* ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸಾಮಾನ್ಯ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಶಂಕಿತ ಉಗ್ರ* ಬೆಂಗಳೂರು ರೈಲು ನಿಲ್ದಾಣದಲ್ಲಿ ಪಾರ್ಸೆಲ್‌ ವಾಹನ ಓಡಿಸುತ್ತಿದ್ದ ತಾಲಿಬ್‌* ಅನಾವಶ್ಯಕವಾಗಿ ಓಡಾಡುತ್ತಿರಲಿಲ್ಲ, ತನ್ನ ಪಾಡಿಗೆ ತಾನಿದ್ದ ಹಿಜ್ಬುಲ್‌ * ಉಗ್ರ

ಬೆಂಗಳೂರು(ಜೂ,08): ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸಾಮಾನ್ಯ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ತಾಲಿಬ್‌ ಹುಸೇನ್‌ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಯ ಶಂಕಿತ ಉಗ್ರ ಎಂಬ ಸುದ್ದಿ ತಿಳಿದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ತಾಲಿಬ್‌ ಬೆಂಗಳೂರಿನಲ್ಲಿ ನೆಲೆಸಿದ್ದ. ಕಳೆದ ಎಂಟು ತಿಂಗಳಿಂದ ಶ್ರೀರಾಮಪುರದ ಓಕಳೀಪುರಂನ ಪ್ರಾರ್ಥನಾ ಮಂದಿರದ ಸಮೀಪ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ನೆಲೆಸಿದ್ದ. ನಗರದ ರೈಲ್ವೆ ನಿಲ್ದಾಣದ ಪಾರ್ಸೆಲ್‌ ಕಚೇರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನ ಬಂಧನದ ಬಳಿಕ ಈತ ಶಂಕಿತ ಉಗ್ರ ಎಂಬ ವಿಚಾರ ಬೆಳಕಿಗೆ ಬಂದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಈತ ಬೆಳಗ್ಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುತ್ತಿದ್ದ. ಅನಾವಶ್ಯಕವಾಗಿ ಓಡಾಡುತ್ತಿರಲಿಲ್ಲ. ತಾನು ತನ್ನ ಕೆಲಸ ಎನ್ನುವ ಹಾಗೆ ಇರುತ್ತಿದ್ದ. ಒಂದು ದಿನವೂ ಆತನ ಮೇಲೆ ನಮಗೆ ಅನುಮಾನ ಬಂದಿರಲಿಲ್ಲ. ಇದೀಗ ಆತ ಶಂಕಿತ ಉಗ್ರ ಎಂಬ ವಿಚಾರ ಗೊತ್ತಾಗಿ ನಮಗೆ ಶಾಕ್‌ ಆಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಮೇ 29ರಂದು ಜಮ್ಮು-ಕಾಶ್ಮೀರ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ತಾಲಿಬ್‌ನನ್ನು ಬಂಧಿಸಿದರು. ಈ ವೇಳೆ ಈತ ಜಮ್ಮು-ಕಾಶ್ಮೀರದಲ್ಲಿ ಹೆಂಡತಿ-ಮಕ್ಕಳನ್ನು ಬಿಟ್ಟು ಬಂದಿದ್ದಾನೆ. ಈತನ ಹೆಂಡತಿ ನ್ಯಾಯಾಲಯದಲ್ಲಿ ಹೇಬಿಯಸ್‌ ಕಾಪರ್ಸ್‌ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಯ ಜಾಡು ಹಿಡಿದು ಇಲ್ಲಿಗೆ ಬಂದು ವಶಕ್ಕೆ ಪಡೆದು ಜಮ್ಮು-ಕಾಶ್ಮೀರಕ್ಕೆ ಕರೆದೊಯ್ಯುತ್ತಿರುವುದಾಗಿ ಜಮ್ಮು-ಕಾಶ್ಮೀರ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾಗಿ ಸ್ಥಳೀಯರು ತಿಳಿಸಿದರು.

