ಶಿವಮೊಗ್ಗ: ಶಂಕಿತ ಉಗ್ರರು ಪಾಕಿಸ್ತಾನಕ್ಕೆ ಭೇಟಿ?
ಶಿವಮೊಗ್ಗದಲ್ಲಿ ಬಂಧಿತರ ಪೈಕಿ ಯಾಸೀನ್ ಪಾಕಿಸ್ತಾನಕ್ಕೆ ಭೇಟಿ ಶಂಕೆ, ಶಾರಿಕ್‌ನಿಂದ ಬಾಂಬ್ ತರಬೇತಿ, ಬಾಂಬ್ ತಯಾರಿಕೆಗೆ ಆನ್‌ಲೈನ್‌ನಲ್ಲಿ ವಸ್ತು ಖರೀದಿ: ಎಸ್‌ಪಿ
ಶಿವಮೊಗ್ಗ(ಸೆ.24): ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರ ಪೈಕಿ ಸಯ್ಯದ್ ಯಾಸೀನ್, ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಶಂಕೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತರು ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಈ ಪೈಕಿ, ಸಯ್ಯದ್ ಯಾಸೀನ್, ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಶಂಕೆ ಇದೆ. ಈ ಬಗ್ಗೆ ಇನ್ನಷ್ಟುತನಿಖೆ ಆಗಬೇಕಿದೆ ಎಂದು ಹೇಳಿದರು.
ಬಂಧಿತ ಸಯ್ಯದ್ ಯಾಸೀನ್ ಮತ್ತು ಮಾಜ್ ಮುನೀರ್ ಅಹ್ಮದ್ ಮುನೀರ್, ಬಾಂಬ್ ತಯಾರಿಕೆಗೆ ಮತ್ತು ಅದನ್ನು ಪ್ರಾಯೋಗಿಕವಾಗಿ ಸ್ಫೋಟಿಸಲು ಶಿವಮೊಗ್ಗ ಹೊರವಲಯದ ತುಂಗಾ ನದಿಯ ದಡದಲ್ಲಿರುವ ಕೆಮ್ಮನಗುಂಡಿ ಎಂದು ಕರೆಯಲ್ಪಡುವ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದರು. ಇಲ್ಲಿ ಸ್ಫೋಟ ಕೂಡ ನಡೆಸಲಾಗಿತ್ತು. ಈ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳಲ್ಲಿ 9 ವೋಲ್ಟ್‌ನ ಎರಡು ಬ್ಯಾಟರಿ, ಸ್ವಿಚ್, ವೈರ್, ಮ್ಯಾಚ್ ಬಾಕ್ಸ್ ಹಾಗೂ ಇತರ ಸ್ಫೋಟಕ ವಸ್ತುಗಳನ್ನು ಸ್ಥಳೀಯ ಅಂಗಡಿಗಳಲ್ಲಿ ಖರೀದಿಸಿದ್ದರು. ಟೈಮರ್, ರೀಲೆ ಸರ್ಕೂ್ಯಟ್‌ಗಳನ್ನು ಆನ್‌ಲೈನ್ ಮುಖಾಂತರ ಖರಿದಿಸಿದ್ದರು. ಬಾಂಬ್ ತಯಾರಿಕೆ ಕುರಿತು ಮಾಹಿತಿ ಪಡೆಯಲು ಅಂತರ್ ಜಾಲದಲ್ಲಿ ಶೋಧ ನಡೆಸಿದ್ದಾರೆ. ಅಲ್ಲದೆ, ಶಾರೀಕ್‌ನಿಂದ ವೀಡಿಯೋ, ಪಿಡಿಎಫ್ ಫೈಲ್‌ಗಳನ್ನು ಪಡೆದು ಅದರ ಮೂಲಕ ತರಬೇತಿ ಪಡೆದುಕೊಂಡಿದ್ದರು. ಶಾರೀಕ್‌ನ ಮೂಲಕವೇ ಆನ್‌ಲೈನ್ ಮೂಲಕ ಹಣ ತರಿಸಿಕೊಂಡಿದ್ದರು ಎಂದು ವಿವರಿಸಿದರು.
