪ್ರದೇಶದಲ್ಲಿ ತಮಿಳುನಾಡು ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು 6 ಮಂದಿಯ ತಂಡವು ಕಡಿದು ಹತ್ಯೆ ಮಾಡಿದೆ. ಸ್ನೇಹಿತರ ಜತೆ ಹರಟೆ ಹೊಡೆಯುತ್ತ ನಿಂತಿದ್ದ ಅವರನ್ನು ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಮೂರು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಕುಡುಗೋಲುಗಳಿಂದ ಕಡಿದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಳಿಗೆ ಬೆಚ್ಚಿದ ಸ್ನೇಹಿತರು ಕೂಡ ಪರಾರಿ ಆಗಿದ್ದಾರೆ. ದಾಳಿಕೋರರ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.
ಘಟನೆಯನ್ನು ಬಿಎಸ್‌ಪಿ ನಾಯಕಿ ಮಾಯಾವತಿ ಖಂಡಿಸಿದ್ದಾರೆ. ಚೆನ್ನೈನ ಪೆರಂಬೂರ್ ಪ್ರದೇಶದ ಅವರ ನಿವಾಸದ ಸಮೀಪವೇ ಈ ಕೊಲೆ ನಡೆದಿದೆ ಎಂದು ವರದಿ ಆಗಿದೆ. ಹಲ್ಲೆಯ ನಂತರ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆದರೆ ಅಲ್ಲಿ ವೈದ್ಯರು ಇವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ತಿಳಿದು ಬಂದಿದೆ.
ಚೆನ್ನೈ ಐಫೋನ್ ಫ್ಯಾಕ್ಟ್ರಿಯಲ್ಲಿ ಮದುವೆಯಾದವರಿಗೆ ಕೆಲಸವಿಲ್ಲ..!
ಆರ್ಮ್ ಸ್ಟ್ರಾಂಗ್ ಅವರು ಈ ಹಿಂದೆ ಚೆನ್ನೈ ಕಾರ್ಪೋರೇಷನ್‌ನ ಕೌನ್ಸಿಲರ್ ಆಗಿದ್ದರು. ಪೆರಂಬೂರ್ ಬಳಿ ತಾವು ಕಟ್ಟಿಸುತ್ತಿದ್ದ ಹೊಸ ಕಟ್ಟಡದ ಪರಿಶೀಲನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ. ದಾಳಿಕೋರರಲ್ಲಿ ನಾಲ್ವರು ಪುಡ್ ಡೆಲಿವರಿ ಬಾಯ್‌ಗಳ ವೇಷದಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಆರ್ಮ್‌ಸ್ಟ್ರಾಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಕೊಲೆಯಾದ 52 ವರ್ಷದ ಆರ್ಮ್‌ಸ್ಟ್ರಾಂಗ್ ವಕೀಲಿಕೆಗೆ ಪ್ರಸಿದ್ಧರಾಗಿದ್ದರು. ಉತ್ತರ ಚೆನ್ನೈನಲ್ಲಿ ಬಡ ಜನರಿಗೆ ಸಹಾಯ ಮಾಡುವ ಮೂಲಕ ಜನಾನುರಾಗಿಯಾಗಿದ್ದರು. ಈಗ ಬಂದ ಮಾಹಿತಿಯಂತೆ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ನೀಟ್ ರದ್ದು ಮಾಡಿ 12ನೇ ತರಗತಿ ಅಂಕ ಆಧರಿಸಿ ವೈದ್ಯ ಸೀಟು ಕೊಡಿ: ತಮಿಳುನಾಡು ಸರ್ಕಾರಕ್ಕೆ ಆಯೋಗದ ವರದಿ