ಲಾಕ್‌ಡೌನ್‌ ವೇಳೆ ಸಿಕ್ಕ:

ಕೋವಿಡ್‌ ಎರಡನೇ ಅಲೆ ಲಾಕ್‌ಡೌನ್‌ ವೇಳೆ ರೈಲು ನಿಲ್ದಾಣದ ಕಾರ್ಮಿಕರು ಸೇರಿದಂತೆ ನಿರಾಶ್ರಿತರಿಗೆ ಮಾನವೀಯ ದೃಷ್ಟಿಯಲ್ಲಿ ಆಹಾರದ ಪೊಟ್ಟಣ ವಿತರಿಸುತ್ತಿದ್ದೆವು. ಈ ವೇಳೆ ತಾಲಿಬ್‌ ರೈಲು ನಿಲ್ದಾಣದಲ್ಲಿ ಆಹಾರದ ಪೊಟ್ಟಣ ಪಡೆದುಕೊಂಡಿದ್ದ. ಒಂದು ದಿನ ಶ್ರೀರಾಮಪುರದ ಕಿರಾಣಿ ಅಂಗಡಿ ಮಾಲೀಕರೊಬ್ಬರು ಈತನನ್ನು ಪರಿಚಯಿಸಿ, ಈತನಿಗೆ ಕೋವಿಡ್‌ ಕಾರಣದಿಂದ ಕೆಲಸವಿಲ್ಲ. ತುಂಬಾ ಕಷ್ಟದಲ್ಲಿದ್ದಾನೆ. ಹೆಂಡತಿ, ಆರು ತಿಂಗಳ ಮಗುವಿದೆ ಎಂದು ಹೇಳಿದರು. ಈ ವೇಳೆ ಮಾನವೀಯ ನೆಲೆಯಲ್ಲಿ ಮಸೀದಿ ಹಿಂಭಾಗದ ಮನೆಯನ್ನು ನೀಡಿ ಜೀವನ ಮಾಡಿಕೊಂಡು ಹೋಗುವಂತೆ ಸೂಚಿಸಿದ್ದೆವು. ಆತ ಕೂಡ ಇದುವರೆಗೂ ಸಾಮಾನ್ಯನಂತೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ. ಇದೀಗ ಆತ ಶಂಕಿತ ಉಗ್ರ ಎಂದು ತಿಳಿದು ನಿಜಕ್ಕೂ ನಮಗೆ ಆಶ್ಚರ್ಯವಾಗಿದೆ ಎಂದು ಸ್ಥಳೀಯ ನಿವಾಸಿ ಅನ್ವರ್‌ ಮಾವಾಡ್‌ ಹೇಳಿದರು.

ಕಷ್ಟಹೇಳಿ ಸಹಾಯ:

ತಾಲಿಬ್‌ ಪತ್ನಿ ಹಾಗೂ ಮೂರು ಮಕ್ಕಳೊಂದಿಗೆ ಎಂಟು ತಿಂಗಳಿಂದ ಇಲ್ಲಿ ನೆಲೆಸಿದ್ದ. ಪತ್ನಿಯ ಮೊದಲ ಗಂಡನ ಎರಡು ಮಕ್ಕಳು ಹಾಗೂ ಈತನ ಒಂದು ಮಗು ಇತ್ತು. ಕಷ್ಟದಲ್ಲಿ ಇದ್ದಾನೆ ಎಂದು ಇರಲು ಜಾಗ ಮಾಡಿಕೊಟ್ಟೆವು. ಆತ ಕಷ್ಟಹೇಳಿಕೊಂಡು ಐನೂರು, ಸಾವಿರ ರು. ಪಡೆಯುತ್ತಿದ್ದ. ಒಂದು ದಿನವೂ ಆತ ವರ್ತನೆ ಹಾಗೂ ಚಟುವಟಿಕೆಗಳ ಬಗ್ಗೆ ನಮಗೆ ಅನುಮಾನ ಬಂದಿರಲಿಲ್ಲ. ಈಗ ಆತ ಉಗ್ರ ಎಂಬ ವಿಚಾರ ತಿಳಿದು ಆಶ್ಚರ್ಯವಾಗಿದೆ. ಯಾರನ್ನು ನಂಬುವುದು ಎಂಬ ಪ್ರಶ್ನೆ ಎದುರಾಗಿದೆ. ಇಂತಹ ವ್ಯಕ್ತಿಗೆ ನಾವು ಸಹಾಯ ಮಾಡಿದ್ದೇವಾ ಅನಿಸುತ್ತಿದೆ ಎಂದು ಶ್ರೀರಾಮಪುರದ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.