*   ಬುಡಕಟ್ಟು ಜನರ ಹೆಸರಲ್ಲಿ ಬ್ಯಾಂಕ್‌ ಖಾತೆ, ಸಿಮ್‌ ಖರೀದಿಸಿ ಪೂರೈಕೆ*  ಹಣದ ಆಸೆಗಾಗಿ ಕಾನೂನು ವಿದ್ಯಾರ್ಥಿಯ ಕೃತ್ಯ*  ಸಿಮ್‌ಗಳು ಸೋಪ್‌ ಬಾಕ್ಸ್‌ನಲ್ಲಿ ರವಾನೆ 

ಬೆಂಗಳೂರು(ಜೂ.25): ಬುಡಕಟ್ಟು ಜನರ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು, ಸಿಮ್‌ ಕಾರ್ಡ್‌ ಖರೀದಿಸಿ ಸೈಬರ್‌ ವಂಚಕರಿಗೆ ಪೂರೈಸುತ್ತಿದ್ದ ಆರೋಪದ ಮೇರೆಗೆ ಕಾನೂನು ವಿದ್ಯಾರ್ಥಿಯೊಬ್ಬನನ್ನು ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ತ್ರಿಪುರಾದ ಅಗರ್ತಲಾ ಮೂಲದ ಮೋನಿಕುಮಾರ್‌ ಕಾಯ್‌ಪೇಂಗ್‌ ಬಂಧಿತನಾಗಿದ್ದು, ಆರೋಪಿಯಿಂದ ಮೊಬೈಲ್‌ ಹಾಗೂ 2 ಸಿಮ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಸೈಬರ್‌ ವಂಚನೆ ಕೃತ್ಯದಲ್ಲಿ ಬಂಧಿತನಾಗಿದ್ದ ಆಫ್ರಿಕಾ ಮೂಲದ ಪ್ರಜೆ ನೀಡಿದ ಮಾಹಿತಿ ಮೇರೆಗೆ ಮೋನಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಡಿಜೆ ಮೂವರು ವಿದೇಶಿ ಪ್ರಜೆಗಳ ಬಂಧನ

2-3 ಸಾವಿರಕ್ಕೆ ಸಿಮ್‌ ಕಾರ್ಡ್‌:

ತ್ರಿಪುರಾದಲ್ಲಿ ಕಾನೂನು ಪದವಿ ಓದುತ್ತಿರುವ ಮೋನಿ, ಹಣಕಾಸು ಸಂಕಷ್ಟಕ್ಕೆ ತುತ್ತಾಗಿದ್ದ. ಆಗ ಆತನ ಪರಿಚಿತನೊಬ್ಬ ವಿದೇಶಿ ಪ್ರಜೆಗಳಿಗೆ ಸಿಮ್‌ ಹಾಗೂ ಎಟಿಎಂ ಕಾರ್ಡ್‌ ಪೂರೈಸಿದರೆ ಕೈ ತುಂಬಾ ಹಣ ನೀಡುತ್ತಾರೆ ಎಂದು ಹೇಳಿದ್ದ. ಈ ಮಾತಿಗೆ ಒಪ್ಪಿದ ಮೋನಿ, ತನ್ನ ಗೆಳೆಯನ ಮೂಲಕ ಸೈಬರ್‌ ವಂಚಕರ ಜಾಲಕ್ಕೆ ಸೇರಿದ್ದಾನೆ. ಅಂತೆಯೇ ತ್ರಿಪುರ ರಾಜ್ಯದ ಬುಡುಕಟ್ಟು ಜನರಿಗೆ .2-3 ಸಾವಿರ ನೀಡಿ ಬ್ಯಾಂಕ್‌ ಖಾತೆ ತೆರೆಸುತ್ತಿದ್ದ. ಅಲ್ಲದೆ ಅವರ ಹೆಸರಿನಲ್ಲಿ ಸಿಮ್‌ ಕಾರ್ಡ್‌ಗಳನ್ನು ಖರೀದಿಸಿ ಆಫ್ರಿಕಾ ಮೂಲದ ಸೈಬರ್‌ ವಂಚಕರಿಗೆ ರವಾನಿಸುತ್ತಿದ್ದ. ಹೀಗೆ ತಲಾ 1 ಬ್ಯಾಂಕ್‌ ಖಾತೆ ಹಾಗೂ ಸಿಮ್‌ ಕಾರ್ಡ್‌ಗೆ ಮೋನಿಗೆ ಆಫ್ರಿಕಾ ಪ್ರಜೆ .15 ಸಾವಿರ ಕೊಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಈ ದಂಧೆಯನ್ನೇ ವೃತ್ತಿಯಾಗಿಸಿಕೊಂಡ ಮೋನಿ, ಬುಡಕಟ್ಟು ಜನರಿಗೆ ಹಣ ಆಮಿಷವೊಡ್ಡಿ ಆಧಾರ್‌, ಪಾನ್‌, ಫೋಟೋ ಪಡೆದು ಬ್ಯಾಂಕ್‌ನಲ್ಲಿ ಖಾತೆ ತೆರೆದು ಡೆಬಿಟ್‌ ಕಾರ್ಡ್‌ ಪಡೆಯುತ್ತಿದ್ದ. ಇದಾದ ಮೇಲೆ ಅದೇ ದಾಖಲೆ ಬಳಸಿಕೊಂಡು ಹೊಸ ಸಿಮ್‌ ಕಾರ್ಡ್‌ ಖರೀದಿಸಿ ಆಕ್ಟೀವ್‌ ಮಾಡಿಕೊಳ್ಳುತ್ತಿದ್ದ. ಡೆಬಿಟ್‌ ಕಾರ್ಡ್‌ ಮತ್ತು ಸಿಮ್‌ಅನ್ನು ಕೋರಿಯರ್‌ ಮೂಲಕ ಬೆಂಗಳೂರು ಸೇರಿದಂತೆ ವಿವಿಧೆಡೆ ನೆಲೆಸಿರುವ ಆಫ್ರಿಕಾ ಮೂಲದ ಸೈಬರ್‌ ಕಳ್ಳರಿಗೆ ರವಾನಿಸುತ್ತಿದ್ದ. ಈ ಸಿಮ್‌ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ಬಳಸಿಕೊಂಡ ಅವರು, ಜನರಿಗೆ ಉಡುಗೊರೆ ಹಾಗೂ ಸಾಲ ನೆಪದಲ್ಲಿ ಮೋಸ ಕೃತ್ಯಗಳಿಗೆ ಬಳಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಸಾವಿರಾರು ಕಿಮೀ ಕ್ರಮಿಸಿ ಕಳ್ಳರ ಹೆಡೆಮುರಿ ಕಟ್ಟಿದ ಉಡುಪಿ ಪೊಲೀಸ್‌..!

