ಪತಿಯ ಅತಿಯಾದ ಲೈಂ*ಗಿಕ ಕಿರುಕುಳದಿಂದ ಬೇಸತ್ತ ಪತ್ನಿಯೊಬ್ಬಳು, ಆತನಿಗೆ ವಿಷ ನೀಡಿ ನಂತರ ಉಸಿರುಗಟ್ಟಿಸಿ ಹ*ತ್ಯೆ ಮಾಡಿದ್ದಾಳೆ. ಸಹಜ ಸಾವು ಎಂದು ನಂಬಲಾಗಿದ್ದ ಈ ಪ್ರಕರಣ, ಅಂತ್ಯಕ್ರಿಯೆ ವಿಚಾರವಾಗಿ ನಡೆದ ಜಗಳದಿಂದಾಗಿ ಕೊ*ಲೆ ಎಂದು ಬಯಲಾಗಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.
ಸೂರತ್: ಪತಿಯ ಅತಿಯಾದ ಲೈಂ*ಗಿಕ ಆಸಕ್ತಿಯಿಂದ ಬೇಸತ್ತ ಪತ್ನಿ, ತನ್ನ ಗಂಡನಿಗೆ ವಿಷ ಹಾಕಿ, ಕೊನೆಗೆ ಉಸಿರುಗಟ್ಟಿಸಿ ಕೊ*ಲೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪತಿಯನ್ನು ಸಾಯಿಸಿದ 39 ವರ್ಷದ ಮಹಿಳೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪತಿಯ ಅಂತ್ಯಕ್ರಿಯೆಯ ವ್ಯವಸ್ಥೆಗಳ ವಿಚಾರವಾಗಿ ನಡೆದ ಜಗಳದ ಬಳಿಕ ಇದು ಸಹಜ ಸಾವಲ್ಲ, ಕೊ*ಲೆ ಎನ್ನುವ ವಿಚಾರ ಬಯಲಾಗಿದೆ. ವಿಧಿವಿಜ್ಞಾನ ಶವಪರೀಕ್ಷೆಯಲ್ಲಿ ಕುತ್ತಿಗೆ ಮತ್ತು ಎದೆಯ ಮೇಲೆ ಒತ್ತಡದಿಂದ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ. ಇದಾದ ಬಳಿಕ ಪತಿಯನ್ನು ಕೊಂ*ದ ಪತ್ನಿಯನ್ನು ಲಿಂಬಾಯತ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು, ಆರೋಪಿ ಇಶ್ರತ್ ಖಾತೂನ್‌ನನ್ನು ಲಿಂಬಾಯತ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಹೈದರ್ ಅಲಿ (39) ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯವನಾಗಿದ್ದು, ಮುಂಬೈನಲ್ಲಿ ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಸೂರತ್‌ನಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡುತ್ತಿದ್ದ. ಮನೆಗೆ ಬಂದಾಗ ವಯಾಗ್ರ ಮಾತ್ರೆಗಳನ್ನು ತಂದುಕೊಂಡು ಪದೇ ಪದೇ ಪತ್ನಿ ಬಳಿ ಚಿತ್ರವಿಚಿತ್ರ ಲೈಂ*ಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಅದನ್ನು ಸಹಿಸಲಾಗದೆ ಖಾತೂನ್ ಆತನನ್ನು ಕೊ*ಲ್ಲಲು ನಿರ್ಧರಿಸಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮೋಸದಿಂದ ಪತಿಗೆ ವಿಷವುಣಿಸಿದ ಪತ್ನಿ
ಪೊಲೀಸರ ಪ್ರಕಾರ, ಹೈದರ್ ಅಲಿ ಜನವರಿ 1 ರಂದು ಸೂರತ್‌ಗೆ ಬಂದಿದ್ದ. ಚಳಿಗಾಲದಲ್ಲಿ ಒಳ್ಳೆಯದು ಎಂದು ಹೇಳಿ ಖಾತೂನ್ ಅರಿಶಿಣದ ಹಾಲನ್ನು ಸಿದ್ಧಪಡಿಸಿ, ಅದರಲ್ಲಿ ಕೀಟನಾಶಕವನ್ನು ಬೆರೆಸಿ ಪತಿಗೆ ನೀಡಿದ್ದಳು ಎನ್ನಲಾಗಿದೆ. ಅದನ್ನು ಕುಡಿದ ಕೂಡಲೇ ಅಲಿಯ ಆರೋಗ್ಯ ಹದಗೆಟ್ಟು, ಪದೇ ಪದೇ ವಾಂತಿ ಮಾಡಿಕೊಂಡಿದ್ದ. ಆದರೂ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ.
ಜನವರಿ 5 ರಂದು ಅಲಿ ತುಂಬಾ ದುರ್ಬಲನಾಗಿದ್ದಾಗ, ಖಾತೂನ್ ಆತನ ಎದೆಯ ಮೇಲೆ ಕುಳಿತು ಕೈಗಳಿಂದ ಕತ್ತು ಹಿಸುಕಿ ಕೊಂ*ದಿದ್ದಾಳೆ ಎಂದು ಆರೋಪಿಸಲಾಗಿದೆ. ನಂತರ, ಅಲಿಯ ಆರೋಗ್ಯ ಸರಿ ಇಲ್ಲ ಎಂದು ತನ್ನ ಭಾವ ಅರ್ಷದ್‌ಗೆ ತಿಳಿಸಿದ್ದಾಳೆ. ಕುಟುಂಬಸ್ಥರು ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಖಚಿತಪಡಿಸಿದರು. ಇದಾದ ಬಳಿಕ ಸಾಮಾನ್ಯ ಶವಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದರು.
ಸಹಜ ಸಾವಲ್ಲ ಕೊ*ಲೆ ಎಂದು ಪತ್ತೆಯಾಗಿದ್ದು ಹೇಗೆ?
ಹೈದರ್ ಅಲಿಯ ಸಹೋದರ ಬಿಹಾರದಲ್ಲಿ ಅಂತ್ಯಕ್ರಿಯೆ ನಡೆಸಬೇಕೆಂದು ಪಟ್ಟು ಹಿಡಿದರೆ, ಖಾತೂನ್ ಸೂರತ್‌ನಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕೆಂದು ಬಯಸಿದ್ದಳು. ಇದರಿಂದ ಎರಡೂ ಕುಟುಂಬಗಳ ನಡುವೆ ಜಗಳವಾಗಿ ಅನುಮಾನ ಹೆಚ್ಚಾಯಿತು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಜನವರಿ 6 ರಂದು, ವಿಧಿವಿಜ್ಞಾನ ಶವಪರೀಕ್ಷೆಗೆ ಆದೇಶಿಸಲಾಯಿತು, ಇದು ಉಸಿರುಗಟ್ಟಿ ಸಾವು ಎಂದು ಖಚಿತವಾದ ನಂತರ ಕುಟುಂಬಸ್ಥರು ಮೃತದೇಹವನ್ನು ಬಿಹಾರಕ್ಕೆ ಕೊಂಡೊಯ್ದು ಜನವರಿ 9 ರಂದು ಅಂತ್ಯಕ್ರಿಯೆ ನಡೆಸಿದರು.
ಖಾತೂನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ನಡಿ ಕೇಸು ದಾಖಲು
ಪೊಲೀಸರು ಖಾತೂನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 103(1) (ಕೊ*ಲೆ) ಮತ್ತು 123 (ವಿಷ ನೀಡಿ ನೋವುಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಂಪತಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ಕು ಮಕ್ಕಳಿದ್ದಾರೆ. ಈ ಅಪರಾಧದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


