ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟಲ್‌, ಕೊಕೇನ್‌, ಹ್ಯಾಶಿಸ್‌ ಆಯಿಲ್‌, ಚರಸ್‌ ಹಾಗೂ ಗಾಂಜಾ ಸೇರಿದಂತೆ .2 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ 

ಬೆಂಗಳೂರು(ಆ.03): ಗ್ರಾಹಕರ ಮನೆ ಬಾಗಿಲಿಗೆ ತುರ್ತು ಆರೋಗ್ಯ ಕಿಟ್‌ ಹಾಗೂ ಉಡುಗೊರೆಗಳ ಕವರ್‌ಗಳಲ್ಲಿ ಡ್ರಗ್ಸ್‌ ತುಂಬಿ ಪೂರೈಸುತ್ತಿದ್ದ ಐವರು ಕುಖ್ಯಾತ ಪೆಡ್ಲರ್‌ಗಳನ್ನು ಬಂಧಿಸಿ 2 ಕೋಟಿ ಮೌಲ್ಯದ ಡ್ರಗ್ಸ್‌ ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ದೆಹಲಿ ಮೂಲದ ವಿಶಾಲ್‌ ಕುಮಾರ್‌, ಭೀಮಾಂಶು ಠಾಕೂರ್‌, ಸಾಗರ್‌, ಬಿಹಾರದ ಮಹಾಬಲಿ ಸಿಂಗ್‌ ಹಾಗೂ ಸುಬರ್ಜಿತ್‌ ಸಿಂಗ್‌ ಬಂಧಿತರಾಗಿದ್ದು, ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟಲ್‌, ಕೊಕೇನ್‌, ಹ್ಯಾಶಿಸ್‌ ಆಯಿಲ್‌, ಚರಸ್‌ ಹಾಗೂ ಗಾಂಜಾ ಸೇರಿದಂತೆ .2 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಈ ತಂಡದ ಪ್ರಮುಖ ಆರೋಪಿ ದೆಹಲಿ ಮೂಲದ ವ್ಯಕ್ತಿ ತಪ್ಪಿಸಿಕೊಂಡಿದ್ದು, ಆತನ ಪತ್ತೆಗೆ ತನಿಖೆ ಮುಂದುವರೆದಿದೆ.

ಡಾರ್ಕ್ನೆಟ್‌ ಮೂಲಕ ಡ್ರಗ್ಸ್‌ ಖರೀದಿಸಿ ತಂದು ನಗರದಲ್ಲಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾರತ್‌ಹಳ್ಳಿ ಮತ್ತು ವೈಟ್‌ಫಿಲ್ಡ್‌ನಲ್ಲಿರುವ ಪೇಯಿಂಗ್‌ ಗೆಸ್ಟ್‌ಗಳ ಮೇಲೆ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

ಅಮಿತ್‌ ಶಾ ಎದುರು 30 ಸಾವಿರ ಕೇಜಿ ಡ್ರಗ್ಸ್‌ ನಾಶ

ಡೋನ್ಜೋ, ಪೋರ್ಟರ್‌ ಮೂಲಕ ವಿತರಣೆ:

ದೆಹಲಿ ಮೂಲದ ಪೆಡ್ಲರ್‌, ಡಾರ್ಕ್ನೆಟ್‌ನಲ್ಲಿ ಬಿಟ್‌ ಕಾಯಿನ್‌ ಬಳಸಿ ಡ್ರಗ್ಸ್‌ ಖರೀದಿಸಿದ್ದ. ಈ ಡ್ರಗ್ಸ್‌ ಮಾರಾಟಕ್ಕೆ ಹಣದಾಸೆ ತೋರಿಸಿ ನಿರುದ್ಯೋಗಿ ಯುವಕರನ್ನು ಸೆಳೆದಿದ್ದ ಆತ, ಬಳಿಕ ಬೆಂಗಳೂರು, ಮುಂಬೈ, ದೆಹಲಿ ಹಾಗೂ ಚೆನ್ನೈನಲ್ಲಿ ಡ್ರಗ್ಸ್‌ ವಿತರಣೆಗೆ ಆ ಯುವಕರನ್ನು ನಿಯೋಜಿಸಿದ್ದ. ಇವರಿಗೆ ಪಿಜಿಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಿದ್ದ. ಅಂತೆಯೇ ಈಗ ಬಂಧಿತರಾಗಿರುವ ದೆಹಲಿ ಹಾಗೂ ಬಿಹಾರ ಯುವಕರಿಗೆ ಮಾರತ್ತಹಳ್ಳಿ ಹಾಗೂ ವೈಟ್‌ಫೀಲ್ಡ್‌ ಸಮೀಪ ಪಿಜಿಗಳಲ್ಲಿ ನೆಲೆ ಕಲ್ಪಿಸಿ ದಂಧೆ ನಡೆಸುತ್ತಿದ ಎಂದು ಸಿಸಿಬಿ ಹೇಳಿದೆ.