ಉಗ್ರ ನಂಟು: ಶಿವಮೊಗ್ಗಕ್ಕೆ ಕೇಂದ್ರ ತಂಡ
ರಾಷ್ಟ್ರಧ್ವಜ ಸುಟ್ಟು ವೀಡಿಯೋ ಮಾಡಿದ್ದರು:
75ನೇ ಸುವರ್ಣ ಸ್ವಾತಂತ್ರ್ಯ ಸಂಭ್ರಮದ ವೇಳೆ ನಡೆದ ಗಲಭೆಯ ಬಳಿಕ ಆರೋಪಿಗಳು ತಾವು ಬಾಂಬ್ ಸಿಡಿಸಿದ ಜಾಗದಲ್ಲಿ ರಾಷ್ಟ್ರಧ್ವಜವನ್ನು ಸುಟ್ಟು, ಅದರ ವೀಡಿಯೋ ಚಿತ್ರೀಕರಣ ಮಾಡಿದ್ದರು. ದಾಳಿ ವೇಳೆ, ಅರೆಬರೆ ಸುಟ್ಟಿರುವ ಭಾರತದ ರಾಷ್ಟ್ರಧ್ವಜವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಉಗ್ರರ ಸುಳಿವು ಸಿಕ್ಕಿದ್ದು ಹೇಗೆ?:
ಆ.15 ರಂದು, 75ನೇ ಸುವರ್ಣ ಸ್ವಾತಂತ್ರ್ಯೋತ್ಸವದ ಸಂಭ್ರಮದ ವೇಳೆ ಶಿವಮೊಗ್ಗದ ಎಎ ವೃತ್ತದಲ್ಲಿ ಫ್ಲೆಕ್ಸ್ ವಿವಾದ ಎದ್ದಿದ್ದು, ಬಳಿಕ ಗಲಭೆ ಶುರುವಾಗಿತ್ತು. ಇದೇ ವೇಳೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಪ್ರೇಮ್ ಸಿಂಗ್ ಎಂಬುವರ ಮಾಲಿಕತ್ವದ ಬಟ್ಟೆಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮುಸ್ಲಿಂ ಯುವಕರು ಚಾಕುವಿನಿಂದ ಹಲ್ಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬೀವುಲ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ, ಈತನ ಮೊಬೈಲ್ ಸಂಪರ್ಕದಲ್ಲಿ ಶಾರೀಕ್ ಎಂಬಾತ ಇರುವ ಕುರಿತು ಮಾಹಿತಿ ದೊರೆಯಿತು. ತನಿಖೆಯನ್ನು ಮುಂದುವರಿಸಿದಾಗ ಶಾರೀಕ್‌ನ ಜೊತೆ ಶಿವಮೊಗ್ಗದ ಯಾಸಿನ್ ಮತ್ತು ಮಾಜ್ ಸತತವಾಗಿ ಸಂಪರ್ಕ ಸಾಧಿಸಿರುವುದು ಗೊತ್ತಾಯಿತು.
Suspected Terrorists: ಶಂಕಿತ ಉಗ್ರ ಶಾರೀಕ್‌ಗಾಗಿ ತೀವ್ರ ಶೋಧ
ಶಾರೀಕ್, 2020ರಲ್ಲಿ ಮಂಗಳೂರಿನ ಗೋಡೆ ಬರಹದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ. ಜೈಲಿನಲ್ಲಿ 8 ತಿಂಗಳವರೆಗೆ ಇದ್ದು ಬಳಿಕ ಬಿಡುಗಡೆಯಾಗಿದ್ದ. ಕೂಲಂಕುಷ ತನಿಖೆ ವೇಳೆ ಶಾರೀಕ್, ಮಾಜ್ ಮತ್ತು ಸೈಯ್ಯದ್ ಯಾಸೀನ್, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಮತ್ತು ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವುದು ಕಂಡು ಬಂದಿದೆ. ಅದರಲ್ಲಿಯೂ ಮುಖ್ಯವಾಗಿ ನಿಷೇಧಿತ ಐಸಿಸ್ ಸಂಘಟನೆಯ ಜೊತೆ ಸಂಪರ್ಕ ಸಾಧಿಸುವ ಯತ್ನ ಮತ್ತು ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಬಗ್ಗೆ ಸಾಕಷ್ಟುಮಾಹಿತಿಗಳು, ದಾಖಲೆಗಳು ಸಿಕ್ಕಿವೆ ಎಂದು ಅವರು ತಿಳಿಸಿದರು.
ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಮೂರು ಮಂದಿಯ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಇದರಲ್ಲಿ ಎರಡನೇ ಮತ್ತು ಮೂರನೇ ಆರೋಪಿಯನ್ನು ಬಂಧಿಸಲಾಗಿದೆ. ಎ 1 ಆರೋಪಿ, ಶಾರಿಕ್ ನಾಪತ್ತೆಯಾಗಿದ್ದಾನೆ. ಈತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗುತ್ತಿದೆ ಅಂತ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.