ಸಿಮ್‌ ಕಾರ್ಡ್‌ಗಳನ್ನು ಜನರಿಗೆ ಕರೆ ಮಾಡಲು ಹಾಗೂ ವಂಚನೆ ಎಸಗಿದ ಬಳಿಕ ಹಣ ವರ್ಗಾವಣೆಗೆ ಬುಡಕಟ್ಟು ಜನರ ಬ್ಯಾಂಕ್‌ ಖಾತೆಗಳನ್ನು ಸೈಬರ್‌ ವಂಚಕರು ಉಪಯೋಗಿಸುತ್ತಿದ್ದರು. ಹಣ ವರ್ಗಾವಣೆ ಬಳಿಕ ಎಟಿಎಂ ಕಾರ್ಡ್‌ ಬಳಸಿ ಡ್ರಾ ಮಾಡುತ್ತಿದ್ದರು. ಹೀಗಾಗಿ ಸೈಬರ್‌ ವಂಚನೆ ಕೃತ್ಯಗಳಲ್ಲಿ ಬ್ಯಾಂಕ್‌ ಖಾತೆಗಳ ವಿವರ ಪಡೆದಾಗ ಬಡುಕಟ್ಟು ವಾಸಿಗಳ ಹೆಸರು ಪತ್ತೆಯಾಗುತ್ತಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಮ್‌ಗಳು ಸೋಪ್‌ ಬಾಕ್ಸ್‌ನಲ್ಲಿ ರವಾನೆ

ಎಟಿಎಂ ಕಾರ್ಡ್‌ ಹಾಗೂ ಸಿಮ್‌ ಕಾರ್ಡ್‌ಗಳನ್ನು ಸೋಪ್‌ ಬಾಕ್ಸ್‌ನಲ್ಲಿ ಅಡಗಿಸಿಟ್ಟು ಆರೋಪಿ ಮೋನಿ ಕಳುಹಿಸುತ್ತಿದ್ದ. ಒಂದು ವರ್ಷದಿಂದ ಈ ದಂಧೆಯನ್ನು ಮೋನಿ ನಡೆಸಿದ್ದು, ಸುಮಾರು 50 ಸಿಮ್‌ ಹಾಗೂ ಎಟಿಎಂ ಕಾರ್ಡ್‌ಗಳನ್ನು ಆತ ಪೂರೈಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.