ಫೇಸ್‌ಬುಕ್‌, ಮೇಸೆಂಜರ್‌, ಟೆಲಿಗ್ರಾಂ, ಇನ್‌ಸ್ಟಾಗ್ರಾಮ್‌, ಬ್ರಿಯರ್‌, ಕಾನ್‌ಫಿಡ್‌ ಮತ್ತು ಸೆಷನ್‌ ಅಪ್ಲೀಕೇಷನ್‌ನಲ್ಲಿ ಡ್ರಗ್ಸ್‌ ವ್ಯಸನಿಗಳನ್ನು ಸಂಪರ್ಕಿಸಿ ಬಳಿಕ ಅವರ ಅಗತ್ಯಕ್ಕೆ ತಕ್ಕಂತೆ ಡ್ರಗ್ಸ್‌ ಅನ್ನು ಆರೋಪಿಗಳು ಪೂರೈಸಿದ್ದರು. ಇದಕ್ಕಾಗಿ ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಆರ್ಡರ್‌ ಪಡೆದು ಗ್ರಾಹಕರಿಂದ ಗೂಗಲ್‌ ಪೇ ಮತ್ತು ಫೋನ್‌ಪೇ ಮುಖೇನ ಹಣವನ್ನು ಪಾವತಿಸಿಕೊಳ್ಳುತ್ತಿದ್ದರು. ಆನಂತರ ಬತ್‌ರ್‍ಡೇ ಗಿಫ್ಟ್‌, ತುರ್ತು ಔಷಧ ಕಿಟ್‌ ಸೇರಿದಂತೆ ಇತರೆ ಪಾರ್ಸಲ್‌ಗಳ ಕವರ್‌ಗಳಲ್ಲಿ ಡ್ರಗ್ಸ್‌ ಅಡಗಿಸಿ ಅವರು ಪೂರೈಸುತ್ತಿದ್ದರು. ಡೊನ್ಜೋ ಮತ್ತು ಪೋರ್ಟರ್‌ನಲ್ಲಿ ಪಾರ್ಸೆಲ್‌ ಪಿಕ್‌ಅಪ್‌ ಮತ್ತು ಡೆಲಿವರಿ ಪಾಯಿಂಟ್‌ಗಳನ್ನು ನೋಂದಾಯಿಸಿಕೊಳ್ಳುತ್ತಿದ್ದರು. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಗ್ರಾಹಕರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎಂದು ಸಿಸಿಬಿ ಅಧಿಕಾರಿಗಳು ವಿವರಿಸಿದ್ದಾರೆ.

ಗಾಂಜಾ ಹಾವಳಿ ಹೆಚ್ಚಳ ಹಿನ್ನೆ​ಲೆ ಗೃಹ ಸಚಿವ ಜ್ಞಾನೇಂದ್ರ ರಾಜಿನಾಮೆ ನೀಡಲಿ

ಈ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಎಸಿಪಿ ರಾಮಚಂದ್ರ ಹಾಗೂ ಇನ್‌ಸ್ಪೆಕ್ಟರ್‌ ಬಿ.ಎಸ್‌.ಅಶೋಕ್‌ ನೇತೃತ್ವದ ತಂಡವು, ಮಾರತ್ತಹಳ್ಳಿ ಮತ್ತು ವೈಟ್‌ಫಿಲ್ಡ್‌ಗಳ ಪಿಜಿಗಳ ಮೇಲೆ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಣ ಸಂಪಾದಿಸಬೇಕಾ?, ಬನ್ನಿ ನಮ್ಮ ಜೊತೆ!

ನಿಮಗೆ ಗೌರವದೊಂದಿಗೆ ಹಣ ಸಂಪಾದಿಸಬೇಕಾ? ಹಾಗಾದರೆ ನಮ್ಮನ್ನು ಸಂಪರ್ಕಿಸಿ..! ಎಂಬ ಟ್ಯಾಗ್‌ಲೈನ್‌ನ ಜಾಹೀರಾತನ್ನು ಲೊಕೇಂಟೋ ಆ್ಯಪ್‌ನಲ್ಲಿ ಪ್ರಕಟಿಸಿ ಯುವಕರನ್ನು ಡ್ರಗ್ಸ್‌ ದಂಧೆಗೆ ದೆಹಲಿ ಮೂಲದ ಪೆಡ್ಲರ್‌ ಸೆಳೆದಿದ್ದ. ಕೊರಿಯರ್‌ ಸವೀರ್‍ಸ್‌ ಎಂದು ಹೇಳಿ ಯುವಕರನ್ನು ನಂಬಿಸಿ ಅವರಿಂದ ಡ್ರಗ್ಸ್‌ ಸರಬರಾಜು ಮಾಡಿಸುತ್ತಿದ್ದ. ಇದಕ್ಕಾಗಿ ತಿಂಗಳಿಗೆ ಅವರಿಗೆ .20 ಸಾವಿರ ಸಂಬಳ, ಓಡಾಟಕ್ಕೆ ವಾಹನ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಿದ್ದ. ಕಳೆದ ಎರಡು ತಿಂಗಳಿಂದ ಬೆಂಗಳೂರಿನಲ್ಲಿ ದೆಹಲಿ ಗ್ಯಾಂಗ್‌ ಡ್ರಗ್ಸ್‌ ವ್ಯವಹಾರ ನಡೆದಿತ್ತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣದ ಆರೋಪಿಗಳ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಅದರಲ್ಲಿ ಹಣದ ವಹಿವಾಟು ಆಧರಿಸಿ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.