ಫ್ರಾನ್ಸ್‌ನ ಯುವಕರನ್ನು ಸಂಘಟನೆಗೆ ಸೆಳೆಯಲು ಆರೀಫ್‌ನನ್ನು ಬಳಸಿಕೊಂಡಿದ್ದ ಸಂಘಟನೆಗಳು, ಫ್ರೆಂಚ್‌ ಸೇರಿ 4 ಭಾಷೆಗಳಲ್ಲಿ ಪಾರಂಗತನಾಗಿದ್ದ ಆರೀಫ್‌. 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಫೆ.19): ಇತ್ತೀಚೆಗೆ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಬಲೆಗೆ ಬಿದ್ದ ಉತ್ತರಪ್ರದೇಶ ಮೂಲದ ಶಂಕಿತ ಉಗ್ರ ಮಹಮ್ಮದ್‌ ಆರೀಫ್‌ ಪ್ರಪಂಚದ ಅತ್ಯಂತ ರಕ್ತಪಿಪಾಸು ಭಯೋತ್ಪಾದಕ ಸಂಘಟನೆಗಳಾದ ಅಲ್‌ಖೈದಾ, ಇಸ್ಲಾಮಿಕ್‌ ಸ್ಟೇಟ್ಸ್‌ (ಐಸಿಸ್‌)ಗಳಿಗೆ ಫ್ರೆಂಚ್‌ ಭಾಷಾಂತರಕಾರನಾಗಿ ದುಡಿಯುತ್ತಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ. ಉಗ್ರ ಸಂಘಟನೆಯ ಹ್ಯಾಂಡ್ಲರ್‌ಗಳು ವಾಟ್ಸಾಪ್‌, ಫೇಸ್‌ಬುಕ್‌, ಟ್ವೀಟರ್‌, ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಜಿಹಾದ್‌’ ಪ್ರಚುರಪಡಿಸಿ ಮುಸ್ಲಿಂ ಯುವಕರನ್ನು ತಮ್ಮ ಸಂಘಟನೆಗಳಿಗೆ ಸೆಳೆಯತ್ತಿದ್ದರು. ಹೀಗೆ ತಮ್ಮ ತೆಕ್ಕೆಗೆ ಬಂದಿದ್ದ ಆರೀಫ್‌ ಇಂಗ್ಲೀಷ್‌, ಹಿಂದಿ, ಉರ್ದು ಹಾಗೂ ಫ್ರೆಂಚ್‌ ಭಾಷೆಗಳನ್ನು ಅರಿತಿದ್ದ ಕಾರಣ ಆತನನ್ನು ಜಿಹಾದಿ ಪ್ರಚಾರಕ್ಕೆ ಬಳಸಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಫ್ರಾನ್ಸ್‌ ಮೇಲೆ ಗಮನ:

ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಅಲ್‌ಖೈದಾಗಿಂತ ಐಸಿಸ್‌ ಜಾಲ ವಿಸ್ತಾರವಾಗಿದೆ. ಕೆಲ ವರ್ಷಗಳಿಂದ ನಿರಂತರವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಆ ದೇಶಕ್ಕೆ ತಲೆ ನೋವು ತಂದಿದೆ. ಹೀಗಾಗಿ ಅಲ್ಲಿನ ಮುಸ್ಲಿಂ ಯುವಕರ ತಲೆಗೆ ಸ್ಥಳೀಯ ಭಾಷೆಯಾದ ಫ್ರೆಂಚ್‌ ಮೂಲಕವೇ ಇಸ್ಲಾಂ ಮೂಲಭೂತವಾದವನ್ನು ತುಂಬಲು ಐಸಿಸ್‌ ಹ್ಯಾಂಡ್ಲರ್‌ಗಳು ಸಕ್ರಿಯವಾಗಿದ್ದಾರೆ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ತಮ್ಮ ಸಂಘಟನೆಗೆ ಗುಪ್ತವಾಗಿ ಕೆಲಸ ಮಾಡುವ ಬಹುಭಾಷಾ ಪರಿಣತರನ್ನು ಐಸಿಸ್‌ ಬಳಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಮಂಗ್ಳೂರು, ಶಿವಮೊಗ್ಗ ಸ್ಫೋಟ: ಮತ್ತೊಬ್ಬ ಸೆರೆ

