Belagavi 19 Year old Girl Death: ಕಾಲ್‌ ಸೆಂಟರ್‌ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ಗುರುವಾರ ನಡೆದಿತ್ತು. ಅಪರಿಚಿತ ಯುವಕನೊಬ್ಬ ತಬಸ್ಸುಮ್‌ಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಎನ್ನಲಾಗಿತ್ತು. ಆದರೆ ಈ  ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.  

ಬೆಳಗಾವಿ(ಅ. 14): ಕಾಲ್‌ ಸೆಂಟರ್‌ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ (Belagavi) ಗುರುವಾರ ನಡೆದಿತ್ತು. ಅಪರಿಚಿತ ಯುವಕನೊಬ್ಬ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಎನ್ನಲಾಗಿತ್ತು. ಆದರೆ ಈ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಅಪರಿಚಿತ ಅಲ್ಲ ಬದಲಿಗೆ ಆಕೆಯ ಸ್ನೇಹಿತ ಎಂದು ತಿಳಿದುಬಂದಿದೆ. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ತಬಸ್ಸುಮ್‌ ಇರ್ಷಾದ್‌ ಅಹ್ಮದ ಸವದತ್ತಿ (19) ಮೃತ ಯುವತಿ. ಯುವತಿಯನ್ನು ಅತ್ಯಾಚಾರ ಮಾಡಿ ಬಳಿಕ ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಂಗಳೂರಿನ ಕಾಲ್‌ ಸೆಂಟರ್‌ವೊಂದರಲ್ಲಿ ತಬಸ್ಸುಮ್‌ ಕೆಲಸ ಮಾಡುತ್ತಿದ್ದಳು. ಯುವತಿ ತಂದೆ ಇರ್ಷಾದ ಅಹ್ಮದ ಆಟೋ ಚಾಲಕರಾಗಿದ್ದಾರೆ. ಒಂದು ತಿಂಗಳ ಹಿಂದೆ ಯುವತಿಯು ಬೆಂಗಳೂರಿನ ಕಾಲ್‌ ಸೆಂಟರ್‌ ಕೆಲಸಕ್ಕೆ ಸೇರಿದ್ದಳು. ತಲೆಗೆ ಬಿದ್ದ ಗಾಯಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಯುವತಿ ಮೃತಪಟ್ಟಿದ್ದಾಳೆ. ಗಗನಸಖಿ ಆಗುವ ಕನಸು ಹೊತ್ತಿದ್ದ 19 ವರ್ಷದ ಯುವತಿಯ ದಾರುಣ ಅಂತ್ಯವಾಗಿದೆ. ಸದ್ಯ ಗೋವಾಗೆ ತೆರಳಿ ತಬಸ್ಸುಮ್ ಸ್ನೇಹಿತನ ವಶಕ್ಕೆ ಪಡೆದು ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ. 

ಅಕ್ಟೋಬರ್ 6ರಂದು ಕೆಲಸಕ್ಕೆ ರಾಜೀನಾಮೆ ನೀಡಿದ್ದ ಯುವತಿ ಅಕ್ಟೋಬರ್ 7ರಂದು ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ‌ನ ಭೇಟಿಗೆ ತೆರಳಿದ್ದಳು. ಅನಾರೋಗ್ಯ ಹಿನ್ನೆಲೆ ಯುವತಿ ಗೋವಾದ ಆಸ್ಪತ್ರೆಯಲ್ಲಿ ಚೆಕ್‌ಅಪ್ ಮಾಡಿಸಿಕೊಂಡಿದ್ದಳು. ಬಳಿಕ ಆಕೆಯ ಸ್ನೇಹಿತ ಯುವತಿಯನ್ನು ಬೆಂಗಳೂರಿಗೆ ಕಳಿಸಲು ನಿರ್ಧರಿಸಿದ್ದ. 

ಚಿಕ್ಕಮಗಳೂರು : ಸಂಭ್ರಮದ ಮನೆಯಲ್ಲಿ ಸೂತ: ಸ್ವಚ್ಛತೆ ವೇಳೆ ವಿದ್ಯುತ್ ಸ್ಪರ್ಶಿಸಿ ಗರ್ಭಿಣಿ ದಾರುಣ ಸಾವು

ಯುವತಿ ತಲೆಗೆ ಬಲವಾದ ಗಾಯ: ಅಕ್ಟೋಬರ್ 9ರಂದು ಪಣಜಿ ಬಸ್ ನಿಲ್ದಾಣದಲ್ಲಿ ಹೇಗೋ ಬಿದ್ದು ಯುವತಿ ತಲೆಗೆ ಬಲವಾದ ಗಾಯವಾಗಿತ್ತು ಎನ್ನಲಾಗಿದೆ. ಬಳಿಕ ಪಣಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಯುವತಿ ಪಡೆದಿದ್ದಳು. ಅಲ್ಲಿ ಚಿಕಿತ್ಸೆ ಪಡೆದು ಅಕ್ಟೋಬರ್ 11ರಂದು ಯುವತಿ ಹಾಗೂ ಆಕೆಯ ಸ್ನೇಹಿತ ಬೆಂಗಳೂರಿಗೆ ಬಂದಿದ್ದರು. ಅಕ್ಟೋಬರ್ 11ರಂದು ಬೆಂಗಳೂರಿಗೆ ಬಂದು ಯುವತಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಳು. 

