Asianet Suvarna News Asianet Suvarna News

ಬೆಂಗಳೂರು: ಕರಗ ಹೊರುವ ಜ್ಞಾನೇಂದ್ರ ಹತ್ಯಗೆ ಯತ್ನ ಅನುಮಾನ..!

ಖಾರದ ಪುಡಿ ಮಿಶ್ರಣ ಮಾಡಿದ ಹೂ ಎರಚಿರುವ ಶಂಕೆ, ಅರ್ಚಕನ ದೇಹದ ಮೇಲೆ ಸುಟ್ಟಗಾಯ: ಶ್ರೀಧರ್ಮರಾಯ ಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್‌

Suspect of Attempted Murder of Gyanendra who is Carrying Karaga in Bengaluru grg
Author
First Published Apr 12, 2023, 5:30 AM IST

ಬೆಂಗಳೂರು(ಏ.12): ಕರಗವನ್ನು ಹೊತ್ತಿದ್ದ ಜ್ಞಾನೇಂದ್ರ ಅವರ ದೇಹದ ಮೇಲೆ ಗಾಯಗಳಾಗಿವೆ. ಕರಗ ಉತ್ಸವದ ವೇಳೆ ಜ್ಞಾನೇಂದ್ರ ಅವರ ಮೇಲೆ ರಾಸಾಯನಿಕ ಮಿಶ್ರಣ ಹಾಗೂ ಖಾರದ ಪುಡಿ ಎರಚಿದ ಅನುಮಾನ ವ್ಯಕ್ತವಾಗಿದೆ. ಹೀಗಾಗಿ, ಪೊಲೀಸ್‌ ಠಾಣೆಗೆ ದೂರು ನೀಡಿ ತನಿಖೆಗೆ ಒಳಪಡಿಸಲಾಗುವುದು ಎಂದು ಶ್ರೀಧರ್ಮರಾಯ ಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್‌ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ವಿಶ್ವ ವಿಖ್ಯಾತ ಕರಗ ಮಹೋತ್ಸವ ಯಶಸ್ವಿಯಾಗಿದೆ. ಆದರೆ, ಕರಗ ಹೊತ್ತ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಹೂವು, ಮೆಣಸಿನಕಾಳು, ಕಲ್ಲುಪ್ಪು ಸೇರಿದಂತೆ ವಿವಿಧ ಪ್ರದಾರ್ಥಗಳನ್ನು ಭಕ್ತರು ಹರಕೆಯ ಹೆಸರಿನಲ್ಲಿ ಎರಚುತ್ತಾರೆ. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು ಕೆಲ ಕಿಡಿಗೇಡಿಗಳು ಉತ್ಸವಕ್ಕೆ ಧಕ್ಕೆ ತರುವ ಉದ್ದೇಶದಿಂದ ರಾಸಾಯನಿಕ ಮತ್ತು ಖಾರದ ಪುಡಿ ಮಿಶ್ರಣ ಮಾಡಿದ ಹೂವು ಸೇರಿದಂತೆ ಮೊದಲಾದವುಗಳನ್ನು ಎರಚಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ, ಪೊಲೀಸ್‌ ಠಾಣೆಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ಮನೆಮುಂದೆ ನಾಯಿ ಗಲೀಜು ಮಾಡಿಸಬೇಡಿ ಎಂದಿದ್ದಕ್ಕೆ ಮಾಲೀಕನನ್ನೇ ಕೊಲೆಗೈದ ಪಾಪಿಗಳು

ಉತ್ಸವದ ವೇಳೆ ಪ್ರತಿ ಬೀದಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆ ಎಲ್ಲವನ್ನೂ ಪರಿಶೀಲನೆ ನಡೆಸಬೇಕೆಂದು ಪೊಲೀಸರಿಗೆ ಮನವಿ ಮಾಡಲಾಗುವುದಾಗಿ ತಿಳಿಸಿದ್ದಾರೆ. ಇನ್ನು ಜ್ಞಾನೇಂದ್ರ ಅವರ ದೇಹದ ಮೇಲೆ ಗಾಯಗಳು ಉಂಟಾಗಿದೆ. ಆದರೆ, ಯಾವುದೇ ಅಪಾಯ ಇಲ್ಲ ಎಂದು ಕೆ.ಸತೀಶ್‌ ಸ್ಪಷ್ಟಪಡಿಸಿದ್ದಾರೆ.

ಹಗೆತನಕ್ಕೆ ಆದಿನಾರಾಯಣ ಕೃತ್ಯ ಶಂಕೆ: ಎಫ್‌ಐಆರ್‌

ಬೆಂಗಳೂರು: ಕರಗ ಉತ್ಸವದ ವೇಳೆ ತಮ್ಮ ಮೇಲೆ ರಾಸಾಯನಿಕ ವಸ್ತು ಎರಚಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್‌ ಠಾಣೆಗೆ ಕರಗ ಹೊತ್ತಿದ್ದ ಜ್ಞಾನೇಂದ್ರ ಮಂಗಳವಾರ ದೂರು ನೀಡಿದ್ದಾರೆ.
ಕರಗ ಹೊತ್ತಿದ್ದಾಗ ಹೂವಿನೊಂದಿಗೆ ಖಾರದ ಪುಡಿ ಹಾಗೂ ರಾಸಾಯನಿಕ ವಸ್ತು ಬೆರೆಸಿ ಎಸೆದು ಕೊಲೆ ಯತ್ನಿಸಿದ್ದಾರೆ ಎಂದು ಜ್ಞಾನೇಂದ್ರ ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಜಯನಗರದ ಆದಿನಾರಾಯಣ ವಿರುದ್ಧ ಕೊಲೆ ಯತ್ನ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರಗ ಉತ್ಸವದ ವೇಳೆ ಜ್ಞಾನೇಂದ್ರ ಮೇಲೆ ಆದಿನಾರಾಯಣ ಯಾವುದೋ ವಸ್ತು ಎಸೆಯುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಜ್ಞಾನೇಂದ್ರ ಅವರ ಕುತ್ತಿಗೆ ಭಾಗದಲ್ಲಿ ಸುಟ್ಟಗಾಯಗಳಾಗಿವೆ. ಹಲವು ವರ್ಷಗಳಿಂದ ಕರಗ ಹೊರುವ ವಿಚಾರವಾಗಿ ಆದಿನಾರಾಯಣ ಹಾಗೂ ಜ್ಞಾನೇಂದ್ರ ನಡುವೆ ಮನಸ್ತಾಪವಿದೆ. ಈ ಹಗೆತನ ಹಿನ್ನಲೆಯಲ್ಲಿ ಆತ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow Us:
Download App:
  • android
  • ios