ಅನುವಾದಕನ ಕೆಲಸ:

ಉತ್ತರಪ್ರದೇಶದ, ಡಿಪ್ಲೊಮಾ ಓದಿದ್ದ ಮಹಮ್ಮದ್‌ ಆರೀಫ್‌, ಆರು ತಿಂಗಳಿಂದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಕೆಲ ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಆತನನ್ನು ಅಲ್‌ಖೈದಾ ಸಂಘಟನೆ ಸೆಳೆದಿತ್ತು. ಬಳಿಕ ಐಸಿಸ್‌ ಸಂಘಟನೆ ಜತೆ ಕೂಡ ಆತ ನಂಟು ಹೊಂದಿದ್ದ. ಆನ್‌ಲೈನ್‌ ಮಾತುಕತೆಯಲ್ಲಿ ತನಗೆ ಫ್ರೆಂಚ್‌ ಭಾಷೆ ಬರುತ್ತದೆ ಎಂದಿದ್ದ. ಆಗ ಆತನಿಗೆ ಫ್ರೆಂಚ್‌ ಭಾಷೆಯಲ್ಲೇ ಕೆಲವು ದಾಖಲೆಗಳ ತರ್ಜುಮೆ ಕೆಲಸವನ್ನು ಉಗ್ರರು ವಹಿಸಿದ್ದರು ಎಂದು ತಿಳಿದು ಬಂದಿದೆ.

ದಾಖಲೆ ವಶ:

ಬೆಂಗಳೂರಿನ ಥಣಿಸಂದ್ರದ ಆರೀಫ್‌ ಮನೆ ಮೇಲೆ ಎನ್‌ಐಎ ನಡೆಸಿದ ದಾಳಿ ವೇಳೆ ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌, ನೋಟ್‌ ಬುಕ್ಸ್‌ ಹಾಗೂ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಆ ಪೆನ್‌ಡ್ರೈವ್‌ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಫ್ರೆಂಚ್‌ ಭಾಷೆಯ ಕೆಲವು ದಾಖಲೆಗಳಿವೆ. ಇವುಗಳನ್ನು ಎಫ್‌ಎಸ್‌ಎಲ್‌ (ವಿಧಿ ವಿಜ್ಞಾನ ಪ್ರಯೋಗಾಲಯ)ಗೆ ಕಳುಹಿಸಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತೆ ಸ್ಯಾಟಲೈಟ್‌ ಫೋನ್‌ ಸದ್ದು: ಕರ್ನಾಟಕ-ಕೇರಳ ಗಡಿಯಲ್ಲಿ ಸಿಗ್ನಲ್‌ ಪತ್ತೆ

6 ತಿಂಗಳಿನಿಂದ ನಿಗಾ:

2022ರ ಜುಲೈನಲ್ಲಿ ಅಲ್‌ಖೈದಾ ಸೇರಲು ಸಜ್ಜಾಗಿದ್ದಾಗ ಬೆಂಗಳೂರಿನ ತಿಲಕನಗರದಲ್ಲಿ ಅಸ್ಸಾಂ ಮೂಲದ ಅಖ್ತರ್‌ ಹುಸೇನ್‌ ಲಷ್ಕರ್‌ ಹಾಗೂ ತಮಿಳುನಾಡಿನ ಸೇಲಂನಲ್ಲಿ ಪಶ್ಚಿಮ ಬಂಗಾಳದ ಅಬ್ದುಲ್‌ ಮಂಡಲ್‌ ಅಲಿಯಾಸ್‌ ಜೂಬಾನನ್ನು ಬಂಧಿಸಲಾಗಿತ್ತು. ಆಗ ತನಿಖೆ ವೇಳೆ ಈ ಇಬ್ಬರು ಶಂಕಿತ ಉಗ್ರರ ಸಂಪರ್ಕದಲ್ಲಿದ್ದ ಆರೀಫ್‌ ಹೆಸರು ಕೇಳಿ ಬಂದಿತ್ತು. ಈ ಸುಳಿವು ಬೆನ್ನತ್ತಿದ್ದಾಗ ಜಮ್ಮು-ಕಾಶ್ಮೀರ ಗಡಿ ದಾಟಿ ಅಷ್ಘಾನಿಸ್ತಾನ ಪ್ರವೇಶಿಸಿ ಅಲ್‌ಖೈದಾ ಸೇರಲು ಅಣಿಯಾಗಿದ್ದ ಆರೀಫ್‌ ಸಿಕ್ಕಿಬಿದ್ದ. ಆರು ತಿಂಗಳಿಂದ ಆತನ ಮೇಲೆ ನಿಗಾ ವಹಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಗುಪ್ತ ಹೆಸರುಗಳಲ್ಲಿ ಆತ ಜಿಹಾದಿ ಪ್ರಚಾರದಲ್ಲಿ ತೊಡಗಿದ್ದ ಮಾಹಿತಿ ಸಹ ಲಭಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್‌ಖೈದಾ ಸೇರಲು ಹಮ್ಜರ್‌ ಸೇತು

ಅಲ್‌ಖೈದಾ ಸಂಘಟನೆಗೆ ಆರೀಫ್‌ನನ್ನು ಆ ಸಂಘಟನೆಯ ವಿದೇಶಿ ಹ್ಯಾಂಡ್ಲರ್‌ಗಳಾದ ಹಮ್ಜರ್‌, ಅಜ್ಮತ್‌, ಹನ್ಜಾಲ ಹಾಗೂ ಮಸಿದ್‌ ಸೆಳೆದಿದ್ದರು. ಈ ನಾಲ್ವರ ಪೂರ್ವಾಪರ ಬಗ್ಗೆ ತನಿಖೆ ನಡೆದಿದೆ. ಇವರೆಲ್ಲ ಯಾರು ಎಂಬುದು ಗೊತ್ತಿಲ್ಲ. ಈ ನಾಲ್ವರ ಪೈಕಿ ಆರೀಫ್‌ ಜತೆ ಹಮ್ಜರ್‌ ಆತ್ಮೀಯ ಒಡನಾಟವಿತ್ತು. ಆತನ ಮೂಲಕವೇ ಕಾಶ್ಮೀರ ಗಡಿದಾಟಿ ಅಷ್ಘಾನಿಸ್ತಾನಕ್ಕೆ ಪಲಾಯನ ಮಾಡಲು ಆರೀಫ್‌ ಯೋಜಿಸಿದ್ದ. ಹೀಗಾಗಿ ಭಾರತದಲ್ಲಿ ಅಲ್‌ಖೈದಾ ಸಂಘಟನೆಯಲ್ಲಿ ಹಮ್ಜರ್‌ ಪ್ರಮುಖ ಪಾತ್ರವಹಿಸಿರುವುದು ಖಚಿತವಾಗಿದೆ. ಆದರೆ ಮೂಲ ನೆಲೆ ಬಗ್ಗೆ ನಿಶ್ಚಿತವಾದ ಸುಳಿವು ಸಿಕ್ಕಿಲ್ಲ. ಅಲ್ಲದೆ ಹಮ್ಜರ್‌ ಎಂಬುದು ಆತನ ನಿಜವಾದ ಹೆಸರೇ ಎಂಬುದು ಸಹ ಖಚಿತವಾಗಿಲ್ಲ ಎಂದು ಎನ್‌ಐಎ ಉನ್ನತ ಮೂಲಗಳು ಹೇಳಿವೆ.