ಅಕ್ಟೋಬರ್ 11ರ ರಾತ್ರಿ ಬೆಂಗಳೂರಿಂದ ಬೆಳಗಾವಿಗೆ ಯುವತಿಯನ್ನು ಸ್ನೇಹಿತ ಕರೆದುಕೊಂಡು ಬಂದಿದ್ದ. ಬೆಳಗಾವಿಗೆ ಬಂದು ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ. ಎಂಎಲ್‌ಸಿ ಮಾಡುತ್ತೇವೆ ಎನ್ನುತ್ತಿದ್ದಂತೆಯೇ ಆತ ಯುವತಿಯ ಮೊಬೈಲ್‌ನೊಂದಿಗೆ ಪರಾರಿಯಾದ. ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ ವೇಳೆ ಯುವತಿ ನಿತ್ರಾಣ ಸ್ಥಿತಿಯಲ್ಲಿದ್ದಳು. ಆಕೆಯ ತಲೆಯ ಹಿಂಬದಿಗೆ ಗಾಯದ ಗುರುತು ಪತ್ತೆಯಾಗಿತ್ತು. ಮೈಯಲ್ಲಿ ಸಿಗರೇಟ್‌ನಿಂದ ಸುಟ್ಟಿದ್ದ ಗಾಯವಿತ್ತು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಕೆ ಕೊನೆಯುಸಿರೆಳೆದಳು. ಆಸ್ಪತ್ರೆ ಎದುರು ಯುವತಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಯಿ ನಂಬರ್‌ಗೆ ವಾಟ್ಸಪ್‌ ಮೆಸೇಜ್‌: ಬುಧವಾರ ರಾತ್ರಿ ತಬಸ್ಸುಮ್‌ ಮೊಬೈಲ್‌ನಿಂದ ತಾಯಿ ನಂಬರ್‌ಗೆ ವಾಟ್ಸಪ್‌ ಮೆಸೇಜ್‌ ಬಂದಿದ್ದು, ಅವರು ಹುಷಾರಾಗಿದ್ದಾರಾ? ಬಸ್ಸಿನಿಂದ ಇಳಿಯಬೇಕಾದರೆ ಆಕೆಯ ಮೊಬೈಲ್‌ ಒಡೆದು ಹೋಗಿತ್ತು. ಸಿಮ್‌ ನನ್ನ ಮೊಬೈಲ್‌ನಲ್ಲಿ ಹಾಕಿ ಮೆಸೇಜ್‌ ಮಾಡುತ್ತಿದ್ದೇನೆ. ಅವಳ ಮೊಬೈಲ್‌ ಚಿಕ್ಕ ಬ್ಯಾಗ್‌ನಲ್ಲಿದೆ. ಅವಳ ಸಿಮ್‌ ಮುರಿದು ಹಾಕಿದ್ದೇನೆ. ಬೇರೆ ಸಿಮ್‌ ತೆಗೆದುಕೊಳ್ಳಿ. ನನಗೆ ತೊಂದರೆ ಕೊಡಬೇಡಿ ಎಂದು ವಾಟ್ಸಪ್‌ ಮೇಸೆಜ್‌ ಮಾಡಿದ್ದಾನೆ.

ಚಲಿಸುತ್ತಿದ್ದ ರೈಲಿನ ಕೆಳಗೆ ತಳ್ಳಿದ ಭಗ್ನಪ್ರೇಮಿ: ಕಾಲೇಜು ವಿದ್ಯಾರ್ಥಿನಿ ಸಾವು

ತಬಸ್ಸುಮ್‌ ಅಕ್ಟೋಬರ್‌ 11 ರಂದು ತಾಯಿ ಶಾಬೀರಾ ಬಾನುಗೆ ಪೋನ್‌ ಮಾಡಿದ್ದಳು. ಬೆಂಗಳೂರಿನಿಂದ ಬೆಳಗಾವಿಗೆ ಬರುವುದಾಗಿ ತಿಳಿಸಿದ್ದಳು. ಈ ವೇಳೆ ತನ್ನ ಸೆಲ್ಫಿ ಪೋಟೋವನ್ನು ಕಳಿಸಿದ್ದಳು. ಈ ವೇಳೆ ಮುಖಕ್ಕೆ ಗಾಯವಾಗಿ ಊದಿಕೊಂಡಿತ್ತು. ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು ಈ ಕುರಿತು ತನಿಖೆ ಮಾಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.